ನ್ಯಾ. ಸದಾಶಿವ ವರದಿ ಜಾರಿಗೆ ಸರ್ಕಾರ ನಿರ್ಲಕ್ಷ್ಯ: ದಂಡೋರಾ
ಲಿಂಗಸ್ಗೂರು: ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ಅಂಗೀಕಾರಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ದಂಡೋರ ಜಿಲ್ಲಾ ಮುಖಂಡ ಜೆ.ಬಿ. ರಾಜು ಆರೋಪಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಕಳೆದ 17 ವರ್ಷಗಳ ಕಾಲ ಸರ್ಕಾರದ ಸವಲತ್ತಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ರಾಜಕೀಯ ಮುಖಂಡರ ಹುನ್ನಾರದಿಂದ ಅಸ್ಪೃಶ್ಯರಲ್ಲದ ಜಾತಿಗಳನ್ನು ಕಾನೂನುಬಾಹಿರವಾಗಿ ಪರಿಶಿಷ್ಟ ಜಾತಿಗಳಲ್ಲಿ ಸೇರಿಸಿ ಅವರಿಗೆ ಅವೈಜ್ಞಾನಿಕ ಮೀಸಲಾತಿ ನೀಡುತ್ತಾ ಬರಲಾಗಿದೆ. ಮಾದಿಗ ಜನಾಂಗಕ್ಕೆ ಶೇ.18 ರಷ್ಟು ಮೀಸಲಾತಿ ನೀಡುತ್ತಿರುವುದಾಗಿ ಆಳುವ ಸರ್ಕಾರಗಳು ಸುಳ್ಳು ಹೇಳುತ್ತಾ ಬಂದಿವೆ ಎಂದರು.
ಬಿಜೆಪಿಗೆ ತಕ್ಕ ಪಾಠ: ನ್ಯಾ. ಎ.ಜೆ. ಸದಾಶಿವ ನೇತೃತ್ವದಲ್ಲಿ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ 2012ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಬೆಳಗಾವಿಯಲ್ಲಿ ಕಳೆದ ಬಾರಿ ನಡೆದ ಅಧಿವೇಶನದಲ್ಲಿ ವರದಿ ಅಂಗೀಕಾರಗೊಳಿಸುವಂತೆ ಮನವಿ ಮಾಡಿದರೆ ಪೊಲೀಸರ ಮೂಲಕ ಪೈಶಾಚಿಕ ದಾಳಿ ನಡೆಸಿ 150 ಜನರ ಮೇಲೆ ಪ್ರಕರಣ ದಾಖಲಿಸಿ ಪರಿಶಿಷ್ಟರ ಭರವಸೆ ಭಗ್ನಗೊಳಿಸಿದ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗಿದೆ.
ಬೈಕ್ ರ್ಯಾಲಿ: ಅಹಿಂದ್ ಸಿದ್ಧಾಂತದೊಂದಿಗೆ ಸಿದ್ಧರಾಮಯ್ಯ ಅವರು ಈ ಬಾರಿ ಮುಖ್ಯಮಂತ್ರಿಯಾಗಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತು ನ್ಯಾ. ಸದಾಶಿವ ವರದಿ ಅಂಗೀಕಾರಗೊಳಿಸುವ ನಿಟ್ಟಿನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ದಂಡೋರದ ನೇತೃತ್ವದಲ್ಲಿ ರಾಯಚೂರಿನಿಂದ ಬೆಳಗಾವಿವರೆಗೆ ಮಹಿಷಿ ರಥದೊಂದಿಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಗುಂಡಿನ ದಾಳಿ ನಡೆಸಿದರೂ ಜಗ್ಗದೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಅಂಬಣ್ಣ ಅರೋಲಿ, ಬಿ.ನರಸಪ್ಪ, ಬಾಬಾ ಕವಿತಾಳ, ಹನಮಂತಪ್ಪ ತವಗ, ರುದ್ರಪ್ಪ ಬ್ಯಾಗಿ, ನಾಗಪ್ಪ ಈಚನಾಳ, ಹುಲಗಪ್ಪ ಕೆಸರಟ್ಟಿ, ಬಸವರಾಜ ಮ್ಯಾಗೇರಿ, ನಾಗರಾಜ್ ತಿಪ್ಪಣ್ಣ, ನಾಗರಾಜ ಕರಡಕಲ್, ತಿಪ್ಪಣ್ಣ ಕರಡಕಲ್, ಮುತ್ತಣ್ಣ ಕರಡಕಲ್, ಶಿವಪ್ಪ ಪರಂಗಿ, ಹಾಜಪ್ಪ ಕರಡಕಲ್, ಅಬ್ರಾಹಂ, ವೆಂಕಟೇಶ ಪೂಜಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

