ಆಕಾಶವಾಣಿಯಲ್ಲಿ ವಚನ ಪದವೈದ್ಯ ಸಂಗೀತ ರೂಪಕ 21ರಿಂದ
ಕ.ಪ್ರ.ವಾರ್ತೆ , ಮೈಸೂರು , ಮೇ 18
ಮೈಸೂರು ಆಕಾಶವಾಣಿ ಮೇ 21 ರಿಂದ 24 ರವರೆಗೆ ಬೆಳಗ್ಗೆ 8.35 ರಿಂದ 9.05 ರವರೆಗೆ ಸಹಾಯಕ ನಿರ್ದೇಶಕಿ ರಾಜಲಕ್ಷ್ಮಿ ಶ್ರೀಧರ ನಿರ್ಮಿಸಿರುವ ಹಾಗೂ ಡಾ.ಆರ್.ಎಸ್. ನಂದಕುಮಾರ್ ಬರೆದು ಪ್ರಸ್ತುತಪಡಿಸಿರುವ ವಚನ ಪದ ವೈದ್ಯ ಸಂಗೀತ ರೂಪಕ ಪ್ರಸಾರ ಮಾಡಲಿದೆ.
ಕರ್ನಾಟಕವು ಭಾರತದ ಸಾಂಸ್ಕೃತಿಕ ಹೆಗ್ಗುರುತಾಗಿ ಅನಾದಿ ಕಾಲದಿಂದಲೂ ಮೆರೆದು ನಿಂತಿದ್ದು, ಇಲ್ಲಿ ಕಲೆಯೆಂದರೆ ಕೇವಲ ಮನರಂಜನೆಗಾಗಿ ಮಾತ್ರ ಇರದೆ, ಅದೊಂದು ಸಾರ್ಥಕವಾದ ಜನಜೀವನ ಪ್ರತಿಬಿಂಬಿಸುವ ಮಾದರಿಯಾಗಿದೆ. ಇದನ್ನು ಆಗು ಮಾಡಿದವರಲ್ಲಿ ವಚನಕಾರರಾದ ಶಿವಶರಣರು, ದೇವರನಾಮ-ಕೃತಿ- ಕೀರ್ತನ ಭಂಡಾರವನ್ನು ನೀಡಿದ ಹರಿದಾಸರು, ಅಸಂಖ್ಯ ತತ್ವಪದಗಳನ್ನು ನೀಡಿದ ತತ್ವಪದಕಾರರು, ಜನನಾಡಿಯನ್ನು ಮೀಟಿಮಿಡಿದ ಜನಪದ ಹಾಗೂ ಬುಡಕಟ್ಟು ಕಲೆಗಾರರು ಮತ್ತು ಸುಖ-ಸದೃಢ ಸಂಸಾರದ ರೂವಾರಿಗಳಾದ ಸಂಪ್ರದಾಯ ಪದಕಾರ್ತಿಯರಾದ ಮಹಾಸಾಧ್ವಿಮಣಿಯರು ಪ್ರಮುಖರು. ಇವೆಲ್ಲವನ್ನೂ ಒಳಗೊಂಡ ಒಂದು ದೊಡ್ಡ ಸಂಗೀತ ಲೋಕವು ಸಂಗೀತ ರೂಪಕದಲ್ಲಿ ತೆರೆದುಕೊಳ್ಳಲಿದೆ.
ಭಾರತೀಯ ಸಂಗೀತವು ಕೇವಲ ಶ್ರವಣರಮ್ಯತೆಗೆ ಮಾತ್ರ ಸೀಮಿತವಾದುದಲ್ಲ. ಜನಜೀವನದ ಎಲ್ಲ ಆಯಾಮಗಳನ್ನೂ ದಾರ್ಶನಿಕರು ಕಂಡು ಬಲ್ಲವರಾಗಿದ್ದರು. ದಾರ್ಶನಿಕರ ಒಳನೋಟವು ಮನುಷ್ಯನ ಆರೋಗ್ಯದ ಬಗೆಗೂ ತಲುಪಿದೆ. ವ್ಯಕ್ತಿಗತವಾದ ಹಾಗೂ ಸಾಮಾಜಿಕ ಆರೋಗ್ಯದ ಒಳಗುಟ್ಟುಗಳನ್ನು ಇವರ ವಚನಪದಗಳಲ್ಲಿ ಕಾಣಬಹುದು. ಇದನ್ನು ಸಂಗೀತ ರೂಪಕದಲ್ಲಿ ಪ್ರಸ್ತುತಪಡಿಸಲಾಗುವುದು.
