ಮೈಸೂರು

ಧರ್ಮದ ಬೇರುಗಳಲ್ಲಿ ವಿಜ್ಞಾನ ಅಡಗಿದೆ

Published On :

ಕ.ಪ್ರ.ವಾರ್ತೆ  ಹುಣಸೂರು  ಮೇ 1
ದಿನನಿತ್ಯದ ಜೀವನದಲ್ಲಿ ಕಷ್ಟಕಾಲದಲ್ಲಿರುವವರಿಗೆ ಸ್ಪಂದಿಸುವ, ಇತರರ ನೋವನ್ನು ತಮ್ಮ ನೋವೆಂದು ತಿಳಿದುಕೊಳ್ಳುವ ಹಾಗೂ ಪರಿಹರಿಸುವ ಮೂಲಕ ಪರಮಾತ್ಮನನ್ನು ಕಾಣಬಹುದೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬಿಳಿಕೆರೆ ಹೋಬಳಿಯ ಬೋಳನಹಳ್ಳಿಯಲ್ಲಿ ಶ್ರೀ ಮಲೈ ಮಹದೇಶ್ವರ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘದ ಬೆಳ್ಳಿಹಬ್ಬದ ಅಂಗವಾಗಿ  ನಿರ್ಮಿಸಿರುವ ಶ್ರೀ ಮಾತೆ ಮಾಳಿಗೇಶ್ವರಿ, ಸಪ್ತ ಮಾತೃಕಾ ಹಾಗೂ ಮಹಾಗಣಪತಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮದ ಬೇರುಗಳಲ್ಲಿ ವಿಜ್ಞಾನ ಅಡಗಿದೆ. ಕಣ್ಣಿಗೆ ಕಾಣದ ಬೇರುಗಳ ರೀತಿ ನಮ್ಮ ವೃತ್ತಿಗಳಲ್ಲಿ ದೇವರನ್ನು ಕಾಣಬಹುದು. ಕಣ್ಣಿಗೆ ಕಾಣದ ಬೇರುಗಳಿಂದಲೇ ಮರವೊಂದು ಜೀವಂತವಾಗಿರುತ್ತದೆ. ಅದೇ ಬೇರುಗಳ ರೀತಿಯಲ್ಲಿ ನಾವು ಕೆಲಸ ಮಾಡಿದಾಗ ಅಗೋಚರ ಶಕ್ತಿ ಎಂಬ ದೇವರನ್ನು ಕಾಣಬಹುದು. ನಗು- ನಲಿವಿನ ಸಂತೋಷ, ನೆಮ್ಮದಿಯ ಜೀವನ ಕಾಣಲು, ಭಗವಂತನಿಗೆ ತೃಪ್ತಿತರುವ ರೀತಿಯಲ್ಲಿ ಸ್ಪಂದಿಸಬೇಕು ಎಂದರು.
ಪುಣ್ಯದ ಕೆಲಸ: ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಾಧೀಶರಾದ ಎಚ್. ಬಿಲ್ಲಪ್ಪ ಮಾತನಾಡಿ, ದೇವಸ್ಥಾನ ಕಟ್ಟುವುದು, ಆ ನೆಪದಲ್ಲಿ ಸರಳ ವಿವಾಹ ನಡೆಸುವುದು ಧರ್ಮಾಧಿಕಾರಿಗಳು ಹಾಗೂ ಗಣ್ಯರನ್ನು ಕರೆಸಿ ಒಳ್ಳೆ ಮಾತುಗಳನ್ನು ಕೇಳಿಸುವುದು ನಿಜಕ್ಕೂ ಪುಣ್ಯದ ಕೆಲಸ. ಜ್ಞಾನದ ಸಂಪತ್ತಿಗಿಂತ ಮಿಗಿಲಾದುದು ಯಾವುದು ಇಲ್ಲ. ಈ ಟ್ರಸ್ಟ್ ಆಧ್ಯಾತ್ಮಿಕದ ಜೊತೆಗೆ ಜನಪರ ಕೆಲಸ ಮಾಡಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾ.ಎ.ಜೆ. ಸದಾಶಿವ ಮಾತನಾಡಿ, ಗ್ರಾಮಗಳಲ್ಲಿ ಬರಿ ತಾಳಿ, ಸೀರೆ, ಕುಪ್ಪಸ, ಧೋತಿ, ಊಟ ಹಾಕಿಸಿ ಸರಳ ವಿವಾಹ ಮಾಡಿಸಿದರೇ ಸಾಲದು. ಅವರು ಬದುಕನ್ನು ಕಂಡುಕೊಳ್ಳುವ ಮಾರ್ಗ, ನೆರವು ನೀಡಿ ಅವರ ಬದುಕನ್ನು ಸಹನೀಯವಾಗಿಸಬೇಕು ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ, ಕಾಗಿನೆಲೆಯ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಮೈಸೂರು ವಿವಿಯ ಕುಲಪತಿ ಕೆ.ಎಸ್. ರಂಗಪ್ಪ, ನಿವೃತ್ತ ನ್ಯಾ. ಚಂದ್ರಶೇಖರಯ್ಯ, ಡಿ.ಮಾದೇಗೌಡ, ಎಂ. ಸತ್ಯನಾರಾಯಣ್, ಬಿ.ಎಸ್. ನಾಗರಾಜ್, ಶ್ಯಾಮ್‌ಭಟ್, ಸಿದ್ದರಾಮೇಗೌಡ, ತಡೇರಿ ರಾಮಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಲಾರಿ ಸೋಮೇಗೌಡ, ವಕೀಲ ಬಿ.ಎಸ್. ಯೋಗಾನಂದಕುಮಾರ್ ಇದ್ದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.