ಈರುಳ್ಳಿ ಕೊರತೆ; ಬೆಲೆ ಗಗನಕೆ
ಕನ್ನಡಪ್ರಭ ವಾರ್ತೆ , ರಾಯಚೂರು , ಆ.10
ಕಳೆದ ಎರಡು ವರ್ಷಗಳ ಭೀಕರ ಬರದಿಂದ ತತ್ತರಿಸಿದ್ದ ಜಿಲ್ಲೆಯ ರೈತರು ಈಗ ಕೃಷಿಯಲ್ಲಿ ಲಾಭ ಕಾಣುವಂತಾಗಿದೆ. ನದಿ ತೀರದಲ್ಲಿ ಕೃಷಿ ಮಾಡಿಕೊಂಡಿದ್ದ ಈರುಳ್ಳಿ ಬೆಳೆಗಾರರಿಗೆ ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಬೆಳೆ ರೈತರ ಕೈಹಿಡಿದಿರುವುದರಿಂದ ಸಂತತ ಮೂಡಿಸಿದೆ.
ತಾಲೂಕಿನ ತುಂಗಭದ್ರಾ ಸೇರಿ ವಿವಿಧ ಹಳ್ಳಿಗಳಲ್ಲಿ ಈರುಳ್ಳಿ ಬೆಳೆಗಾರರಿಗೆ ನೆಮ್ಮದಿಯ ದಿನಗಳಿವು. ಕಳೆದ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಾಗಿದ್ದು, ಅದರಿಂದ ಈರುಳ್ಳಿಯ ದರ ಗಗನಕ್ಕೇರಿದೆ. ಅದರಿಂದ ಗ್ರಾಹಕರಿಗೆ ಬಿಸಿ ತಟ್ಟಿದ್ದರೂ, ರೈತರು ಮಾತ್ರ ಲಾಭ ಕಂಡಿದ್ದಾರೆ.
ನೀರಿನ ಅಭಾವ: ತಾಲೂಕಿನ ವಿವಿಧೆಡೆ ಸುಮಾರು 300ಕ್ಕೂ ಹೆಚ್ಚಿನ ಎಕರೆ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ಕೊಳವೆಬಾವಿ ಮೂಲಕ ನೀರು ಪಡೆದು ಈರುಳ್ಳಿ ಬೆಳೆ ಬೆಳೆಯುತ್ತಿದ್ದವರಿಗೆ ಕಳೆದ ಎರಡು ವರ್ಷಗಳ ಬರ ನೀರಿನ ಅಭಾವ ಉಂಟು ಮಾಡಿತ್ತು. ಆದರೆ ಪ್ರಸಕ್ತ ವರ್ಷ ಮುಂಗಾರು ಮಳೆ ಸಮರ್ಪಕ ಸುರಿದಿದ್ದರಿಂದ ಕೊಳವೆ ಬಾವಿಗಳಿಂದ ಸಮರ್ಪಕ ನೀರು ದೊರೆಯುತ್ತಿದೆ.
ಪರಿಣಾಮ ನದಿ ತೀರ ಮತ್ತು ಕೊಳವೆ ಬಾವಿ ಆಧಾರಿತ ಕೃಷಿ ಪ್ರದೇಶದಲ್ಲಿನ ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ಪ್ರತಿ ಎಕರೆಗೆ ರು. 50 ಸಾವಿರ ವೆಚ್ಚ ಮಾಡಿರುವ ರೈತರು ಎಕರೆಗೆ ಕನಿಷ್ಟ 65 ರಿಂದ 80 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ತಡವಾಗಿ ಮಳೆಯಾಗಿದ್ದರಿಂದ ಆರಂಭದಲ್ಲಿ ನೀರಿನ ಕೊರತೆ ಎದುರಿಸಿದ್ದರೂ ಈರುಳ್ಳಿ ಬೆಳೆ ಉತ್ತಮವಾಗಿ ಬಂದಿದೆ.