ವಚನ ಪದಗಳನ್ನು ಒಂದೆಡೆ ಕಲೆಹಾಕಿ, ಪರಿಚಯಾತ್ಮಕವಾಗಿ ಪ್ರಸ್ತುತಪಡಿಸುವ ಈ ಸಂಗೀತ ರೂಪಕವು ಸಮಸಾಮಯಿಕ ಭಾರತೀಯ ಸಂಗೀತದಲ್ಲಿ ಒಂದು ಹೊಸ ಪ್ರಯೋಗ. ಸಂಗೀತವು ಶ್ರವಣರಮ್ಯವೂ ಜನೋಪಯೋಗಿಯೂ ಆಗಿರಬೇಕೆಂಬ ಹಂಬಲದಿಂದ ಈ ಪ್ರಯೋಗ ರೂಪಿಸಲಾಗಿದೆ ಎಂದು ಆಕಾಶವಾಣಿಯ ಸಹಾಯಕ ನಿರ್ದೇಶಕಿ ರಾಜಲಕ್ಷ್ಮಿ ಶ್ರೀಧರ ತಿಳಿಸಿದ್ದಾರೆ. ಅತಿಯಾದ ಜಾಗತೀಕರಣದಿಂದ ನಶಿಸಿಹೋಗುತ್ತಿರುವ ಸಾಂಸ್ಕೃತಿಕ ಸೌರಭವನ್ನು ಯಶಸ್ವಿಯಾಗಿ ಕಾಪಾಡಿ ಮೆರಗುಗೊಳಿಸಿ, ಕೇಳುಗರಲ್ಲಿ ಸೋಜಿಗದ ಕೌತುಕವನ್ನು ಹುಟ್ಟಿಸುವುದರ ಜೊತೆಗೆ ಇವುಗಳನ್ನು ತಾವೂ ಕಲಿತು ಕಾಪಾಡಿರೆಂದು ಕೋರುವ ಜಾಣ್ಮೆಯನ್ನು ಸಂಗೀತ ರೂಪಕದ ಉದ್ದಕ್ಕೂ ಹೆಣೆಯಲಾಗಿದೆ ಎಂದು ತಿಳಿಸಿದ್ದಾರೆ.
ಆಕಾಶವಾಣಿ ಸಂಗೀತ ಸ್ಪರ್ಧೆಗೆ ಅರ್ಜಿ
ಮೈಸೂರು: ಆಕಾಶವಾಣಿಯು ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ರಾಷ್ಟ್ರಮಟ್ಟದ ಆಕಾಶವಾಣಿ ವಾರ್ಷಿಕ ಸಂಗೀತ ಸ್ಪರ್ಧೆ ಆಯೋಜಿಸಿದೆ. ಕರ್ನಾಟಕ ಹಾಗೂ ಹಿಂದೂಸ್ಥಾನಿ ಶೈಲಿಯ ಶಾಸ್ತ್ರೀಯ ಹಾಡುಗಾರಿಕೆ ಮತ್ತು ವಾದ್ಯ ಸಂಗೀತಗಳಲ್ಲಿ ಭಾವಗೀತೆ, ಭಕ್ತಿಸಂಗೀತ, ಜನಪದ ಸಂಗೀತ, ಸಂಗೀತ ಸಂಯೋಜನೆ ಹಾಗೂ ವೃಂದಗಾನ ಪ್ರಕಾರಗಳಲ್ಲಿ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯು 2 ಹಂತಗಳಲ್ಲಿ ನಡೆಯಲಿದೆ. ಪೂರ್ವಭಾವಿ ಸ್ಪರ್ಧೆ ಆ.4 ರಂದು ನಡೆಯಲಿದೆ. ಪ್ರಾಥಮಿಕ ಹಂತದಲ್ಲಿ ಆಯ್ಕೆಯಾದ ಕಲಾವಿದರು ಅಂತಿಮ ಹಂತದ ಸ್ಪರ್ಧೆಯ ಧ್ವನಿಮುದ್ರಣಕ್ಕೆ ಅರ್ಹರಾಗುತ್ತಾರೆ. ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. 2014ರ ಜೂ.30ಕ್ಕೆ ಅನ್ವಯವಾಗುವಂತೆ ಕನಿಷ್ಠ 16, ಗರಿಷ್ಠ 24 ವಯೋವುತಿಯವರು ಅರ್ಜಿ ಸಲ್ಲಿಸಬಹುದು. ಪ್ರವೇಶ ಶುಲ್ಕ 300 ಮೈಸೂರು ಆಕಾಶವಾಣಿ ಕೇಂದ್ರದಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂ.13 ರೊಳಗಾಗಿ ಸಲ್ಲಿಸಬೇಕು. ಯುವವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಸಂಗೀತ ಕಲಾವಿದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಕಾಶವಾಣಿಯ ಲೋಕಲ್ ಆಡಿಷನ್ ಕಮಿಟಿ ಮತ್ತು ಮ್ಯುಸಿಕ್ ಆಡಿಶನ್ ಬೋರ್ಡ್ಗಳ ಮುಖಾಂತರ ಅಂಗೀಕೃತವಾಗಿರುವ ಗ್ರೇಡೆಡ್ ಕಲಾವಿದರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಮೈಸೂರು ಆಕಾಶವಾಣಿ ಉಪ ನಿರ್ದೇಶಕ ಡಾ. ಆನಂದ್ ವಿ. ಪಾಟೀಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

