ಪಾಪಾರೆಡ್ಡಿ ನಿರ್ಗಮನ; ಬಿಜೆಪಿಗೆ ಹಿನ್ನಡೆಯಾಗದು
ಕನ್ನಡಪ್ರಭ ವಾರ್ತೆ , ರಾಯಚೂರು , ಏ.13
ಭಾರತೀಯ ಜನತಾ ಪಕ್ಷವು ರಾಷ್ಟ್ರೀಯ ಪಕ್ಷವಾಗಿದ್ದು, ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ನಿರ್ಧಾರ ಮುಖ್ಯವಾಗುತ್ತದೆ. ಪಕ್ಷದ ವರಿಷ್ಠರ ನಿರ್ಧಾರದಂತೆ ತಾವು ಕಣಕ್ಕಿಳಿದಿದ್ದಾಗಿ ತಿಳಿಸಿದ ನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ, ಮಾಜಿ ಶಾಸಕ ಪಾಪಾರೆಡ್ಡಿ ಅವರು ಕಾಂಗ್ರೆಸ್ ಸೇರಿರುವುದರಿಂದ ಯಾವುದೇ ಹಿನ್ನಡೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕ ಪಾಪಾರೆಡ್ಡಿ ಸೇರಿದಂತೆ ಅನೇಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಅಂತಿಮವಾಗಿ ತಮಗೆ ಪಕ್ಷ ಮನ್ನಣೆ ನೀಡಿದೆ. ಪಕ್ಷಕ್ಕೆ ಯಾವುದೇ ವ್ಯಕ್ತಿ ಮುಖ್ಯವಾಗುವುದಿಲ್ಲ ಎಂದು ಹೇಳಿದರು.
ಜನರು ಬದಲಾವಣೆ ಬಯಸಿದ್ದಾರೆ: ಸದ್ಯ ನಗರ ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಶಾಸಕ ಸೈಯದ್ ಯಾಸೀನ್ ಅಭಿವೃದ್ಧಿ ಕಾರ್ಯ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಬೆಂಬಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಮಾತನಾಡಿ, ಮಾಜಿ ಶಾಸಕ ಪಾಪಾರೆಡ್ಡಿ ಅವರು ಬಿಜೆಪಿ ತೊರೆದಿರುವುದರಿಂದ ಚುನಾವಣೆಯಲ್ಲಿ ಯಾವುದೇ ನಷ್ಟವಾಗದು. ಅವರು ಕಳೆದ ಚುನಾವಣೆಯಲ್ಲಿ 19 ಸಾವಿರ ಮತ ಪಡೆದಿದ್ದರಿಂದಲೇ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ಕಡೆಗಣಿಸಿದ್ದಾರೆ. ಹೊಸಬರಿಗೆ ಅವಕಾಶ ನೀಡಿದ್ದಾರೆಂದು ಹೇಳಿದರು.
ಶಿವನಗೌಡರ ಕೈವಾಡವಿಲ್ಲ: ಮಾಜಿ ಶಾಸಕ ಪಾಪಾರೆಡ್ಡಿ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಲು ದೇವದುರ್ಗದ ಶಾಸಕ ಶಿವನಗೌಡ ನಾಯಕ ಅವರು ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವರಿಷ್ಠರ ತೀರ್ಮಾನದಂತೆ ಪಾಪಾರೆಡ್ಡಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆಯೇ ವಿನಾ ಅವರ ಕೈವಾಡವಿಲ್ಲ. ಪಕ್ಷದಲ್ಲಿ ಸಹಜವಾಗಿಯೇ ಮೂರ್ನಾಲ್ಕು ಜನ ಆಕಾಂಕ್ಷಿಗಳಿರುತ್ತಾರೆ. ಒಬ್ಬರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಸಿಗುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಇನ್ನುಳಿದವರು ಪಕ್ಷದ ವರಿಷ್ಠರ ನಿರ್ಧಾರ ಗೌರವಿಸುವುದು ಪಕ್ಷ ನಿಷ್ಠೆಯಾಗುತ್ತದೆ ಎಂದು ಹೇಳಿದರು.
ಟಿಕೆಟ್ ನಿರಾಕರಣೆಗೇನು ಕಾರಣ?: ಪಕ್ಷವು ಮಾಜಿ ಶಾಸಕ ಪಾಪಾರೆಡ್ಡಿ ಅವರಿಗೆ ಮೂರು ಬಾರಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ಅವರು ಒಂದು ಬಾರಿ ಮಾತ್ರ ಗೆಲವು ಕಂಡಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದರಿಂದಲೇ ಪ್ರಸಕ್ತ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಅವರಿಗೆ ಕಡಿಮೆ ಮತಗಳು ಬಂದಿದ್ದೂ ಅದಕ್ಕೆ ಕಾರಣ. ಅವರು ಪಕ್ಷ ತೊರೆದಿದ್ದರಿಂದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಏ. 15ರಂದು ಪಕ್ಷದ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದ ಅವರು, ಲಿಂಗಸ್ಗೂರು ತಾಲೂಕಿನ ಬಿಜೆಪಿಯಿಂದ ಆಯ್ಕೆಯಾಗಿರುವ ಜಿಪಂ ಸದಸ್ಯರಾದ ಎಚ್.ಬಿ. ಮುರಾರಿ ಮತ್ತು ಮಹಾದೇವಪ್ಪಗೌಡ ಪಾಟೀಲ್ ಅವರು ಕೆಜೆಪಿಯಿಂದ ವಿಧಾನಸಭೆ ಕಣಕ್ಕಿಳಿದಿರುವ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ. ಶೀಘ್ರ ಕ್ರಮ ಜರುಗುವ ಸಾಧ್ಯತೆಯಿದೆ ಎಂದು ಹೇಳಿದರು.
ವರಿಷ್ಠರ ನಿರ್ಧಾಕ್ಕೆ ಬದ್ಧ- ಗಸ್ತಿ: ಬಿಜೆಪಿ ಜಿಲ್ಲಾ ಮಟ್ಟದ ಚುನಾವಣೆ ಸಮಿತಿಯ ಮುಖಂಡ ಅಶೋಕ ಗಸ್ತಿ ಮಾತನಾಡಿ, ತಾವೂ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿ ತ್ರಿವಿಕ್ರಮ್ ಜೋಷಿ ಅವರನ್ನು ಬೆಂಬಲಿಸಿ ಅವರ ಗೆಲವಿಗೆ ಶ್ರಮಿಸುವುದಾಗಿ ತಿಳಿಸಿದರು.
ಪಕ್ಷದ ಪ್ರಮುಖರಾದ ಬಂಡೇಶ್ ವಲ್ಕಂದಿನ್ನಿ, ಪೂರತಿಪ್ಲಿ ನಾರಾಯಣರಾವ್, ರಮಾನಂದ ಯಾದವ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

