ಕೆಳ ಹಂತದಿಂದ ಠಾಣೆ ಸುಧಾರಣೆ ಅಗತ್ಯ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 22
ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಠಾಣೆಯಂತಹ ಕೆಳ ಹಂತದಿಂದ ಸುಧಾರಣೆ ಆಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪೊಲೀಸ್ ಆಯುಕ್ತರ ನೂತನ ಕಚೇರಿ ಶಂಕುಸ್ಥಾಪನೆ ಸೇರಿದಂತೆ 110 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ 1800 ಕೋಟಿ ವೆಚ್ಚದಲ್ಲಿ 11 ಸಾವಿರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. 8500 ಪೊಲೀಸರ ನೇಮಕಾತಿ ಸಹ ಆರಂಭವಾಗಿದೆ. ಇಲಾಖೆಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದ್ದು, ಕಣ್ಣಿಗೆ ಕಾಣುವಂತಹ ಬದಲಾವಣೆ ಪೊಲೀಸ್ ಇಲಾಖೆಯಲ್ಲಿ ಆಗಬೇಕಿದೆ. ಜೊತೆಗೆ ಜನರಿಗೆ ಸೂಕ್ತ ರಕ್ಷಣೆ ಸಿಗಬೇಕಿದೆ ಎಂದು ತಿಳಿಸಿದರು.
ರೌಡಿಗಳು, ಡಕಾಯಿತರು, ಸರ ಅಪಹರಣಕಾರರು ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಕಡಿವಾಣ ಹಾಕಬೇಕು. ಕೋಮು ಸಾಮರಸ್ಯ ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಅಪರಾಧ ಕೃತ್ಯ ಎಸಗುವವರ ಮೇಲೆ ನಿಗಾ ಇರಿಸಿ, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜನಸಂಖ್ಯೆ ಬೆಳೆದಂತೆ ಅಪರಾಧ ಹೆಚ್ಚಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಇಲಾಖೆಯು ಸಜ್ಜಾಗಬೇಕು. ಇದಕ್ಕೆ ಅಗತ್ಯ ಸೌಲಭ್ಯವನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಜನರ ನಿರೀಕ್ಷೆಗಳನ್ನು ಪೊಲೀಸರು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬರ ಮಾನ, ಪ್ರಾಣ, ಆಸ್ತಿ ರಕ್ಷಣೆ ಆಗಬೇಕು. ಇದಕ್ಕಾಗಿಯೇ ಸರ್ಕಾರವು ನೂರಾರು ಕೋಟಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು.
ಮೈಸೂರು ಪ್ರವಾಸಿ ಕೇಂದ್ರವಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣ ಅವಶ್ಯ. ಪೊಲೀಸರು ಅಪರಾಧ ನಿಯಂತ್ರಣದ ಜೊತೆಗೆ ಸಂಚಾರ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪೊಲೀಸರ ಹೊಸ ಚಿಂತನೆಗಳಿಗೆ ಸ್ವಾಗತ. ಆದರೆ, ಎಲ್ಲ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದರು.
ಪೊಲೀಸರು ರಕ್ಷಣೆ ಜೊತೆಗೆ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಅಂತರ ಇರಬಾರದು. ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಯಾರು ಏನು ಮಾಡುತ್ತಾರೆ, ಯಾರು ಅಪರಾಧ ಚಟುವಟಿಕೆಗಳಲ್ಲಿ ತೊಡುಗುತ್ತಾರೆ ಎಂಬುದು ಆಯಾ ಠಾಣೆಯ ಇನ್ಸ್ಪೆಕ್ಟರ್, ಎಸ್ಐ ಮತ್ತು ಸಿಬ್ಬಂದಿಗೆ ಗೊತ್ತಿರುತ್ತದೆ. ಅಂತಹವರ ಮೇಲೆ ನಿಗಾ ಇರಿಸಿದರೆ ಅಪರಾಧ ನಿಯಂತ್ರಿಸಬಹುದು. ಅಪರಾಧ ಮಾಡಿದವರೂ ಇಂತಹವರೇ ಎಂಬುದು ಗೊತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳದಿದ್ದಾಗ ಸಾರ್ವಜನಿಕರು ಅನುಮಾನದಿಂದ ನೋಡುತ್ತಾರೆ. ಪೊಲೀಸರನ್ನು ಸಾರ್ವಜನಿಕರು ಅನುಮಾನದಿಂದ ನೋಡದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ದಂಡ ಬೇಡ: ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿವುದು ಬೇಡ. ಇದರಿಂದ ಸರ್ಕಾರಕ್ಕೂ ಅಷ್ಟೇನೂ ಆದಾಯ ಬರುವುದಿಲ್ಲ. ದಂಡದ ಬದಲಿಗೆ ತಪ್ಪು ಮಾಡಿದವರಿಗೆ 1 ವಾರ ಅರಿವು ಮೂಡಿಸುವ ತರಬೇತಿ ನೀಡಬೇಕು. ವಾರಗಟ್ಟಲೇ ತರಬೇತಿ ಪಡೆಯಬೇಕಲ್ಲ ಎಂಬ ಸಂಕಟಕ್ಕಾದರೂ ನಿಯಮ ಪಾಲಿಸುತ್ತಾರೆ ಎಂದು ಸಲಹೆ ನೀಡಿದರು.
ಗೃಹ ಸಚಿವ ಕೆ.ಜೆ. ಜಾರ್ಜ್, ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದರಾದ ಪ್ರತಾಪ್ ಸಿಂಹ, ಸಿ.ಎಸ್. ಪುಟ್ಟರಾಜು, ಶಾಸಕರಾದ ತನ್ವೀರ್ ಸೇಠ್, ವಾಸು, ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಸಾ.ರಾ.ಮಹೇಶ್, ಸಂದೇಶ್ ನಾಗರಾಜು, ಆರ್. ಧರ್ಮಸೇನ, ಮೇಯರ್ ಎನ್.ಎಂ. ರಾಜೇಶ್ವರಿ, ಉಪ ಮೇಯರ್ ವಿ.ಶೈಲೇಂದ್ರ, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ತಾಪಂ ಅಧ್ಯಕ್ಷೆ ನಿರ್ಮಲ, ಡಿಜಿ ಲಾಲ್ ರುಖುಮಾ ಪಚಾವೋ, ದಕ್ಷಿಣ ವಲಯದ ಐಜಿಪಿ ಬಿ.ಕೆ. ಸಿಂಗ್ ಇದ್ದರು. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಸ್ವಾಗತಿಸಿದರು. ಎಸ್ಪಿ ಅಭಿನವ್ ಅಶೋಕ್ ಖರೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

