ರಾಯರು ಸರ್ವರನ್ನೂ ಸಂರಕ್ಷಿಸುವ ವಿಶ್ವಗುರು
ಕ.ಪ್ರ.ವಾರ್ತೆ ರಾಯಚೂರು ಆ. 23
ಮಂತ್ರಾಲಯದಲ್ಲಿ ಶುಕ್ರವಾರ ಸಂಭ್ರಮ, ಸಡಗರ, ಭಕ್ತಿಭಾವದ ಮಧ್ಯೆ ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದ ಉತ್ತರರಾಧನೆ ಅಂಗವಾಗಿ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮಹಾರಥೋತ್ಸವ ಸಂದರ್ಭ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥರು, ಶ್ರೀಗುರುಸಾರ್ವಭೌಮ ರಾಯರು ವಿಶ್ವಗುರುಗಳಾಗಿದ್ದಾರೆ. ಎಲ್ಲ ಜಾತಿ ಜನಾಂಗದವರಿಗೆ ಗುರುಗಳಾಗಿದ್ದಾರೆ. ವಿಶ್ವವ್ಯಾಪಿ ಅವರನ್ನು ಕಲಿಯುಗದ ಕಲ್ಪತರು ಎಂದು ಪೂಜಿಸಲಾಗುತ್ತಿದೆ ಎಂದು ಹೇಳಿದರು. ಶ್ರೀರಾಘವೇಂದ್ರಸ್ವಾಮಿಗಳು ಆರಾಧನೆ ವೇಳೆ ಬೃಂದಾವನದಲ್ಲಿ ಯೋಗನಿದ್ರೆಯಿಂದ ಎದ್ದು ಬಂದು ತಮ್ಮಲ್ಲಿಗೆ ಬರುವ ಭಕ್ತರನ್ನು ಕರುಣಿಸುತ್ತಾರೆ. ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಕಳೆದು ಅನುಗ್ರಹಿಸುತ್ತಾರೆ. ಸತ್ಯ ಧರ್ಮದಿಂದ ಶ್ರೀರಾಯರ ಪೂಜಿಸಿದರೆ ಫಲ ದೊರೆಯುವುದು ನಿಶ್ಚಿತ ಎಂದು ಹೇಳಿದರು.
ಶ್ರೀರಾಯರ ಬೃಂದಾವನ ದರ್ಶನದಿಂದಲೇ ಸಕಲ ಪಾಪಗಳು ಪರಿಹಾರವಾಗುತ್ತವೆ. ಅಸಾಧ್ಯವಾದುದನ್ನು ರಾಯರು ಸಾಧ್ಯವಾಗಿಸಿದ್ದಾರೆ. ಅಂಥ ಮಹಾನ್ ಶಕ್ತಿ ಶ್ರೀಗುರುಗಳಿಗಿದೆ. ವಿಶ್ವದ ಎಲ್ಲರನ್ನೂ ಸನ್ಮಾರ್ಗಿಗಳಾಗಿಸುವ ಕಾರ್ಯ ಶ್ರೀರಾಯರು ಮಾಡುತ್ತಿದ್ದಾರೆಂದು ತಿಳಿಸಿದರು.
ಕಿರಿಯ ಶ್ರೀಗಳಾದ ಶ್ರೀಸುಬುಧೇಂದ್ರತೀರ್ಥರು ಅನುಗ್ರಹ ಸಂದೇಶ ನೀಡಿ, ವಿಶ್ವದೆಲ್ಲೆಡೆ ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ವಿಶ್ವದ ಎಲ್ಲೆಡೆ ರಾಯರ ಭಕ್ತರಿದ್ದಾರೆ. ಅಂಥ ಎಲ್ಲ ಭಕ್ತರನ್ನು ರಾಯರು ಕರುಣಿಸಿದ್ದಾರೆ ಎಂದು ಹೇಳಿದರು.
