ಸಮಗ್ರ ಮಾಹಿತಿ; ಎಲ್ಲ ಕಚೇರಿಗಳ ಪ್ರಗತಿ ವರದಿ ಸಂಗ್ರಹ
ಕ.ಪ್ರ. ವಾರ್ತೆ ಲಿಂಗಸ್ಗೂರು ಡಿ.13
ತಾಲೂಕಿನಲ್ಲಿ ಬರುವ ಪ್ರತಿಯೊಂದು ಇಲಾಖೆಗಳಿಗೆ ಭೇಟಿ ನೀಡಿ ಇಲಾಖಾವಾರು ಯೋಜನೆಗಳು, ಕೈಗೊಂಡ ಕಾಮಗಾರಿ, ಬಿಡುಗಡೆಯಾದ ಅನುದಾನ ಸೇರಿದಂತೆ ಪ್ರಗತಿ ವರದಿ ಪಡೆಯಲಾಗುವುದು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮಗ್ರ ಮಾಹಿತಿ ಒದಗಿಸುವಂತೆ ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕೆಡಿಪಿ, ಸಾಮಾನ್ಯ ಸೇರಿದಂತೆ ವಿವಿಧ ಸಭೆಗಳಿಗೆ ಹಾಜರಾಗುವ ಅಧಿಕಾರಿಗಳು ಸಂಕ್ಷಿಪ್ತ ಮಾಹಿತಿ ತರುವ ಪ್ರಯುಕ್ತ ಸರ್ಕಾರ ವಿವಿಧ ಯೋಜನೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಯಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಂದು ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆಯಲಾಗುವುದೆಂದು ತಿಳಿಸಿದರು. ಇದೇ ಸಮಯದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ, ಪ್ರತಿ ತಿಂಗಳು 5ನೇ ತಾರೀಖಿನಂದು ಮಾಸಿಕ ಕೆಡಿಪಿ ಸಭೆ ಕಡ್ಡಾಯವಾಗಿ ನಡೆಸಲಾಗುವುದು. ಎಲ್ಲ ಇಲಾಖೆ ಅಧಿಕಾರಿ ಸಮಗ್ರ ಮಾಹಿತಿ ಸಮೇತ ಸಭೆಗೆ ತಪ್ಪದೆ ಹಾಜರಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ: ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಮಾತನಾಡಿ, ತಾಲೂಕಿನ ಒಟ್ಟು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 57,235 ಜನರಿಗೆ ರಕ್ತಲೇಪನಗಳಲ್ಲಿ ಮಲೇರಿಯಾ ಪ್ರಕರಣಗಳು ಪಿವಿ 137 ಹಾಗೂ ಪಿಎಫ್ 26 ಪ್ರಕರಣಗಳು ಕಂಡುಬಂದಿವೆ. ಮಹಿಳಾ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಒಟ್ಟು 2251 ಸಾಧನೆಯಾಗಿದೆ. ಡಿಪಿಟಿ ಮತ್ತು ಪೋಲಿಯೋ 2792 ಸಾಧನೆಯಾಗಿದೆ ಎಂದು ವಿವರಿಸಿದ ಅವರು, ಲಿಂಗಸ್ಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಅಳವಡಿಸುವ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಯಂತ್ರ ನಿರ್ವಹಣೆಗೆ ತಜ್ಞ ವೈದ್ಯ ರೇಡಿಯಾಲಾಜಿಸ್ಟ್ ವೈದ್ಯರಿದ್ದು, ರೇಡಿಯೋಗ್ರಾಫರ್, ಟೆಕ್ನಿಷಿಯನ್ ಅಟೆಂಡರ್ ಹುದ್ದೆಗಳು ಭರ್ತಿ ಮಾಡಬೇಕಿದೆ ಎಂದು ತಿಳಿಸಿದರು.
ಶಿಕ್ಷಣ: ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ ಎಂದು ತಾಪಂ ಅಧ್ಯಕ್ಷೆ ಬಸಮ್ಮ ಯಾದವ್ ಪ್ರಶ್ನೆಗೆ, ಈಗಾಗಲೇ ಪ್ರೌಢ ಶಾಲೆಗಳಿಗೆ ನೇಮಕ ಮಾಡಲಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಶೀಘ್ರದಲ್ಲಿ ಮಾಡಲಾಗುವುದು. ತಾಲೂಕಿಗೆ ನೂತನವಾಗಿ 4084 ಬೈಸಿಕಲ್ಗಳು ಬಂದಿದ್ದು, ವಿತರಿಸಲು ಕ್ರಮ ಕೈಗೊಳ್ಳಲಾಗವುದೆಂದು ಸ್ಪಷ್ಟಪಡಿಸಿದರು.
