ಜಿಲ್ಲೆ ದಾಸ ಸಾಹಿತ್ಯದ ಗಂಗೋತ್ರಿ
ರಾಯಚೂರು: ವೇದ ಶಾಸ್ತ್ರಗಳ ಅಧ್ಯಯನದಿಂದ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನದ ವೃದ್ಧಿಯ ಮೂಲಕ ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥರು ನುಡಿದರು.
ನಗರದ ಯಾದವ ಸಂಘದ ಮೈದಾನದಲ್ಲಿ ಭಾನುವಾರ ರಾತ್ರಿ 31ನೇ ಮನ್ಯಾಯ ಸುಧಾಮಂಗಳ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಆಧ್ಯಾತ್ಮ ಗ್ರಂಥಗಳ ಅಧ್ಯಯನದಿಂದ ಬದುಕು ಸಾರ್ಥಕತೆ ಕಾಣಲು ಸಾಧ್ಯ. ತತ್ವಜ್ಞಾನದ ಅಮೃತ ಹಾಗೂ ಮನ್ಯಾಯ ಸುಧಾ ಪಠಣದಿಂದ ಲೌಕಿಕ ಶ್ರೀಮಂತಿಕೆ ದೊರೆಯುತ್ತದೆ ಎಂದರು.
ಭಗವಂತನ ನಾಮಸ್ಮರಣೆ ಮಾಡಿ: ಬೌತಿಕಕ್ಕಿಂತ ಬೌದ್ಧಿಕ ಪ್ರಗತಿ ಇಂದಿನ ಅವಶ್ಯಕತೆಯಾಗಿದೆ. ಮಾನವ ಆಸೆ ಆಮಿಷಗಳಿಗೆ ಬಲಿಯಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದು, ಭಗವಂತನ ನಾಮಸ್ಮರಣೆಯಿಂದ ಎಲ್ಲವನ್ನೂ ಪಡೆಯಬಹುದಾಗಿದೆ ಎಂದ ಅವರು, ಭಗವಂತನ ಅನುಗ್ರಹಕ್ಕಾಗಿ ವೇದ ಗ್ರಂಥಗಳ ಅಧ್ಯಯನ ಮಾಡುವಂತೆ ಸಲಹೆ ನೀಡಿದರು.
ತತ್ವಜ್ಞಾನವನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ನಗರದಲ್ಲಿ ಮನ್ಯಾಯ ಸುಧಾ ಮಂಗಳ ಮಹೋತ್ಸವ ಆಯೋಜಿಸಲಾಗಿದೆ. ರಾಯಚೂರು ಜಿಲ್ಲೆಯು ದಾಸಸಾಹಿತ್ಯದ ಗಂಗೋತ್ರಿಯಾಗಿದೆ. ಗೋಪಾಲದಾಸರು, ಜಗನ್ನಾಥದಾಸರು ಸೇರಿದಂತೆ ಅನೇಕ ದಾಸವರೇಣ್ಯರು ಬಾಳಿ ಬದುಕಿದ ನಾಡಿದು ಎಂದು ಕೊಂಡಾಡಿದರು.
ಜಾಗೃತಿ ಮೂಡಿಸುವ ಕಾರ್ಯ: ದಾಸಶ್ರೇಷ್ಠರು ನೆಲೆಸಿದ್ದ ನಾಡಿನಲ್ಲಿ ಸುಧಾ ಮಂಗಳ ಮಹೋತ್ಸವ ಆಯೋಜನೆ ತಮ್ಮ ಬಹುದಿನದ ಕನಸಾಗಿತ್ತು. ದಾಸರು ಮಾನವ ಕುಲಕ್ಕೆ ಸಾಹಿತ್ಯದ ಮೂಲಕ ಭಗವಂತನ ಕೃಪೆಯಾಗುವಂತೆ ಮಾಡಿದ್ದಾರೆ. ಜಗನ್ನಾಥ ದಾಸರು ತಪಸ್ಸು, ತ್ಯಾಗದ ಮೂರ್ತಿಯಾಗಿ ಜನರಿಗೆ ದಾಸ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆಂದು ಶ್ಲಾಘಿಸಿದರು.
ಜ್ಞಾನಗಂಗೆಯನ್ನು ಎಲ್ಲೆಡೆ ಪಸರಿಸುವಲ್ಲಿ ಹರಿದಾಸರ ಕೊಡುಗೆ ಅಪಾರ. ಭಗವಂತನ ನಾಮ ಸ್ಮರಣೆಯನ್ನು ಮನೆ ಮನಗಳಿಗೆ ಹರಿಸುವ ಮೂಲಕ ಸಕಲರಿಗೆ ಒಳ್ಳೆಯದಾಗುವಂತೆ ಕರುಣಿಸಿದ್ದಾರೆ. ಅಂಥ ಹರಿದಾಸರು ನೆಲೆಸಿದ್ದ ನಾಡಿನಲ್ಲಿ ಸುಧಾಮಂಗಳ ಮಹೋತ್ಸವ ನಡೆಯುತ್ತಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ಧರ್ಮ ರಕ್ಷಣೆ ಕಾರ್ಯದಲ್ಲಿ ಮುಂಚೂಣಿ: ಸುವಿದ್ಯೇಂದ್ರ ತೀರ್ಥರು ತಮ್ಮ ಅನುಗ್ರಹ ಸಂದೇಶದಲ್ಲಿ ಪೇಜಾವರ ಶ್ರೀಗಳು ಆರೋಗ್ಯ, ಶಿಕ್ಷಣ ಮತ್ತಿತರೆ ಕ್ಷೇತ್ರಗಳಲ್ಲಿ ಅನೇಕ ಸಂಸ್ಥೆಗಳನ್ನು ನಡೆಸುವ ಮೂಲಕ ಬ್ರಾಹ್ಮಣ ಸಮಾಜವಷ್ಟೇ ಅಲ್ಲ ಎಲ್ಲರ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದಾರೆ. ಅದರಲ್ಲೂ ಹಿಂದೂ ಸಂಸ್ಕೃತಿ, ಧರ್ಮ ರಕ್ಷಣೆಯ ಕಾರ್ಯದಲ್ಲಿ ಅವರು ಎಂದಿಗೂ ಮುಂಚೂಣಿಯಲ್ಲಿದ್ದಾರೆಂದು ಶ್ಲಾಘಿಸಿದರು.
ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಮತ್ತಿತರ ಮಠಾಧೀಶರು, ಮಂತ್ರಾಲಯ ಮಠದ ಶ್ರೀಗಳ ಆಪ್ತ ಕಾರ್ಯದರ್ಶಿ ರಾಜಾ ಎಸ್. ರಾಜಗೋಪಾಲಾಚಾರ್, ಆನಂದತೀರ್ಥಾಚಾರ್ಯ ಪಗಡಾಲ ಮತ್ತಿತರರು ಉಪಸ್ಥಿತರಿದ್ದರು.
ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ಆರ್ಡಿಎ ಮಾಜಿ ಅಧ್ಯಕ್ಷ ಜಗನ್ನಾಥ ಕುಲಕರ್ಣಿ, ನಗರಸಭೆ ಹಿರಿಯ ಸದಸ್ಯ ಮಾರೆಪ್ಪ, ಜೆಡಿಎಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಮತ್ತಿತರರು ಈ ವೇಳೆ ಪೇಜಾವರ ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.
ಇದಕ್ಕೂ ಮೊದಲು ನಗರದ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀಗಳ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

