ಸಾಗುವಳಿ ಭೂಮಿ ಸ್ವಾಧೀನ ನಿಯಮಬಾಹಿರ
ಮೈಸೂರು: ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಭೂಮಿಯನ್ನು ಕಸಿದುಕೊಳ್ಳುವುದು ನಿಯಮಬಾಹಿರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಎನ್.ನಂಜೇಗೌಡ ಹೇಳಿದರು. ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮಕ್ಕೆ ಸೇರಿದ ಸರ್ವೆ ನಂ.14ರ ಪೈಕಿ 4 ಎಕರೆ ಜಮೀನಿನಲ್ಲಿ ಅದೇ ಗ್ರಾಮದ ವಾಸಿ ಲೇ. ಬೆಟ್ಟದಬೀಡು ಮಂಚನಾಯಕ ಎಂಬವರ ಪತ್ನಿ ಮಾಳಿಗಮ್ಮ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಅವರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಅನ್ಯಾಯ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ 53 ವರ್ಷಗಳಿಂದ ಇದೇ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದರೂ, ಈ ಜಾಗವನ್ನು ನಿವೇಶನ ನಿರ್ಮಿಸಲು ಸರ್ಕಾರ ಸ್ವಾಧೀನಕ್ಕೆ ಕೊಡಬೇಕೆಂದು ಆದೇಶಿಸಿರುವುದು ಅವರ ಮೂಲ ಹಕ್ಕನ್ನು ಕಸಿಯುವಂತೆ ಮಾಡಿದೆ. ಆದ್ದರಿಂದ ಸರ್ಕಾರ ಈ ಭೂಮಿಯನ್ನು ಮಾಳಿಗಮ್ಮ ಅವರಿಗೆ ಉಳಿಸಿ ಅವರ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಕಂದಾಯ ಅಧಿಕಾರಿಗಳು ಭೂಮಿ ವಶಪಡಿಸಿಕೊಳ್ಳುವ ಸಂಬಂಧ ಕಿರುಕುಳ ಪ್ರಾರಂಭಿಸಿದಾಗ ತನ್ನ ಭೂಮಿಯ ರಕ್ಷಣೆಗಾಗಿ ಮಾಳಿಗಮ್ಮ ಮೈಸೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಹೀಗಿದ್ದರೂ ಕೆಲವು ಪ್ರಭಾವಿ ವ್ಯಕ್ತಿಗಳು ಹಾಗೂ ರೈತರ ಮುಖಂಡರು ಸೇರಿ ಅವರಿಗೆ ಪ್ರಾಣ ಬೆದಿರಿಕೆ ಒಡ್ಡುತ್ತಿದ್ದಾರೆ. ಆದ್ದರಿಂದ ಮಾಳಿಗಮ್ಮ ಕುಟುಂಬದವರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಜೋಗನಹಳ್ಳಿ ಗುರುಮೂರ್ತಿ, ಪಾಪೇಗೌಡ, ಪಾಪು ಇದ್ದರು.
ಸಭೆ ನಾಳೆ
ಮೈಸೂರು: ಕರ್ನಾಟಕ ರಾಜ್ಯ ಉಪ್ಪಾರ ಯುವ ವೇದಿಕೆಯು ಮೇ 10ರ ಬೆಳಗ್ಗೆ 11ಕ್ಕೆ ಸರಸ್ವತಿಪುರಂನ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಘಟಕದ ಸಭೆ ಕರೆದಿದೆ. ಸಭೆಯಲ್ಲಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಆದ್ದರಿಂದ ಜನಾಂಗದ ಯುವ ಬಂಧುಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ. ಮೊ. 9886673430 ಸಂಪರ್ಕಿಸಿ.
ಸೈಕಲ್ ಯಾನ
ಮೈಸೂರು: ಮೈಸೂರು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಗಂಗೋತ್ರಿ ಘಟಕದ ರಜತ ಮಹೋತ್ಸವ ಅಂಗವಾಗಿ ಸೈಕಲ್ ಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಜಯಪುರ ಹೋಬಳಿ ಬರಡನಪುರ ಗ್ರಾಮದ ಕಾನನ ಸಾವಯವ ಕೃಷಿ ತೋಟಕ್ಕೆ ಮೇ 10ರ ಸಂಜೆ ತೆರಳಿ ಮೇ 11ಕ್ಕೆ ಹಿಂದಿರುಗಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು ಮೊ. 9880244649 ಸಂಪರ್ಕಿಸಬಹುದು.
ಅಭಿನಂದನೆ
ಮೈಸೂರು: ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮೇ 10ರ ಬೆಳಗ್ಗೆ 11.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಪದ್ಮಭೂಷಣ ಡಾ.ಎಂ.ಮಹದೇವಪ್ಪ ಅವರಿಗೆ ಅಭಿನಂದನೆ ಮತ್ತು ಸ್ನಾತಕೋತ್ತರ ಸಾಂಸ್ಕೃತಿಕ ವೇದಿಕೆ ಸಮಾರೋಪ ಸಮಾರಂಭ ನಡೆಯಲಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ನೀಡುವರು. ಡಾ.ಎಂ.ಮಹದೇವಪ್ಪ ಮಾತನಾಡುವರು. ಪ್ರೊ.ಟಿ.ಡಿ. ಸುಬ್ಬಣ್ಣ ಅಧ್ಯಕ್ಷತೆ ವಹಿಸುವರು.
ಕಾರ್ಯಾಗಾರ
ನಗರದ ಜಯಲಕ್ಷ್ಮೀಪುರಂನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಹಾಗೂ ಮೈಸೂರು ವಿವಿ ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ವೇದಿಕೆ ವತಿಯಿಂದ ಮೇ 10ರ ಬೆಳಗ್ಗೆ 10ಕ್ಕೆ ಎವಿಸಿ-2ರಲ್ಲಿ ಒಂದು ದಿನದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ನಡೆಯಲಿದೆ. ಆರ್.ವಾಸುದೇವಮೂರ್ತಿ ಉದ್ಘಾಟಿಸುವರು. ಡಾ.ಬಿ.ಎಸ್. ಶ್ರೀಕಂಠ ಅಧ್ಯಕ್ಷತೆ ವಹಿಸುವರು.
ಕಥೆ ಕೇಳೋಣ ಬನ್ನಿ
ಕುವೆಂಪುನಗರದ ಚಿತ್ರಭಾನು ರಸ್ತೆಯಲ್ಲಿರುವ ಕಲಾಸುರುಚಿ ವತಿಯಿಂದ ಮೇ 10ರ ಸಂಜೆ 4.30 ರಿಂದ 5.30ರವರೆಗೆ ಸುರುಚಿ ರಂಗಮನೆಯಲ್ಲಿ ಡಾ.ಎಚ್.ಕೆ. ರಾಮನಾಥ್ ಕಥೆ ಹೇಳುವರು. ಮಾಹಿತಿಗಾಗಿ ದೂ. 2541795, ಮೊ. 9972829130 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

