'ಆರೆಸ್ಸೆಸ್ನಿಂದ ಶಾಂತಿ ಕದಡುವ ಯತ್ನ'
ಮೈಸೂರು: ರಾಜ್ಯದ ಏಕೈಕ ಆರ್ಎಸ್ಎಸ್ ಅಭ್ಯರ್ಥಿ ಗೆಲ್ಲಿಸಲು ಏ. 1ರ ನಂತರ ಸಂಘ ಪರಿವಾರದ ಪಡೆ ಮೈಸೂರಿಗೆ ಬಂದು ಶಾಂತಿ ಸುವ್ಯವಸ್ಥೆ ಕೆಡಿಸುವ ಸಾಧ್ಯತೆ ಇದೆ ಎಂದು ಸಂಸದ ಎಚ್. ವಿಶ್ವನಾಥ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ 'ನೇರ ನುಡಿ ದಿಟ್ಟ ಹೆಜ್ಜೆ' ಹೆಸರಿನ ಸಾಧನ ಪಟ್ಟಿ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಕ್ಷೇತ್ರಗಳ ಪೈಕಿ ಆರ್ಎಸ್ಎಸ್ ಅಭ್ಯರ್ಥಿ ಇರುವ ಕ್ಷೇತ್ರ ಮೈಸೂರು ಮಾತ್ರ. ಇಲ್ಲಿನ ಅಭ್ಯರ್ಥಿ ಗೆಲ್ಲಿಸಲು ಏ. 1ರ ನಂತರ ಆರ್ಎಸ್ಎಸ್ ಪಡೆ ಮೈಸೂರಿಗೆ ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿದೆ. ಇಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಸಾಧ್ಯತೆ ಇದೆ. ಚುನಾವಣಾ ನೀತಿ ಸಂಹಿತೆಯ ಪ್ರಕಾರ ಕ್ಷೇತ್ರದ ಹೊರಗಿನ ವ್ಯಕ್ತಿಗಳು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುವಂತಿಲ್ಲ. ಆದ್ದರಿಂದ ಈ ಬಗ್ಗೆ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆಯುವುದಾಗಿ ತಿಳಿಸಿದರು.
ಬಿಜೆಪಿಗೆ ಮೂರನೇ ಸ್ಥಾನ: ಚುನಾವಣಾ ಮತಯಂತ್ರದಲ್ಲಿ ಮೊದಲು ನನ್ನ ಹೆಸರು, ನಂತರ ಜೆಡಿಎಸ್ನ ಚಂದ್ರಶೇಖರಯ್ಯ ಅವರ ಹೆಸರು ಮತ್ತು ಆ ನಂತರ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹೆಸರು ಇದೆ. ಬಹುಶಃ ಚುನಾವಣೆ ಫಲಿತಾಂಶವೂ ಹಾಗೆಯೇ ಬರಲಿದೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳಲ್ಪಡುತ್ತದೆ. ಇದುವರೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿಶ್ವನಾಥ್ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗೆ ಮಧ್ಯಾಹ್ನದ ವೇಳೆ ಭೇಟಿ ನೀಡಿದರೆ ವಿಶ್ವನಾಥ್ ಸಾಧನೆ ಏನು ಎಂಬುದು ತಿಳಿಯುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್ ಸರ್ಕಾರಿ ಕಚೇರಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಬಹಳ ಮಾತನಾಡುವ ಗೋ. ಮಧುಸೂದನ್ ಎಷ್ಟು ಪ್ರಾಮಾಣಿಕರು ಎಂಬುದು ಕಳೆದ ರಾತ್ರಿ ತಿಳಿದಿದೆ. ಕಳೆದ 60 ವರ್ಷಗಳಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಮೋದಿ ಹೇಳಿಕೆ ಹಸಿ ಸುಳ್ಳಿನಿಂದ ಕೂಡಿದೆ. ರಾಜ್ಯದ ಪ್ರತಿಯೊಬ್ಬ ಬಿಜೆಪಿ ಮುಖಂಡರು ಗುಜರಾತ್ ನೋಡಿ ಹೇಗೆ ಅಭಿವೃದ್ಧಿ ಆಗಿದೆ ಎನ್ನುತ್ತಾರೆ. ನಿಮಗೆ ಸಿಕ್ಕ ಐದು ವರ್ಷದಲ್ಲಿ ನೀವೇನು ಮಾಡಿದಿರಿ?ಎಂದು ಪ್ರಶ್ನಿಸಿದರು.
ಶಾಸಕರಾದ ಎಂ.ಕೆ. ಸೋಮಶೇಖರ್, ತನ್ವೀರ್ಸೇಠ್, ಮಾಜಿ ಶಾಸಕ ಎಂ. ಸತ್ಯನಾರಾಯಣ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ. ದಾಸೇಗೌಡ, ಮುಖಂಡರಾದ ಎಚ್.ಎ. ವೆಂಕಟೇಶ್, ಎಂ. ಲಕ್ಷ್ಮಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

