26ಕ್ಕೆ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ರಾಜ್ಯ ಸಮಾವೇಶ
ಗುಲ್ಬರ್ಗ: ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪ್ರೋತ್ಸಾಹಧನ ಕೊಡುವುದಾಗಿ 2013- 14ನೇ ಸಾಲಿನ ಬಜೆಟ್ನಲ್ಲಿ ಮಾಡಿದ ಘೋಷಣೆಯನ್ನು ಸ್ಪಷ್ಟ ರೂಪದಲ್ಲಿ ಶೀಘ್ರ ಜಾರಿಗೆಗೊಳಿಸಬೇಕು. ಪ್ರತಿ ತಿಂಗಳೂ ತಪ್ಪದೇ ಪ್ರೋತ್ಸಾಹಧನ ಪಾವತಿಸಬೇಕು, ಆರೋಗ್ಯ ಸೌಕರ್ಯಗಳು ಮತ್ತು ಭದ್ರತೆ ಖಾತ್ರಿಪಡಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಇದೇ 26ರಂದು ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಸಂಘಟಿಸಲು ನಿರ್ಧರಿಸಿದೆ. ಆ.26ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಹಮ್ಮಿಕೊಳ್ಳಲಾದ ಈ ಸಮಾವೇಶಕ್ಕೆ ನಾಡಿನ ಹಿರಿಯ ಸ್ವಾತಂತ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ. ಕವಿಯತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ, ಮಹಿಳಾ ಹೋರಾಟಗಾರ್ತಿ ಮೀರಾ ನಾಯಕ ಮೈಸೂರು, ಚಂದ್ರಕಲಾ ನಂದಾವರ, ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘ, ನಿವೃತ್ತ ಪ್ರಾಂಶುಪಾಲರು, ಮಂಗಳೂರು ಹಾಗೂ ಆಲ್ ಇಂಡಿಯಾ ಯುಟಿಯುಸಿಯ ರಾಜ್ಯ ಅಧ್ಯಕ್ಷರಾದ ಕಾ. ಕೆ.ರಾಧಾಕೃಷ್ಣ ಆಗಮಿಸಲಿದ್ದಾರೆ. ರಾಜ್ಯದ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು. ಅಂತೆಯೇ ರಾಜ್ಯದ ಪ್ರಜ್ಞಾವಂತ ಜನತೆ ಈ ಸಾಮಾಜಿಕ ಚಳವಳಿಗೆ ಬೆಂಬಲಿಸಬೇಕೆಂದು ಜಿಲ್ಲಾಧ್ಯಕ್ಷ ರಾಮಣ್ಣ ಇಬ್ರಾಯಂಪುಂ ಮನವಿ ಮಾಡಿದ್ದಾರೆ.
ಕಾಲುವೆಗಿಳಿದ ಬಸ್: ಪ್ರಯಾಣಿಕರು ಪಾರು
ಸಿಂಧನೂರು: ತಾಲೂಕಿನ ಗಾಂಧಿನಗರಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ತುಂಗಭದ್ರಾ ಎಡದಂಡೆಯ ವಿತರಣಾ ಕಾಲುವೆಗೆ ಮಂಗಳವಾರ ರಾತ್ರಿ ಇಳಿದಿದ್ದು, ಅದೃಷ್ಟವಶಾತ್ ಅದರಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಸಿಂಧನೂರಿನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ಈ ಬಸ್ ತುಂಗಭದ್ರಾ ಎಡದಂಡೆ ಕಾಲುವೆಯ 36ನೇ ವಿತರಣಾ ಕಾಲುವೆಯ ಮೇಲೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾಲುವೆಗೆ ನಿಧಾನವಾಗಿ ಇಳಿದಿದ್ದು, ಕೂಡಲೇ ಎಚ್ಚೆತ್ತ ಪ್ರಯಾಣಿಕರು ಬಸ್ ನಿಂದ ಕೆಳ ಜಿಗಿದಿದ್ದಾರೆ. ಇನ್ನು ಕೆಲವರು ಬಸ್ ನಲ್ಲಿ ಸಿಲುಕಿದ್ದು, ಸಮೀಪದ ವೆಂಕಟೇಶ್ವರ ಕ್ಯಾಂಪಿನ ನಿವಾಸಿಗಳು ಧಾವಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರಾಜ್ಯ ಮಟ್ಟದ ವಿಚಾರ ಸಂಕಿರಣ
ಜೇವರ್ಗಿ; ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಬರುವ ಆ. 25 ಮತ್ತು 26ರಂದು ಎರಡು ದಿನಗಳ ಕಾಲ ಜೇವರ್ಗಿ ತಹಸೀಲ್ದಾರ ಆವರಣದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಭಾಷಾ ಸಾಮರಸ್ಯ ಹಾಗೂ ತತ್ವಪದ ಗಾಯನ ಸಮಾವೇಶ ನಡೆಯಲಿದೆ. ಆ. 25 ರಂದು ಬೆಳಗ್ಗೆ 10.30 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಗಂವ್ಹಾರದ ಸೋಪನಾಥ ಸ್ವಾಮೀಜಿ ಸಾನ್ನಿದ್ಯ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಲ್ಲಿದ್ದಾರೆ. ಶಾಸಕ ಡಾ.ಅಜಯಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೇದಾರಲಿಂಗಯ್ಯ ಹಿರೇಮಠ, ಜಿಪಂ ವಿರೋದ ಪಕ್ಷದ ನಾಯಕ ಗುರುಲಿಂಗಪ್ಪಗೌಡ, ತಾಪಂ ಅಧ್ಯಕ್ಷ ಶರಣಗೌಡ ಮದ್ರಕಿ, ಉಪಾದ್ಯಕ್ಷೆ ವಿಜಯಲಕ್ಷ್ಮೀ ಎಂ., ತಹಸಿಲ್ದಾರ್ ಎಂ.ಎನ್.ಗೋಠೆ, ಕ್ಷೇತ್ರ ಶಿಕ್ಷಣಾಧಿಕಾರಿ ಗುರಣ್ಣ ಗುಂಡಗುರ್ತಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ. ಜಿಲ್ಲಾ ಕಜಾಪ ಅದ್ಯಕ್ಷ ಬಸವರಾಜ ಪೊಲೀಸಪಾಟೀಲ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಗೋಷ್ಠಿಗಳು, ತತ್ವಪದ ಗಾಯನ ಸೇರಿ ಜಾನಪದ ಸಾಹಿತ್ಯದ ಸೊಬಗು ಕಂಗೋಳಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳಬೇಕು ಎಂದು ಕಜಾಪ ತಾಲೂಕಾಧ್ಯಕ್ಷ ಎಸ್.ಕೆ., ಬಿರಾದಾರ, ಕೋಶಾಧ್ಯಕ್ಷ ಎಸ್.ಎ. ಪಡಶೆಟ್ಟಿ, ಕಾರ್ಯದರ್ಶಿ ಶಿವಕುಮಾರ್ ದೇವತ್ಕಲ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

