ಮೂರು ಉಗ್ರಾಣಕ್ಕೆ ಸಹಕಾರ ಸಚಿವರ ಭೇಟಿ
ಕ.ಪ್ರ.ವಾರ್ತೆ ಮೈಸೂರು ಮೇ 1
ಸಹಕಾರ ಸಚಿವ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಎಸ್. ಮಹದೇವಪ್ರಸಾದ್ ಅವರು ನಗರದಲ್ಲಿರುವ ಮೂರು ಉಗ್ರಾಣಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಬಂಬೂ ಬಜಾರ್ನಲ್ಲಿರುವ ರಾಜ್ಯ ಉಗ್ರಾಣ ಘಟಕ- 1, ಬಂಡಿಪಾಳ್ಯ ಎಪಿಎಂಸಿ ಯಾರ್ಡ್ನಲ್ಲಿರುವ ಘಟಕ- 2 ಹಾಗೂ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಘಟಕ- 3 ಕೇಂದ್ರಗಳಿಗೆ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. 50 ವರ್ಷಗಳ ಹಳೆಯದಾದ ಬಂಬೂ ಬಜಾರ್ ಉಗ್ರಾಣವು ನಗರದ ಹೃದಯ ಭಾಗದಲ್ಲಿದೆ. ಈ ಉಗ್ರಾಣಕ್ಕೆ ಹೊಸ ಆಯಾಮ ಕಲ್ಪಿಸುವ ಬಗ್ಗೆ ರೂಪುರೇಷೆ ತಯಾರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಬಂಡಿಪಾಳ್ಯದ ಉಗ್ರಾಣದ ಭೇಟಿ ವೇಳೆ ಕಾರ್ಮಿಕರ ಕುಂದುಕೊರತೆ ಬಗ್ಗೆ ಚರ್ಚಿಸಿದರು. ಹೆಬ್ಬಾಳು ಉಗ್ರಾಣದಲ್ಲಿ ಪಡಿತರ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಸ್ಥಳಾವಕಾಶ ಒದಗಿಸಲು ಸಚಿವರು ಸೂಚಿಸಿದರು.
ಉಗ್ರಾಣ ನಿಗಮವು ರಾಜ್ಯದ 133 ಕೇಂದ್ರಗಳಲ್ಲಿ 10 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಹಾಗೂ 6.5 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಬಾಡಿಗೆ ಗೋದಾಮು ಹೊಂದಿದೆ. ಒಟ್ಟು 16.5 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳಲ್ಲಿ ರೈತರಿಗಾಗಿ ರಸಗೊಬ್ಬರ, ಸಾರ್ವಜನಿಕರ ಪಡಿತರ ಯೋಜನೆಯಡಿ ವಿತರಣೆ ಆಹಾರಧಾನ್ಯಗಳು ಹಾಗೂ ಸರ್ಕಾರದ ಬೆಂಬಲ ಯೋಜನೆಯಲ್ಲಿ ಖರೀದಿಸಿದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲಾಗಿದೆ.
ಈ ಸಾಲಿನಲ್ಲಿ ನಿಗಮವು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ 503 ಕೋಟಿ ಮೌಲ್ಯದ ಮೆಕ್ಕೆಜೋಳ ಮತ್ತು ಬತ್ತವನ್ನು ಖರೀದಿಸುವ ಮೂಲಕ ನಿಗಮವು ರೈತರ ನೆರವಿಗೆ ಧಾವಿಸಿದೆ. ಉಳಿದ ಜಿಲ್ಲೆಗಳಲ್ಲಿ ಸರ್ಕಾರದ ವಿವಿಧ ಏಜೆನ್ಸಿಗಳ ಮೂಲಕ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ರಾಗಿ, ಬಿಳಿಜೋಳ, ಬತ್ತ, ಮೆಕ್ಕೆಜೋಳ, ಕೊಬ್ಬರಿ, ಶೇಂಗಾ, ಸೂರ್ಯಕಾಂತಿ, ತೊಗರಿ, ಕಡಲೆ ಮತ್ತು ಲೆವಿ ಅಕ್ಕಿಯನ್ನು ಸಂಗ್ರಹಿಸಲು ಸ್ಥಳಾವಕಾಶ ಒದಗಿಸಲಾಗಿದೆ ಎಂದು ಉಗ್ರಾಣ ನಿಗಮದ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ರಾಜ್ಯ ಉಗ್ರಾಣ ನಿಗಮದ ಪ್ರಧಾನ ವ್ಯವಸ್ಥಾಪಕ ಜಿ.ಎಚ್.ರಮೇಶ್, ಎಂಜಿನಿಯರ್ ಮಲ್ಲಿಕಾರ್ಜುನ ಅಲ್ಲಿಪುರ್, ಪ್ರಾದೇಶಿಕ ವ್ಯವಸ್ಥಾಪಕ ಸಿದ್ದಮಹಾದೇವಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

