22ಕ್ಕೆ ರೈತ ಸಂಘದ ಸಭೆ
ಕ.ಪ್ರ. ವಾರ್ತೆ, ರಾಯಚೂರು, ಡಿ.17
ಅಕ್ಕಿ ಗಿರಣಿಗಳ ಮಾಲೀಕರು ಸರ್ಕಾರದ ಲೆವಿ ನೀತಿ ವಿರೋಧಿಸಿ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ರಾಜ್ಯ ರೈತ ಸಂಘವು, ಸರ್ಕಾರ ಲೆವಿ ನೀತಿಯನ್ನು ಸಂಪೂರ್ಣ ರದ್ದುಗೊಳಿಸುವಂತೆ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ಸಂಘದ ರಾಜ್ಯ ಸಮಿತಿಯ ಸಭೆಯನ್ನು ಡಿ.22ರಂದು ಶಿವಮೊಗ್ಗದಲ್ಲಿ ಕರೆಯಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರಸಕ್ತ ವರ್ಷ 13.5 ಲಕ್ಷ ಟನ್ ಲೆವಿ ಅಕ್ಕಿ ಸಂಗ್ರಹಣೆಯ ಗುರಿಯನ್ನು ನಿಗದಿ ಮಾಡಿರುವುದು ತೀರಾ ಅವೈಜ್ಞಾನಿಕವಾಗಿದೆ. ಜಿಲ್ಲೆಯಲ್ಲಿ ಸೋನಾ ಮಸೂರಿ ಬತ್ತ ಮಾತ್ರ ಬೆಳೆಯಲಾಗುತ್ತದೆ. ಲೆವಿ ಅಕ್ಕಿ ಖರೀದಿಸಿ ಸರ್ಕಾರಕ್ಕೆ ಒದಗಿಸುವಂಥ ಪರಿಸ್ಥಿತಿಯಿದೆ ಎಂದು ಟೀಕಿಸಿದರು.
ಹೆಚ್ಚಳ ಸಮಂಜಸವಲ್ಲ: ಲೆವಿ ಅಕ್ಕಿಯ ಪ್ರಮಾಣ ಹೆಚ್ಚಳ ಸಮಂಜಸವಲ್ಲ. ಅಕ್ಕಿ ಗಿರಣಿಗಳ ಮಾಲೀಕರು ಸದ್ಯ ನಡೆಸುತ್ತಿರುವ ಮುಷ್ಕರದಿಂದಾಗಿ ಕಾರ್ಮಿಕರು, ರೈತರು, ಹಾಗೂ ಸಾಮಾನ್ಯ ಗ್ರಾಹಕರಿಗೂ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅಕ್ಕಿ ಗಿರಣಿಗಳ ಮಾಲಿಕರು ಸರ್ಕಾರಕ್ಕೆ ಲೆವಿ ಅಕ್ಕಿ ನೀಡದೇ ವಿರೋಧಿಸಬೇಕು. ಅಕ್ಕಿ ಗಿರಣಿಗಳ ಚಟುವಟಿಕೆಗಳನ್ನು ಪುನಾರಂಭಿಸಬೇಕು. ಹಾಗೆ ಮಾಡಿ ದಲ್ಲಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ರಾಜ್ಯ ರೈತ ಸಂಘವು ಬೆಂಬಲಿಸಲಿದೆ ಎಂದು ತಿಳಿಸಿದರು.
ಈ ಹಿಂದೆ ರಾಜ್ಯ ಸರ್ಕಾರ ರೈತರಿಂದಲೇ ಲೆವಿ ಅಕ್ಕಿ ಸಂಗ್ರಹಿಸುತ್ತಿತ್ತು. ಆದರೆ ರಾಜ್ಯ ರೈತ ಸಂಘ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ನಡೆಸಿದ ಹೋರಾಟದ ಪರಿಣಾಮ ಲೆವಿ ಸಂಗ್ರಹಿಸುವುದನ್ನು ಕೈಬಿಟ್ಟಿತು. ಈಗ ಗಿರಣಿ ಮಾಲೀಕರ ಮೇಲೆ ಲೆವಿ ಹೇರಿಕೆ ಮಾಡುತ್ತಿರುವುದು ಸರಿಯಲ್ಲ. ಅದರಿಂದ ಪರೋಕ್ಷವಾಗಿ ರೈತರ ಮೇಲೂ ಹೊರೆ ಬೀಳುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸಲು ಲೆವಿ ಸಂಗ್ರಹಣೆಯಲ್ಲಿ ಗುರಿ ಹೆಚ್ಚಳ ಮಾಡಿದ್ದು ಸರಿಯಲ್ಲ. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಬಡವರಿಗೆ ನೀಡಬೇಕೇ ವಿನಾ ಅಕ್ಕಿ ಗಿರಣಿಗಳ ಮಾಲೀಕರಿಂದಲ್ಲ ಎಂದು ಆಗ್ರಹಿಸಿದರು.
