ಶಂಕಿತ ಡೆಂಘೀಗೆ ಯುವಕ ಬಲಿ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಡಿ.29
ತಾಲೂಕಿನ ಕಾಳಾಪುರ ಗ್ರಾಪಂ ವ್ಯಾಪ್ತಿಯ ಫೂಲಬಾವಿ ಗ್ರಾಮದಲ್ಲಿ ಶಂಕಿತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಶರಣಬಸವ ಬಸವರಾಜ(20) ಎಂಬ ಯುವಕ ಶನಿವಾರ ಅಸುನೀಗಿದ್ದಾನೆ. ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಶಂಕಿತ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿವೆ. ಗ್ರಾಮದ ಶರಣಬಸವ ಎಂಬ ಯುವಕ ವಾರದಿಂದ ಜ್ವರದಿಂದ ಬಳಲುತ್ತಿದ್ದ. ಲಿಂಗಸ್ಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಬೆಳಗಾವಿ ಆಸ್ಪತ್ರೆಗೆ ಡಿ.22ರಂದು ಕರೆದೊಯ್ಯಲಾಗಿತ್ತು.
ಚಿಕಿತ್ಸೆ: ಈಗಾಗಲೇ ಶಂಕಿತ ಡೆಂಘೀ ಪ್ರಕರಣದಿಂದ ಮದ್ಯಮ್ಮ ಮಾನಯ್ಯ(38), ಗಂಗಾಧರ ಅಮರಯ್ಯ(20), ಮಾನಪ್ಪ ದ್ಯಾವಪ್ಪ(26), ಶಾಂತಮ್ಮ ದುರುಗಪ್ಪ(25), ಸತ್ಯನಾರಾಯಣ ರೆಡ್ಡಿ(35), ಲಕ್ಷ್ಮಮ್ಮ ಅಮರೇಶ(22) ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಗ್ರಾಮದ ಸುಮಾರು 30 ಜನರು ಶಂಕಿತ ಡೆಂಘೀ ಪ್ರಕರಣಕ್ಕೆ ತುತ್ತಾಗಿದ್ದಾರೆ ಎನ್ನುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಲ್ಲಿ ಶನಿವಾರ ಹನುಮಪ್ಪ ಸೋಮಪ್ಪ(56) ಎಂಬುವರು ಬಳ್ಳಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಗ್ರಾಮದಲ್ಲಿ ಶಂಕಿತ ಡೆಂಘೀ ಪ್ರಕರಣಗಳು ಉಲ್ಬಣಿಸುವ ಭೀತಿ ಎದುರಾಗಿದೆ ಎಂದು ತಾಪಂ ಮಾಜಿ ಸದಸ್ಯ ದ್ಯಾಮಣ್ಣ ನಾಯಕ, ಅಯ್ಯಪ್ಪ ವಕೀಲರು, ವೆಂಕನಗೌಡ ಐದನಾಳ, ಭೀಮರಾಯ, ರಾಜಶೇಖರ ಮತ್ತು ಗ್ರಾಮದ ಮುಖಂಡರು ತಿಳಿಸಿದರು.
ಕಲುಷಿತ ನೀರು: ಗ್ರಾಮದ ಮಧ್ಯಭಾಗದಲ್ಲಿ ಹಳ್ಳ ಹರಿಯುತ್ತಿದೆ. ಹಳ್ಳ ಪಕ್ಕದಲ್ಲಿ ಬಾವಿ ಇರುವ ಪ್ರಯುಕ್ತ ನೀರು ಕಲುಷಿತಗೊಂಡಿವೆ. ಇದೇ ಬಾವಿಗೆ ಬೋರ್ವೆಲ್ ಅಳವಡಿಸಿ ಪೈಪ್ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕಲುಷಿತ ತಾಣಗಳಲ್ಲಿ ಫಾಗಿಂಗ್ ಅಥವಾ ಸ್ವಚ್ಛತೆ ಕೈಗೊಳ್ಳುವಲ್ಲಿ ಗ್ರಾಪಂ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
15 ದಿನಗಳಾದ್ರೂ ಕ್ರಮವಿಲ್ಲ: ಶಂಕಿತ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದಾಗ 15 ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ ವೈದ್ಯರು ಗ್ರಾಮದ ಸುಮಾರು 100 ಜನರಿಂದ ರಕ್ತ ಪಡೆದು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇದುವರೆಗೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಕೂಡಲೇ ಆರೋಗ್ಯ ಇಲಾಖೆ ಮತ್ತು ಗ್ರಾಪಂ ಆಡಳಿತ ಮಂಡಳಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

