ಜನತೆ ಯೋಜನೆ ಲಾಭ ಪಡೆಯಲಿ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.29
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಎಲ್ಲರ ಏಳ್ಗೆಗೆ ಅನೇಕ ಯೋಜನೆಗಳನ್ನು ಪ್ರಕಟಿಸಿದ್ದು, ಅವುಗಳ ಬಗ್ಗೆ ಜನರಿಗೆ ಮಾಹಿತಿಯಿಲ್ಲದೇ ಯೋಜನೆಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಭಾರತ್ ನಿರ್ಮಾಣ ಆಂದೋಲನ ಮಾಹಿತಿ ಒದಗಿಸುವ ಮೂಲಕ ನೆರವಾಗಲಿದೆ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ್ ಹೇಳಿದರು.
ನಗರದ ರಂಗಮಂದಿರದಲ್ಲಿ ಗುರುವಾರ ಕೇಂದ್ರ ಸರ್ಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾಡಳಿತ, ಜಿಪಂ ಸೇರಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಭಾರತ್ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆ: ದೇಶದ ನಿವಾಸಿಗಳ ಬದುಕಿನ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಯೋಜನೆಗಳ ಲಾಭ ಜನತೆಗೆ ದೊರೆಯುತ್ತಿಲ್ಲ. ಅದರಿಂದಾಗಿ ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಗೆ ಯೋಜನೆಗಳಿಂದ ಪ್ರಯೋಜನವಾಗುತ್ತಿಲ್ಲ. ಜನತೆಗೆ ಯೋಜನೆಗಳ ಮಾಹಿತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಭಾರತ ನಿರ್ಮಾಣದಂಥ ಕಾರ್ಯಾಗಾರಗಳು ಅನುಕೂಲ ಕಲ್ಪಿಸಲಿವೆ ಎಂದು ಹೇಳಿದರು.
ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವುದು ಅವಶ್ಯ. ಕೋಟ್ಯಂತರ ರು.ಗಳನ್ನು ವಿವಿಧ ಯೋಜನೆಗಳಡಿ ಬಿಡುಗಡೆ ಮಾಡಲಾಗುತ್ತದೆ. ಅಂಥ ಅನುದಾನದ ಸದ್ಬಳಕೆಯಾಗಲು ಜನತೆಗೆ ಯೋಜನೆ ತಲುಪಬೇಕಿದೆ ಎಂದರು.
ಅನುದಾನ ಸೋರಿಕೆ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷ ಶಂಕ್ರಪ್ಪ ಮಾತನಾಡಿ, ಯೋಜನೆಗಳಿಗೆ ಒದಗಿಸಿದ ಹಣವು ಜನಸಾಮಾನ್ಯರನ್ನು ತಲುಪಿ ಅವರ ಬದುಕಿನಲ್ಲಿ ಸುಧಾರಣೆ ತರುತ್ತಿಲ್ಲ. ಬದಲಿಗೆ ಸೋರಿಕೆಗೆ ದಾರಿಯಾಗಿದೆ. ಭ್ರಷ್ಟಾಚಾರಕ್ಕೆ ಯೋಜನೆಗಳಿಗೆ ನಿಗದಿ ಮಾಡಿದ ಅನುದಾನ ಎಡೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧಿಕಾರಿಗಳೂ ಸೇರಿದಂತೆ ಜನಸಾಮಾನ್ಯರಲ್ಲಿಯೂ ಸ್ವಾರ್ಥ ಸಾಧನೆ ಹೆಚ್ಚಿದೆ. ದೇಶದ ಪ್ರಗತಿಗೆ ತೀರಾ ಕಡಿಮೆ ಸಂಖ್ಯೆಯ ಜನತೆ ಚಿಂತಿಸುತ್ತಾರೆ. ಆದರೆ ಬಹುತೇಕರಲ್ಲಿ ದೇಶದ ಅಭಿವೃದ್ಧಿ, ಸಮಾಜದ ಎಲ್ಲ ವರ್ಗದವರ ಪ್ರಗತಿ ಬಗ್ಗೆ ಕಳಕಳಿಯ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾಗೃತಿ- ಉತ್ತಮ ಬೆಳವಣಿಗೆ: ಭಾರತ್ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನದಂಥ ಕಾರ್ಯಕ್ರಮಗಳ ಮೂಲಕ ಯೋಜನೆಗಳ ಕುರಿತು ಜನತೆಗೆ ಮಾಹಿತಿ ಒದಗಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕವಾದರೂ ಜನರಲ್ಲಿ ಒಗ್ಗಟ್ಟು ಮೂಡಿ ಜಾಗೃತಿಯಾದಲ್ಲಿ ಯೋಜನೆಗಳ ಲಾಭ ದೊರೆಯುವುದು ಸಾಧ್ಯ ಎಂದರು.
ಸಾರ್ವಜನಿಕ ಮಾಹಿತಿ ಆಂದೋಲನದಂಥ ಕಾರ್ಯಕ್ರಮಗಳು ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಆಯೋಜಿಸುವುದು ಹೆಚ್ಚು ಸೂಕ್ತ. ಅದರಿಂದ ಹೆಚ್ಚೆಚ್ಚು ಜನರಿಗೆ ಯೋಜನೆಗಳ ಮಾಹಿತಿ ದೊರೆಯಲು ಸಾಧ್ಯವಾಗಲಿದೆ ಎಂದು ಶಂಕ್ರಪ್ಪ ಸಲಹೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು, ಜಿಪಂ ಸಿಇಒ ಡಾ. ಮುದ್ದು ಮೋಹನ್, ಹೆಚ್ಚುವರಿ ಎಸ್ಪಿ ಅಶೋಕ ಸದಲಗಿ, ವಾರ್ತಾ ಸಚಿವಾಲಯದ ಪ್ರಮುಖರಾದ ವೆಂಕಟೇಶ್ವರ್, ಶಿವಮೇಸ್ತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ, ಜಿಪಂ ಸ್ಥಾಯಿಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಜನತೆ ಪಾಲ್ಗೊಂಡಿದ್ದರು.
ವಸ್ತು, ಪುಸ್ತಕ ಪ್ರದರ್ಶನ: ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು, ಗ್ರಾಮೀಣ ಶಾಸಕ ತಿಪ್ಪರಾಜು ಬವಾಲ್ದಾರ್ ಮತ್ತಿತರರು ಮಾಹಿತಿ ಆಂದೋಲನದ ಅಂಗವಾಗಿ ಸ್ಥಾಪಿಸಿರುವ ವಿವಿಧ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

