ರಾಯಚೂರು

ವೀಕ್ಷಕರಿಂದ ನಿಯಮಗಳ ಕುರಿತ ನಿರ್ದೇಶನ

Published On :

ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಏ.29
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಸುಗಮ ಮತದಾನ ನಡೆಯಲು ಅಧಿಕಾರಿಗಳಿಗೆ ಚುನಾವಣೆ ಆಯೋಗ ಹೊರಡಿಸಿದ ನಿಯಮಗಳ ಕುರಿತು ಚುನಾವಣಾ ವೀಕ್ಷಕ ಮತ್ಸುತುಂಗ ಪಟಾನ್ ಅವರು ಚುನಾವಣೆ ಕರ್ತವ್ಯಕ್ಕೆ ನೇಮಿಸಿದ ವಿವಿಧ ಅಧಿಕಾರಿಗಳ ತಂಡಗಳಿಗೆ ನಿರ್ದೇಶನ ನೀಡಿದರು.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸೋಮವಾರ ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆ ಅಧಿಕಾರಿಗಳ ತಂಡಗಳ ಸಭೆ ಕರೆದು ಆಯೋಗದ ನಿಯಮಗಳ ಕುರಿತು ನಿರ್ದೇಶನ ನೀಡಿದ ಅವರು, ಮಸ್ಕಿ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಒಟ್ಟು 204 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 85 ಸೂಕ್ಷ್ಮ, 79 ಅತಿಸೂಕ್ಷ್ಮ ಮತ್ತು 124 ಸಾಮಾನ್ಯ ಎಂದು ಗುರುತಿಸಲಾಗಿದೆ.
ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಸ್ಕಿ, ಕವಿತಾಳ, ಮುದಗಲ್ ಸೇರಿದಂತೆ 7 ಪೊಲೀಸ್ ಠಾಣೆಗಳು ಬರುತ್ತಿದ್ದು, ಸುಗಮ ಮತದಾನಕ್ಕೆ ಸೂಕ್ತ ಭದ್ರತೆ ಒದಗಿಸಲು ಒಟ್ಟು 459 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಭ್ಯರ್ಥಿ ಪರ ನೇಮಕಗೊಂಡ ಚುನಾವಣೆ ಏಜೆಂಟರು ಪದೆ ಪದೆ ಹೊರಗೆ ಹೋಗುವಂತಿಲ್ಲ. ಅಭ್ಯರ್ಥಿಗೆ ಮಾತ್ರ ಪ್ರವೇಶವಿರುತ್ತದೆ. ಮತಗಟ್ಟೆ ಕೇಂದ್ರದ 100 ಮೀ ವ್ಯಾಪ್ತಿಯಲ್ಲಿ ಮತದಾರರು ಹೊರತುಪಡಿಸಿ ಯಾರಿಗೂ ಅವಕಾಶವಿರುವುದಿಲ್ಲ. ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡ ಸಂಬಂಧಿಸಿದ ಅಧಿಕಾರಿಗಳು ಆಯೋಗದ ನಿಯಮ ಪಾಲನೆ ಮಾಡಬೇಕೆಂದು ಸೂಚನೆ ನೀಡಿದರು.
ಮಸ್ಕಿ ಚುನಾವಣೆ ಅಧಿಕಾರಿ ವೈ.ಬಿ.ಶ್ರೀನಿವಾಸ, ಡಿವೈಎಸ್‌ಪಿ ಅನಿತಾ ಹದ್ದಣ್ಣನವರ, ಸಿಪಿಐ ಲಕ್ಷ್ಮೀನಾರಾಯಣ ಸೇರಿದಂತೆ ವಿವಿಧ ತಂಡಗಳ ಚುನಾವಣಾ ಅಧಿಕಾರಿಗಳು ಭಾಗವಹಿಸಿದ್ದರು.