ಕೃಷಿ: ತಾಲೂಕಿನಾದ್ಯಂತ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಜೋಳ, ಮೆಕ್ಕೆಜೋಳ, ಗೋಧಿ, ಕಡಲೆ, ಹುರಳಿ, ಸೂರ್ಯಕಾಂತಿ, ಕುಸುಬೆ, ಅಗಸಿ, ಶೇಂಗಾ, ಕಬ್ಬು ಸೇರಿದಂತೆ 93,612 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸಸ್ಯ ಸಂರಕ್ಷಣ ಯೋಜನೆಯಡಿ ಪೀಡೆನಾಶಕ, ಕೈಚಾಲಿತ ಉಪಕರಣ ಭೌತಿಕ ಸಾಧನೆಯಾಗಿದೆ ಹಾಗೂ 2013-14ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಗುರುಗುಂಟಾ, ಹೊಸಗುಡ್ಡ, ರೋಡಲಬಂಡಾ, ಸಂತೆಕೆಲ್ಲೂರು, ಮಾವಿನಬಾವಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಿಬ್ಬಂದಿ ಶೋಕತ್ ಅಲಿ ವಿವರಿಸಿದರು. ಸರ್ಕಾರ ರೈತರಿಗೆ ಅನೇಕ ಯೋಜನೆಗಳು ಜಾರಿಗೆ ತಂದಿದ್ದು, ಕೃಷಿ ಪರಿಕರಗಳನ್ನು ರೈತರಿಗೆ ವಿತರಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತಂದು ವಿತರಿಸಬೇಕು. ಟಿಎಸ್ಪಿ ಹಾಗೂ ಎಸ್ಸಿಪಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದೆಂದು ತಾಪಂ ಅಧ್ಯಕ್ಷೆ ಬಸಮ್ಮ ಎಚ್ಚರಿಕೆ ನೀಡಿದರು.
ಶಿಶು ಅಭಿವೃದ್ಧಿ: ತಾಲೂಕಿನಲ್ಲಿ ಕಾರ್ಯ ನಿರ್ವಹಿಸುವ 525 ಅಂಗನವಾಡಿ ಕೇಂದ್ರಗಳ ಪೈಕಿ 288 ಸ್ವಂತ ಕಟ್ಟಡ ಹೊಂದಿದ್ದು, 10 ಸಮುದಾಯ ಭವನದಲ್ಲಿ, 6 ಪ್ರಾಥಮಿಕ ಶಾಲೆಗಳಲ್ಲಿ, 5 ಪಂಚಾಯ್ತಿ ಕಟ್ಟಡದಲ್ಲಿ, 201 ಬಾಡಿಗೆ ಕಟ್ಟಡದಲ್ಲಿ, 7 ದೇವಸ್ಥಾನಗಳಲ್ಲಿ ಹಾಗೂ ಇತರೆ 8 ಕಡೆಗಳಲ್ಲಿ ನಡೆಸಲಾಗುತ್ತಿದೆ. ಸ್ವಂತ ಕಟ್ಟಡವಿಲ್ಲದೆ ಬೇರೆಡೆ ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳ ಪೈಕಿ ಕೆಲವು ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುತ್ತಿದೆ. ಇನ್ನು ಕೆಲವೆಡೆ ನಿವೇಶನಕ್ಕಾಗಿ ಆಯಾ ಗ್ರಾಪಂಗೆ ಪತ್ರ ಬರೆಯಲಾಗಿದೆ ಎಂದು ಸಿಡಿಪಿಒ ಪ್ರಭಾಕರ ವಿವರಿಸಿದರು. ಇದಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿವೇಶನಕ್ಕಾಗಿ ಕಳೆದ 3-4 ವರ್ಷಗಳಿಂದ ಪತ್ರ ಬರೆದಂತೆ ಇನ್ನು 2 ವರ್ಷ ಪತ್ರ ಬರೆದರೂ ನಿವೇಶನ ದೊರೆಯುವುದಿಲ್ಲ. ಒಟ್ಟು ಎಷ್ಟು ಅಂಗನವಾಡಿಗಳಿಗೆ ನಿವೇಶನದ ಅಗತ್ಯವಿದೆ ಎಂಬ ಕುರಿತು ಮಾಹಿತಿ ಕೊಡಿ ಆಯಾ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳ ಜೊತೆ ಸಭೆ ನಡೆಸಿ ಜನವರಿ 15ರೊಳಗೆ ನಿವೇಶನ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದು ಸೂಚಿಸಿದರು.