ರಾಯಚೂರು ಸೇರಿ ರಾಜ್ಯದ ಇನ್ನಿತರೆಡೆ ಈರುಳ್ಳಿ ಬೆಳೆಯ ಕೊರತೆಯಿದ್ದು, ಅದರಿಂದ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಏರಿಕೆಯಾಗಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯಲು ಸಾಧ್ಯವಾಗಿದೆ. ರಾಯಚೂರು ಎಪಿಎಂಸಿಯಲ್ಲಿ ಸದ್ಯ ಈರುಳ್ಳಿ ದರವು ರು. 4295 ಪ್ರತಿ ಕ್ವಿಂಟಾಲ್ಗೆ ತಲುಪಿದೆ.
ಕಳೆದ ವರ್ಷ ನಷ್ಟ: ಕಳೆದ ಹಂಗಾಮಿನಲ್ಲಿ ರೈತರು ಕೇವಲ ರು. 800ಗಳಿಂದ 1200ವರೆಗೆ ಗುಣಮಟ್ಟದ ಈರುಳ್ಳಿ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದರು. ಅದರಿಂದ ಅನೇಕರು ಈರುಳ್ಳಿ ಬೆಳೆಯಲು ನಿರಾಸಕ್ತಿ ತೋರಿದ್ದರು. ಅದರಿಂದ ಈರುಳ್ಳಿಯ ಅಭಾವ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದರಿಂದ ಸದ್ಯ ಈರುಳ್ಳಿಗೆ ಭಾರೀ ಬೆಲೆ ಬಂದಿದೆ.
ಈ ಬಗ್ಗೆ ತುಂಗಭದ್ರಾ ಗ್ರಾಮದ ರೈತ ನರಸಿಂಹಲು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿ, ರಾಯಚೂರಿನ ಮಾರುಕಟ್ಟೆಯಲ್ಲಿ ರು. 4295 ಪ್ರತಿ ಕ್ವಿಂಟಾಲ್ಗೆ ಮಾರಾಟವಾಗುತ್ತಿರುವ ಈರುಳ್ಳಿಗೆ ನೆರೆಯ ಆಂಧ್ರದಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹೀಗಾಗಿ ಆಂಧ್ರದ ವರ್ತಕರು ನೇರವಾಗಿ ಈರುಳ್ಳಿ ಬೆಳೆಗಾರರ ಹೊಲಗಳಿಗೆ ಆಗಮಿಸಿ ಮುಂಗಡ ಹಣ ನೀಡಿ ಈರುಳ್ಳಿಯನ್ನು 4500ಗಳಿಂದ ರು. 5ಸಾವಿರದವರೆಗೆ ಖರೀದಿಸುತ್ತಿದ್ದಾರೆ. ಅದರಿಂದ ರೈತರಿಗೆ ಫಸಲಿನ ಸಾಗಣೆ ವೆಚ್ಚವೂ ತಗ್ಗುತ್ತಿದೆ ಎಂದಿದ್ದಾರೆ.
ಈರುಳ್ಳಿ ಬೆಳೆಗಾರರಿರುವಲ್ಲಿಯೇ ಬಂಪರ್ ಬೆಲೆ ಸಿಗುತ್ತಿರುವುದು ರೈತರಲ್ಲಿ ಸಂತಸ ಉಂಟು ಮಾಡಿದೆ. ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳ ಹಾವಳಿ, ಬೆಲೆಯಲ್ಲಿ ವರ್ತಕರು ವಿವಿಧ ಕಡಿತ ಮಾಡುವುದು ಸೇರಿ ನಾನಾ ರೀತಿಯ ತೊಂದರೆಗಳಿಂದ ಈರುಳ್ಳಿ ಬೆಳೆಗಾರರು ಪಾರಾಗಿದ್ದಾರೆ.
- ಜಗನ್ನಾಥ ಆರ್. ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