ವಜ್ಜಲ್ ಸಹೋದರರಿಂದ ಹಣ ಹಂಚಿಕೆ: ದೂರು, ಪರಿಶೀಲನೆ
ಮುದಗಲ್:
ಲಿಂಗಸ್ಗೂರು ತಾಲೂಕಿನ ನಾಗರಹಾಳದಲ್ಲಿ ಭಾನುವಾರದಂದು, ಜೆಡಿಎಸ್ ಮುಖಂಡ ನಾಗಪ್ಪ ವಜ್ಜಲರಿಂದ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ದೂರಿನ ಮೇರೆಗೆ ಲಿಂಗಸ್ಗೂರು ಡಿವೈಎಸ್ಪಿ ಅನಿತಾ ಹದ್ದಣನವರು ಗ್ರಾಮಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ನಾಗಪ್ಪ ವಜ್ಜಲ್‌ರ ವಾಹನ ಹಾಗೂ ಹತ್ತಿರದ ಖಾಸಗಿ ಆಸ್ಪತ್ರೆ, ಕಿರಾಣಿ ಅಂಗಡಿ ಮತ್ತು ಗಲ್ಲಿ ಗಲ್ಲಿಗಳಲ್ಲಿ ಹಾಗೂ ಜೆಡಿಎಸ್ ಮುಖಂಡ ಹೊನ್ನಪ್ಪ ಮೇಟಿಯವರ ಮನೆ ಪರಿಶೀಲನೆ ಮಾಡಿದರು. ಹಣ ಹಂಚುವಿಕೆಯ ಯಾವುದೇ ಕುರುಹುಗಳು ಪತ್ತೆಯಾಗಿರುವುದಿಲ್ಲ ಎಂದು ಡಿವೈಎಸ್ಪಿ ಅನಿತಾ ಹದ್ದಣ್ಣನವರ ಮಾಹಿತಿ ನೀಡಿದರು. ಮುದಗಲ್ ಪಿಎಸ್‌ಐ ಬಸವರಾಜ್ ಬಿಸನಕೊಪ್ಪ ಹಾಗೂ ಸಿಬ್ಬಂದಿ ಶೋಧನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಾನ್ಯತೆ ಇಲ್ಲ:  ಕುರಿ
ಮುದಗಲ್: ಇಲ್ಲಿಯವರೆಗೆ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವದೇ ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದ ಮತದಾರರು ಮಾನ್ಯತೆ ನೀಡಿಲ್ಲ, ನೀಡುವುದೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಬಸವಂತರಾಯ ಕುರಿ ಹೇಳಿದರು.
ಪಟ್ಟಣದಲ್ಲಿ ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಪರ ಬಹಿರಂಗ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರಾದೇಶಿಕ ಪಕ್ಷಗಳಾದ ಬಿಎಸ್‌ಆರ್ ಕಾಂಗ್ರೆಸ್ ಮತ್ತು ಕೆಜೆಪಿಗಳಿಗೆ ರಾಜ್ಯದ ಜನತೆ ಮಾನ್ಯತೆ ನೀಡಲಾರರು. ಈ ಎರಡೂ ಪಕ್ಷಗಳು ಬಿಜೆಪಿ ಜೊತೆ ಜಗಳವಾಡಿ ಹುಟ್ಟಿಕೊಂಡ ಪಕ್ಷಗಳು ಎಂದರು.
ಪರಿಸ್ಥಿತಿ ಏನಾಗಲಿದೆ?: ರಾಜ್ಯದಲ್ಲಿ ದೇವರಾಜ ಅರಸ್, ಬಂಗಾರಪ್ಪ, ಗುಂಡೂರಾವ್, ವಿಜಯ ಸಂಕೇಶ್ವರ, ಪ್ರಾದೇಶಿಕ ಪಕ್ಷ ರಚಿಸಿದವರಲ್ಲಿ ಪ್ರಮುಖರಾಗಿದ್ದಾರೆ. ಈಗ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು ಪ್ರಾದೇಶಿಕ ಪಕ್ಷ ರಚಿಸಿದ್ದಾರೆ. ಹಿಂದಿನ ಪ್ರಾದೇಶಿಕ ಪಕ್ಷಗಳ ಪರಿಸ್ಥಿತಿಯೇ ಇವರಿಗೂ ಆಗಲಿದೆ ಎಂದರು.
ಹೈ.ಕಗೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳೂ ಆಟವಾಡಿವೆ. ಕೊನೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಖರ್ಗೆ, ಧರಂ ಅವರ ಚುನಾವಣಾ ಪ್ರಚಾರ ಭಾಷಣದಲ್ಲಿ ಪಕ್ಷದ ಯುವ ನಾಯಕ ರಾಹುಲ್ ಅವರು ಕೊಟ್ಟ ಮಾತಿನಂತೆ ಕೇಂದ್ರದಲ್ಲಿ ಸರ್ಕಾರ ರಚನೆಯಾದ ನಂತರ ಇತ್ತೀಚೆಗೆ ವಿಶೇಷ ಸ್ಥಾನಮಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಅದರ ರೂಪು ರೇಷೆಗಳನ್ನು ರಚಿಸುವಲ್ಲಿ ಹಿಂದೇಟು ಹಾಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.