ಪ್ರಯಾಣ ದರ ಏರಿಕೆ: ಬಿಜೆಪಿ ರಸ್ತೆತಡೆ
ಮೈಸೂರು: ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ಚೌಕದಲ್ಲಿ ಸೋಮವಾರ ರಸ್ತೆತಡೆ ನಡೆಸುವ ಮೂಲಕ ಪ್ರತಿಭಟಿಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಸ್ ಪ್ರಯಾಣ ದರ ಏರಿಸುವ ಮೂಲಕ ರಾಜ್ಯದ ಜನತೆಗೆ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಕೇಂದ್ರ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಗಳಿಂದ ದಿನನಿತ್ಯದ ವಸ್ತುಗಳು ಬೆಲೆ ಹೆಚ್ಚಾಗಿದೆ. ಬಸ್ ಪ್ರಯಾಣ ದರ ಏರಿಕೆಗೆ ಡೀಸೆಲ್ ಬೆಲೆ ಏರಿಕೆ ಕಾರಣ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, ಸಾರ್ವಜನಿಕ ಸಾರಿಗೆಗೆ ಡೀಸೆಲ್ ಸಬ್ಸಿಡಿ ದರದಲ್ಲಿ ನೀಡಬೇಕೆಂದು ಒತ್ತಡ ಮಾತ್ರ ಹೇರುತ್ತಿಲ್ಲ ಎಂದು ದೂರಿದರು.
ಸಾರಿಗೆ ಇಲಾಖೆಯಲ್ಲಿ ಆಗುತ್ತಿರುವ ಸೋರಿಕೆ, ಡೀಸೆಲ್ ಖರೀದಿಗೆ ಅಗತ್ಯವಾದ ಸರಳ ಕ್ರಮಗಳ ಬಗ್ಗೆ ಸರ್ಕಾರ ಯೋಚಿಸದೇ ಬಸ್ ಪ್ರಯಾಣ ದರ ಏರಿಸಿರುವುದು ಖಂಡನಿಯ. ಕೂಡಲೇ ಏರಿಸಿರುವ ಬಸ್ ಪ್ರಯಾಣ ದರ ಇಳಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಭಯೋತ್ಪಾದಕರ ಕೃತ್ಯ ಹೆಚ್ಚಾಗಿವೆ. ದಕ್ಷಿಣ ಭಾರತದಲ್ಲಿ ಉಗ್ರರು ಸಂಚು ರೂಪಿಸಿದ್ದಾರೆ. ಭಯೋತ್ಪಾದನಾ ಕೃತ್ಯಗಳಿಗೆ ಕಾರಣರಾದವರ ಮೇಲೆ ಕೇಂದ್ರ ಸರ್ಕಾರವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕರಾವಳಿ ಪ್ರದೇಶ ಹಾಗೂ ರಾಜ್ಯದೊಳಗೆ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎತ್ತಿನ ಗಾಡಿ ಪ್ರಯಾಣ: ಇದೇ ವೇಳೆ ನಗರಪಾಲಿಕೆ ಸದಸ್ಯರಾದ ಮ.ವಿ. ರಾಮಪ್ರಸಾದ್, ಶಿವಕುಮಾರ್, ಎಂ.ಕೆ. ಶಂಕರ್, ಮಹದೇವಮ್ಮ, ಬಿ.ವಿ. ಮಂಜುನಾಥ್, ಜಗದೀಶ್ ಮೊದಲಾದವರು ಗಾಂಧಿ ಚೌಕಕ್ಕೆ ಎತ್ತಿನಗಾಡಿಯಲ್ಲಿ ಬರುವ ಮೂಲಕ ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿದರು. ಅಲ್ಲದೆ, ಬಸ್ ಪ್ರಯಾಣ ಬಿಡಿ, ಎತ್ತಿನ ಗಾಡಿ ಪ್ರಯಾಣ ಆರಂಭಿಸಿ ಎಂದು ಪಾಲಿಕೆ ಸದಸ್ಯರು ಕರೆ ನೀಡಿದರು. ಬಿಜೆಪಿ ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್, ಮೃಗಾಲಯ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ವಸ್ತುಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಡಿ. ಮಹೇಂದ್ರ, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ಮುಖಂಡರಾದ ಯಶಸ್ವಿನಿ ಸೋಮಶೇಖರ್, ಸೋಮಸುಂದರ್, ಮೈ.ಕಾ. ಪ್ರೇಮ್ಕುಮಾರ್, ಮಲ್ಲಪ್ಪಗೌಡ, ಕಾಶಿವಿಶ್ವನಾಥಶೆಟ್ಟಿ ಜಗದೀಶ್, ಡಿ.ಎಸ್. ಶಿಂಧೆ, ಜೋಗಿ ಮಂಜು ಇದ್ದರು.
ಮೈಸೂರು ಕನ್ನಡ ವೇದಿಕೆ ಆಕ್ರೋಶ
ಮೈಸೂರು: ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಮೈಸೂರು ಕನ್ನಡ ವೇದಿಕೆಯವರು ನಗರ ಬಸ್ ನಿಲ್ದಾಣ (ಸಿಬಿಎಸ್) ಎದುರು ಸೋಮವಾರ ಪ್ರತಿಭಟಿಸಿದರು. ನಮ್ಮದು ಜನಪರ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಬರುವ ಮುನ್ನವೇ ಬಸ್ ಪ್ರಯಾಣ ದರ ಏರಿಸಿದೆ. ಇದರಿಂದ ಗ್ರಾಮೀಣ ಜನರು ಕಂಗಾಲಾಗಿದ್ದಾರೆ. ಪ್ರಯಾಣ ದರ ಏರಿಕೆಯಿಂದ ಮಧ್ಯಮ, ಬಡವರ ಬೆನ್ನಿಗೆ ಸರ್ಕಾರ ಚೂರಿ ಹಾಕಿದೆ. ಇದು ರಾಜ್ಯ ಸರ್ಕಾರದ ಜನವಿರೋಧಿ ನೀತಿ. ಕೂಡಲೇ ಬಸ್ ಪ್ರಯಾಣ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು. ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಸುರೇಶಬಾಬು, ಗೋಪಿ, ಗುರು, ಬೋಗಾದಿ ಸಿದ್ದೇಗೌಡ, ಅರವಿಂದಶರ್ಮ, ಸುನಿಲ್ಕುಮಾರ್, ಭಾನುಮೋಹನ್, ಕುಮಾರ್, ನಾಗರಾಜು, ಎಚ್.ಎಸ್.ಆರ್. ಪ್ರಕಾಶ್, ಅರವಿಂದ್, ಚಂದ್ರ, ಮಹದೇವಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

