ಮೈಸೂರು

ಕನ್ನಡ ಜಾಗೃತಿಗೆ ವಿಚಾರ ಸಂಕಿರಣ

Published On :

ಕ.ಪ್ರ.ವಾರ್ತೆ ಮೈಸೂರು ಮೇ 20
ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೇ 31 ರಂದು ನಗರದಲ್ಲಿ ಸಾಹಿತಿ ಡಾ.ದೇಜಗೌ ನೇತೃತ್ವದಲ್ಲಿ ಇಂಗ್ಲಿಷ್ ಗೋ ಬ್ಯಾಕ್ ಹೆಸರಿನಡಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಶಂಕರ ಪಾಟೀಲ್ ಹೇಳಿದರು.
ಸುಪ್ರೀಂ ಕೋರ್ಟ್ ಮಾತೃಭಾಷಾ ವಿರೋಧಿ ತೀರ್ಪು ನೀಡಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಮುಂದಾಗಬೇಕು. ಇಂಗ್ಲಿಷ್ ವ್ಯಾಮೋಹ ಬಿಡಬೇಕು. ಈ ಹಿಂದೆಯೇ ನಾವು ಕುಸ್ಮಾ ವಿರುದ್ಧ ಹೋರಾಟ ನಡೆಸಿದ್ದೆವು. ಈಗ ಕುಸ್ಮಾ ವ್ಯಾಪ್ತಿಯ ಶಾಲೆಯನ್ನು ಮುಚ್ಚಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆ ಮತ್ತು ಕನ್ನಡ ಭಾಷೆ ರಕ್ಷಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಈಗ ಗೋಕಾಕ್ ಮಾದರಿಯಲ್ಲಿ ಇಂಗ್ಲಿಷ್ ಗೋ ಬ್ಯಾಕ್ ಚಳವಳಿ ಆರಂಭಿಸುತ್ತಿದ್ದೇವೆ. ಮೊದಲ ಹಂತವಾಗಿ ಬೆಂಗಳೂರಿನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ದ್ವಿತೀಯ ಹಂತದಲ್ಲಿ ಮೈಸೂರಿನಲ್ಲಿ ಮೇ 31 ರಂದು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ನಂತರ ಬೆಳಗಾವಿ, ಗುಲ್ಬರ್ಗ ಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದರು. ಸರ್ಕಾರವನ್ನು ನಂಬಿ ಕುಳಿತರೆ ಯಾವುದೇ ಪ್ರಯೋಜನ ಆಗದು. ಬೆಂಕಿ ಬಿದ್ದಾಗ ಬಾವಿ ತೋಡು ಎಂಬ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಈಗ ಸಭೆಗಳನ್ನು ನಡೆಸಿದರೆ ಆಗದು. ಅಲ್ಲದೆ ನಮಗೆ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ದೊರಕುತ್ತದೆ ಎಂಬುದು ಕನಸಿನ ಮಾತು. ಆದ್ದರಿಂದ ಈ ಮಣ್ಣಿನ ಋಣಕ್ಕೆ ನಾವು ಬದ್ಧರಾಗಿ ಇರಬೇಕಾದರೆ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಬೇಕು ಎಂದು ಹೇಳಿದರು.
ಉತ್ತರ ವಲಯ ಅಧ್ಯಕ್ಷ ಬಸವರಾಜ ಹೂಗಾರ್, ರಾಜ್ಯ ಉಪಾಧ್ಯಕ್ಷ ನಫಿಉಲ್ಲಾ, ಮೈಸೂರು ಘಟಕದ ಅಧ್ಯಕ್ಷ ಪುರುಷೋತ್ತಮ್, ಸಂಚಾಲಕರಾದ ಗಿರೀಶ್‌ಗೌಡ, ಇರ್ಫಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.