ತೋಟಗಾರಿಕೆ: ರೈತರಿಗೆ ಸಹಾಯ, ತರಬೇತಿ, ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಪ್ರಗತಿ ಕುರಿತು ಇಲಾಖೆ ಅಧಿಕಾರಿ ಎಚ್. ಹಿರೇಕುರಬರ ವಿವರಿಸಿದರು. ಇದಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಉಚಿತವಾಗಿ ದೊರೆಯುವ ನಿಂಬು, ಕರಿಬೇವು, ನುಗ್ಗೆ, ಅಲಂಕಾರಿಕ ಕುಂಡ ಸೇರಿದಂತೆ ವಿವಿಧ ಸಸಿಗಳನ್ನು ಸ್ವಂತ ಕಟ್ಟಡ ಹಾಗೂ ಕಂಪೌಂಡ್ ವ್ಯವಸ್ಥೆ ಇರುವ ಪ್ರಾಥಮಿಕ, ಪ್ರೌಢ ಶಾಲೆಗಳು, ವಸತಿ ನಿಲಯಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಎನ್ಆರ್ಇಜಿ ಯೋಜನೆಯಡಿ ಹಾಕುವುದರಿಂದ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯಲಿದೆ ಮತ್ತು ನೈರ್ಮಲ್ಯ ಕಾಪಾಡಬಹುದಾಗಿದೆ. ಈ ನಿಟ್ಟಿನಲ್ಲಿ ಈ ಮೂರು ಇಲಾಖೆಗಳು ಒಗ್ಗೂಡಿಸುವ ಕ್ರಿಯಾ ಯೋಜನೆ ತಯಾರಿಸಿ ಕೊಡುವಂತೆ ಸೂಚಿಸಿದರು. ಅಲ್ಲದೆ ಪಶು ಸಂಗೋಪನಾ ಇಲಾಖೆ ಜಾನುವಾರುಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವ ಅಜೋಲಾ(ಕಪ್ಪೆಜೊಂಡು) ಬೆಳೆಸುವ ಕುರಿತು ರೈತರಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಜಲಾನಯನ: ತಾಲೂಕಿನಾದ್ಯಂತ ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ನೀರು ಸಂಗ್ರಹಣಾ ವಿನ್ಯಾಸ, ಇಂಗು ಗುಂಡಿ ಸೇರಿದಂತೆ ವಿವಿಧ ಭೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದ ಕುರಿತು ದೂರುಗಳು ಕೇಳಿ ಬರುತ್ತಿದ್ದು, ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಭಾವಚಿತ್ರ ತೆಗೆಯಿಸಿ ಬಿಲ್ ಮಾಡಬೇಕೆಂದು ತಾಪಂ ಅಧ್ಯಕ್ಷೆ ಬಸಮ್ಮ ಯಾದವ್ ಒತ್ತಾಯಿಸಿದರು.
ಅರಣ್ಯ: ಪ್ರಸಕ್ತ 2013-14ನೇ ಸಾಲಿನಲ್ಲಿ ಮಳೆಗಾಲದಲ್ಲಿ ಸಸಿ ನೆಟ್ಟು ನೆಡುತೋಪು ಮಾಡಿದ ಪ್ರದೇಶಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ. 2014ನೇ ಸಾಲಿಗೆ ನೆಡುತೋಪು ನಿರ್ಮಿಸಲು ಬೆಳೆಸಿರವ ಸಸಿಗಳ ಪೋಷಣೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ವಿವರಿಸಿದರು. ಈ ಸಮಯದಲ್ಲಿ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆಯಡಿ ಪ್ರತಿ ವರ್ಷ ಸಸಿಗಳ ನೆಡುವ ಕಾರ್ಯ ಮಾಡುತ್ತಾ ಬರಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ಸಸಿಗಳು ಬೆಳೆಯದೆ ಗುಂಡಿಗಳು ಮುಚ್ಚಿ, ಸಸಿಗಳು ಒಣಗಿ ಹೋಗುತ್ತವೆ. ಇದರಿಂದ ಇಲಾಖೆ ಶ್ರಮ ವ್ಯರ್ಥವಾಗಲಿದೆ. ಅಧಿಕಾರಿಗಳು ಸಸಿಗಳ ನಿರ್ವಹಣೆ ಸೌಕರ್ಯ ಒದಗಿಸುವ ಅಗತ್ಯವಿದೆ. ಮುಜಾಫರ್ ಮಾದರಿ(5 ವರ್ಷಗಳ) ಯೋಜನೆ ಕುರಿತು ಗ್ರಾಪಂ.ಗಳಿಗೆ ಮಾಹಿತಿ ನೀಡಬೇಕೆಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶರಣಬಸಪ್ಪ ಸೂಚಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಮಾನಪ್ಪ ಚೌಹಾಣ, ಆರೋಗ್ಯಾಧಿಕಾರಿ ಡಾ. ನಂದಕುಮಾರ, ಜೆಸ್ಕಾಂ ಇಲಾಖೆ ಅಧಿಕಾರಿ ರಿಯಾಜ್ ಅಹ್ಮದ್, ಸಿಡಿಪಿಒ ಪ್ರಭಾಕರ್, ಜಿಪಂ ಅಧಿಕಾರಿ ವೀರಭದ್ರಪ್ಪ, ಬಿಇಒ ಶಾಂತಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ. ರಾಚಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ಎಚ್. ಹಿರೇಕುರಬರ್, ಜಲಾನಯನ ಸಿಬ್ಬಂದಿ ನಾಗರಾಜ, ರೇಷ್ಮೆ ಇಲಾಖೆ ಸಿಬ್ಬಂದಿ ಶಂಕರಗೌಡ, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿ ಮಹಾಂತೇಶ, ಕೈಗಾರಿಕಾ ವಿಸ್ತೀರ್ಣಾಧಿಕಾರಿ ರತ್ನಾ ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