ರಾಯರು ಮಾತೃಹೃದಯಿಯಾಗಿದ್ದಾರೆ. ಆ ಮೂಲಕ ಅವರು ಬೇಡಿದ ಇಷ್ಟಾರ್ಥಗಳನ್ನು ಈಡೇರಿಸಿ ಸದಾ ಜತೆಗಿದ್ದು ಭಕ್ತಕರನ್ನು ಕಾಯುತ್ತಿದ್ದಾರೆ. ಸದ್ಯದ ದಿನಗಳಲ್ಲಿ ಶಿಷ್ಯರ ದುಡ್ಡು ಸೆಳೆಯುವ ಅನೇಕ ಗುರುಗಳಿದ್ದಾರೆ. ಆದರೆ, ಶ್ರೀರಾಯರ ಶಿಷ್ಯರಿಗೆ ಸದಾ ಕರುಣಿಸಿ ತಮ್ಮತ್ತ ಸೆಳೆಯುತ್ತಾರೆ ಎಂದು ಹೇಳಿದರು. ಶ್ರೀರಾಯರು ಸಮಾಜದ ಎಲ್ಲ ಜಾತಿ ಜನಾಂಗದ ದೇವರಾಗಿದ್ದಾರೆ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗದು. ಅವರು ಎಲ್ಲರ ಹೃದಯ, ಮನೆ ಮತ್ತು ಮನಗಳಲ್ಲಿ ನೆಲೆಸಿದ್ದಾರೆ. ರಾಯರು ಎಲ್ಲರಿಗೂ ಸೀಮಿತರು. ಜಗತ್ತಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಬೇಕು. ಎಲ್ಲರೂ ನೆಮ್ಮದಿಯಿಂದ ಬದುಕು ಸಾಗಿಸುವಂತಾಗಬೇಕೆಂದು ಶ್ರೀರಾಘವೇಂದ್ರಸ್ವಾಮಿಗಳಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದರು.
ಇದಕ್ಕೂ ಮೊದಲು ಶ್ರೀಮಠದಲ್ಲಿ ಬೆಳಗ್ಗೆ ಶ್ರೀರಾಯರ ಆರಾಧನಾ ಮಹೋತ್ಸವದ ಉತ್ತರಾರಾಧನೆ ಅಂಗವಾಗಿ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಪಂಚಾಮೃತ ಅಭಿಷೇಕ ನಡೆಯಿತು. ನಂತರ ಶ್ರೀರಾಯರ ಬೃಂದಾವನಕ್ಕೆ ಹಾಗೂ ಉತ್ಸವ ರಾಯರ ಮೂರ್ತಿಗೆ ಶ್ರೀಗಳು ವಸಂತೋತ್ಸವದ ಅಂಗವಾಗಿ ಓಕುಳಿ (ಬಣ್ಣ) ದಿನದ ಪೂಜೆ ಅರ್ಚನೆ ಸಲ್ಲಿಸಿದರು.
ನಂತರ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥರು ಕಿರಿಯ ಶ್ರೀಗಳಾದ ಶ್ರೀಸುಬುಧೇಂದ್ರತೀರ್ಥರಿಗೆ ಮತ್ತು ನೆರೆದಿದ್ದ ಎಲ್ಲರಿಗೆ ಬಣ್ಣ ಎರಚಿ ಸಂಭ್ರಮಿಸಿದರು.
ಈ ನಂತರ ಉತ್ಸವ ರಾಯರ ಮೂರ್ತಿಯನ್ನು ಪ್ರಾಕಾರದಲ್ಲಿ ಮೆರವಣಿಗೆ ಮಾಡಿ ಆನಂತರದಲ್ಲಿ ಮಹಾರಥೋತ್ಸವದಲ್ಲಿರಿಸಿ ಪೂಜೆ ಸಲ್ಲಿಸಿ ಮಹಾರಥೋತ್ಸವ ನೆರವೇರಿಸಲಾಯಿತು. ಮಹಾರಥೋತ್ಸವದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಚಂಡಿಮದ್ದಳೆ, ಡೊಳ್ಳು, ಬ್ಯಾಂಜೋ ಸೇರಿದಂತೆ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಭಕ್ತಿ ಸಂಗೀತದಲ್ಲಿ ಭಜನಾ ಮಂಡಳಿಗಳ ಸದಸ್ಯರು ತೊಡಗಿದ್ದರು. ಸಾವಿರಾರು ಸಂಖ್ಯೆಯ ಭಕ್ತರು ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದ ಮಹಾರಥೋತ್ಸವದಲ್ಲಿ ಪಾಲ್ಗೊಂಡು ರಥವು ಸಾಗುತ್ತಿದ್ದಂತೆಯೇ ನಮೋ ರಾಘವೇಂದ್ರಾಯ, ಶ್ರೀರಾಘವೇಂದ್ರ ರಕ್ಷಿಮಾಂ ಎಂದು ಜಯಘೋಷ ಮೊಳಗಿಸಿದರು.
ಈ ಸಂದರ್ಭ ಶ್ರೀಮಠದ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ, ಆಪ್ತಕಾರ್ಯದರ್ಶಿ ಶ್ರೀರಾಜಾ ಎಸ್.ರಾಜಗೋಪಾಲಾಚಾರ್ಯ, ಆನಂದರಾವ್, ಶ್ರೀಪತಿ, ಆರ್.ಪ್ರಭಾಕರರಾವ್, ಮಾಧವಶೆಟ್ಟಿ ಸೇರಿದಂತೆ ಶ್ರೀಮಠದ ಪ್ರಮುಖರು, ಪಂಡಿತರು, ವಿದ್ವಾಂಸರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

