ನಂದವಾಡಗಿ ಮೂಲ ಯೋಜನೆ ಜಾರಿಗೆ ರೈತ ಸಂಘ ಒತ್ತಾಯ
ಕ.ಪ್ರ. ವಾರ್ತೆ ಲಿಂಗಸ್ಗೂರು ಡಿ.23
ಸರ್ಕಾರ ನಂದವಾಡಗಿ ಏತನೀರಾವರಿ ಯೋಜನೆ ಜಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿರುವುದು ಸ್ವಾಗತಾರ್ಹ ಎಂದಿರುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಮೂಲ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದ ಮಟ್ಟದಲ್ಲಿ 3.75 ಟಿಎಂಸಿ ನೀರು ಬಳಸಿಕೊಂಡು ನಂದವಾಡಗಿ ಏತನೀರಾವರಿ ಯೋಜನೆ ಜಾರಿಗೆ ಟೆಂಡರ್ ಕರೆಯಲು ಹೊರಟಿದ್ದು, ಇದರಿಂದ ಲಿಂಗಸ್ಗೂರು ಮತ್ತು ಮಾನವಿ ತಾಲೂಕಿನ ಯೋಜನೆ ವ್ಯಾಪ್ತಿಯ ಹಳ್ಳಿಗಳು ನೀರಾವರಿಯಿಂದ ವಂಚಿತಗೊಳ್ಳಲಿವೆ.
ಮೂಲ ಯೋಜನೆಯಿಂದೇನು ಲಾಭ?: ಮೂಲ ಯೋಜನೆ ಜಾರಿಗೆ ವಿವಿಧ ಮೂಲಗಳಿಂದ ನೀರು ಪಡೆಯಲು ಅವಕಾಶವಿದ್ದು, 6ರಿಂದ 8 ಟಿಎಂಸಿ ನೀರು ಹಂಚಿಕೆ ಮಾಡಿದರೆ ಮಾತ್ರ ಲಿಂಗಸ್ಗೂರು ತಾಲೂಕಿನ 47 ಹಳ್ಳಿಗಳು, ಮಾನವಿ ತಾಲೂಕಿನ 23 ಹಳ್ಳಿಗಳು ಹಾಗೂ ಹುನಗುಂದ ತಾಲೂಕಿನ 5 ಹಳ್ಳಿಗಳು ಸೇರಿದಂತೆ 53 ಸಾವಿರ ಹೆಕ್ಟೇರ್ಗೆ ನೀರಾವರಿ ಕಲ್ಪಿಸಬಹುದಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ಮೂಲ ಯೋಜನೆ ಜಾರಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಜಾರಿಗೆ 10 ಸಾವಿರ ಕೋಟಿ ಮೀಸಲಿಟ್ಟಿರುವುದಾಗಿ ಹೇಳುತ್ತಿದೆ. ನಾರಾಯಣಪುರ ಬಲದಂಡೆ 0ದಿಂದ 95 ಕಿ.ಮೀ.ವರೆಗೆ ಮುಖ್ಯ ಕಾಲುವೆ, ಹೊಲಗಾಲುವೆಗಳ ದುರಸ್ತಿಗೆ ಗಮನ ಹರಿಸಬೇಕು. ನಂತರ 95ರಿಂದ 154 ಕಿಮೀ ವಿಸ್ತರಣೆಗೆ ಮುಂದಾಗಬೇಕು. ರೈತರ ಜಮೀನುಗಳಿಗೆ ಸಮರ್ಪಕ ನೀರಿಲ್ಲದೆ ಬೆಳೆಗಳು ಒಣಗುವ ಹಂತದಲ್ಲಿದ್ದು, ಪಂಪ್ಸೆಟ್ ಅವಲಂಬಿತ ಗ್ರಾಮೀಣ ಭಾಗದಲ್ಲಿ 8 ತಾಸು ವಿದ್ಯುತ್ ಪೂರೈಕೆ ಮಾಡಬೇಕು. ಕನಿಷ್ಠ ಒಂದು ಗ್ರಾಮಕ್ಕೆ 4 ವಿದ್ಯುತ್ ಪರಿವರ್ತಕ ಅಳವಡಿಸಬೇಕು.
ರೈತರು ಬೆಳೆದ ಬತ್ತ, ಹತ್ತಿ, ತೊಗರಿ, ಕಡಲೆ ಧಾರಣೆ ಕುಸಿತದಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಮಾರುಕಟ್ಟೆ ಪ್ರವೇಶಕ್ಕೆ ಗಮನ ಹರಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ದಲ್ಲಾಳಿ ಹಾಗೂ ತೂಕದಲ್ಲಿ ನಷ್ಟವಾಗುತ್ತಿದೆ. ರೈತ, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

