ರಾಯಚೂರು

ಕ್ಷಮೆ ಕೇಳ್ದಿದ್ರೆ ವಜ್ಜಲ್ ಮನೆಗೆ ಮುತ್ತಿಗೆ

Published On :

ಲಿಂಗಸ್ಗೂರು: ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸಿದರೆ ರಕ್ತಪಾತವಾಗಲಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಅವರು ಹೇಳಿರುವುದು ಖಂಡನೀಯ. ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟ ಎಚ್ಚರಿಕೆ ನೀಡಿದೆ.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ದಸಂಸ ಒಕ್ಕೂಟದ ಮುಖಂಡರಾದ ಹನುಮಂತಪ್ಪ ತವಗ, ಕುಪ್ಪಣ್ಣ ಹೊಸಮನಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಶಾಸಕ ಮಾನಪ್ಪ ವಜ್ಜಲರು ಇಂತಹ ಹೇಳಿಕೆ ನೀಡಿರುವುದು ಮಾದಿಗ, ಚಲವಾದಿ ಸೇರಿದಂತೆ ದಲಿತರಿಗೆ ನೋವುಂಟು ಮಾಡಿದೆ. 1974- 75ರಲ್ಲಿ ಪರಿಶಿಷ್ಟ ಜಾತಿಗೆ ಸೇರ್ಪಡೆಗೊಂಡ ಭೋವಿ, ವಡ್ಡರ್ ಸಮಾಜದಿಂದ ಲಿಂಗಸ್ಗೂರು ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡ ಶಾಸಕ ವಜ್ಜಲರು ದಲಿತರ ಅಭಿವೃದ್ಧಿಗೆ ಬೆಂಬಲಿಸಬೇಕೇ ವಿನಃ ಇಂತಹ ಹೇಳಿಕೆ ನೀಡುವುದು ಸರಿಯಲ್ಲ.
ಖಂಡನೆ: ಪರಿಶಿಷ್ಟ ಜಾತಿಯ ಎಲ್ಲ 101 ಜಾತಿಗಳ ಬಗ್ಗೆ ತಮಗೆ ಗೌರವವಿದ್ದು, ಹಿಂದುಳಿದ ಮಾದಿಗ, ಚಲವಾದಿ, ಕೊರಮ, ಕೊರಚ ಸೇರಿದಂತೆ ಇನ್ನಿತರೆ ಜನಾಂಗದ ಅಭಿವೃದ್ಧಿಗೆ ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸಬೇಕೆಂಬ ನಮ್ಮ ಹೋರಾಟಕ್ಕೆ ಬೆಂಬಲಿಸದೆ, ಜಾರಿಯಾದರೆ ರಕ್ತಪಾತವಾಗಲಿದೆ ಎಂದು ಸದನದಲ್ಲಿ ಹೇಳಿಕೆ ನೀಡಿರುವುದು ಖಂಡನೀಯ.
ಕೂಡಲೇ ಶಾಸಕ ಮಾನಪ್ಪ ವಜ್ಜಲರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಜೊತೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ವಜ್ಜಲರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಗ್ಯಾನಪ್ಪ ಕಟ್ಟಿಮನಿ, ಹುಲಗಪ್ಪ ಕೆಸರಟ್ಟಿ, ಹಾಜಪ್ಪ ಕರಡಕಲ್, ಶರಣಪ್ಪ ಹುನಕುಂಟಿ, ನಾಗರಾಜ ಗೊರೇಬಾಳ, ನಾಗಪ್ಪ ನೀರಲಕೇರಿ ಇದ್ದರು.

ಸದಾಶಿವ ವರದಿ; ಶಾಸಕರಿಗೆ  ಬೆಂಬಲ
ಮಸ್ಕಿ: ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅವರ ವಿರುದ್ಧ ಹಾಗೂ ಭೋವಿ ಸಮಾಜದ ಬಗ್ಗೆ ದಲಿತ ಸಂಘರ್ಷ ಸಮಿತಿ, ಅಸ್ಪೃಶ್ಯ ಸಮಾಜ ಮಹಾಸಭಾ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹೇಳಿಕೆ ನೀಡಿರುವುದನ್ನು ಇಲ್ಲಿನ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಮುಖಂಡರು ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ವೇದಿಕೆಯ ಮುಖಂಡರು, ನ್ಯಾ. ಸದಾಶಿವ ಆಯೋಗ ವರದಿ ಜಾರಿ ಬಗ್ಗೆ ಈಚೆಗೆ ಬೆಳಗಾವಿ ಅಧಿವೇಶನದಲ್ಲಿ ಲಿಂಗಸ್ಗೂರು ಶಾಸಕ ಮಾನಪ್ಪ ವಜ್ಜಲ್ ಅವರ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ವರದಿ ಜಾರಿಯಾದರೆ 99 ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದು ವಿರೋಧಿಸಿ ಹೇಳಿಕೆ ನೀಡಿದ್ದು ಸರಿಯಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕು ಗೋಡೆಗಳ ಮಧ್ಯ ಕುಳಿತು ತಯಾರಿಸಿದ ವರದಿ ಜಾರಿಗೆ ಭೋವಿ ಸಮಾಜ ವಿರೋಧಿಸುತ್ತದೆ. ಅಂಥ ವರದಿಯ ಜಾರಿಯಿಂದ ಸಮಾಜದಲ್ಲಿನ ಸಾಮರಸ್ಯವನ್ನು ಹಾಳುಗೆಡುವ ಕಾರ್ಯ ಸರ್ಕಾರ ಮಾಡಬಾರದು. ಸದ್ಯದ ಮೀಸಲಾತಿ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಅಧ್ಯಕ್ಷ ಮಲ್ಲಯ್ಯ ಛಾವಣಿ ಹಾಗೂ ಭೋವಿ ಯುವ ವೇದಿಕೆ ಮುಖಂಡರಾದ ಸಾರಪ್ಪ ಬಂಗಾಲಿ, ರವಿಕುಮಾರ ಚಿಗರಿ, ಶೇಖರಪ್ಪ ಬೆಳಗಲ್, ನಾಗರಾಜ, ವೀರೇಶ ಬಡಗಿ, ದುರುಗಪ್ಪ ಗೋನವಾರ, ರಮೇಶ ಗುಡಸಲಿ, ಶಿವರಾಜ ಮತ್ತಿತರರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.