ಕಾಲುವೆ ಸಮಸ್ಯೆ: ತುಂಗಭದ್ರಾ ಮತ್ತು ನಾರಾಯಣಪುರ ಬಲದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿಗೆ ನೀರೊದಗಿಸುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ನಾರಾಯಣಪುರ ಬಲದಂಡೆ ವ್ಯಾಪ್ತಿಯಲ್ಲಿ ಮಾ.10ರವರೆಗೆ ನೀರು ಹರಿಸುವ ಭರವಸೆ ನೀಡಲಾಗಿದೆ. ಆದರೆ ಕಾಲುವೆಯ ವ್ಯಾಪ್ತಿಯ ಪ್ರದೇಶದಲ್ಲಿ ರೈತರು ಶೇಂಗಾ ಬೆಳೆದಿದ್ದು ಆ ಬೆಳೆಗೆ ಕನಿಷ್ಠ ಮಾರ್ಚ್ 31ರವರೆಗೆ ನೀರಿನ ಅವಶ್ಯಕತೆಯಿದೆ. ಮಾ.10ಕ್ಕೆ ನೀರು ಸ್ಥಗಿತಗೊಳಿಸುವುದರಿಂದ ರೈತರಿಗೆ ನೀರಿನ ಅಭಾವವಾಗಿ ಬೆಳೆ ಹಾನಿ ಸಾಧ್ಯತೆಯಿದೆ ಎಂದು ಆರೋಪಿಸಿದರು.
ಅದೇ ರೀತಿ ತುಂಗಭದ್ರಾ ಎಡದಂಡೆ ಕಾಲುವೆಯ ವ್ಯಾಪ್ತಿಯ ಮೇಲ್ಭಾಗದಲ್ಲಿ ರೈತರು ನೀರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದು, ಅದರಿಂದ ಕಾಲುವೆಯ ಕಡೆಯ ಭಾಗದ ಮಾನವಿ ತಾಲೂಕಿನಲ್ಲಿ ನೀರು ರೈತರಿಗೆ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಉಗ್ರ ಹೋರಾಟದ ಎಚ್ಚರಿಕೆ: ಕೂಡಲೇ ತುಂಗಭದ್ರಾ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯ ಮೇಲ್ಭಾಗದಲ್ಲಿ ನೀರಿನ ಬಳಕೆಗೆ ಕಡಿವಾಣ ಹಾಕಿ ಕೆಳಭಾಗದ 104ನೇ ಮೈಲ್ನಲ್ಲಿ ಸಮರ್ಪಕ ನೀರೊದಗಿಸುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದ ಅವರು, ರಾಯಚೂರಿನ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿಯ ವೇಳೆ ರೈತರಿಗೆ ವಂಚಿಸಲಾಗುತ್ತಿದೆ. ಈ ಕುರಿತು ಈ ಹಿಂದೆ ಅನೇಕ ಬಾರಿ ವರ್ತಕರ ಸಭೆ ನಡೆಸಿ ಚರ್ಚಿಸಿದರೂ ಸಮಸ್ಯೆ ಪರಿಹಾರ ಕಂಡಿಲ್ಲ ಎಂದು ಆರೋಪಿಸಿದರು.
ಎಪಿಎಂಸಿ ಯಲ್ಲಿ ರೈತರಿಗೆ ತೂಕದಲ್ಲಿ ಮತ್ತು ಸ್ಯಾಂಪಲ್ ಪಡೆಯುವಲ್ಲಿ ವಂಚಿಸುವುದು ನಿಲ್ಲದೇ ಹೋದಲ್ಲಿ ರಾಜ್ಯ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪ್ರಮುಖರಾದ ಅಮರಣ್ಣ ಗುಡಿಹಾಳ, ರಮೇಶ್, ನರಸಿಂಗರಾವ್, ಜಯಪ್ಪಸ್ವಾಮಿ, ದೊಡ್ಡಬಸನಗೌಡ, ಈರನಗೌಡರು ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

