ಕುಡಿಯುವ ನೀರು ಸಂಗ್ರಹ: ನಾಳೆಯಿಂದ ನಿಷೇಧಾಜ್ಞೆ ಜಾರಿ
ರಾಯಚೂರು: ನಗರಕ್ಕೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಗಣೇಕಲ್ ಜಲಾಶಯಕ್ಕೆ ಕುಡಿಯುವ ನೀರು ಸಂಗ್ರಹಿಸುವ ಉದ್ದೇಶ ದಿಂದ ಕಾಲುವೆಯ ಮೈಲ್ 47ರಿಂದ 104ರವರೆಗೆ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕಾಲುವೆಯ ಮೈಲ್ ಸಂಖ್ಯೆ 47ರಿಂದ 104ರವರೆಗೆ ಮುಖ್ಯ ಕಾಲುವೆ ಮೂಲಕ ನೀರು ಹರಿಸಿ ಜಲಾಶಯವನ್ನು ತುಂಬಿಸುವ ಮೂಲಕ ರಾಯಚೂರು ನಗರದ ನೀರಿನ ಸಮಸ್ಯೆ ನಿವಾರಿಸಬಹುದಾಗಿದೆ ಎಂದು ನೀರಾವರಿ ಇಲಾಖೆ ತಿಳಿಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಫೆ.18ರಿಂದ ತುಂಗಭದ್ರಾ ಜಲಾಶಯದಿಂದ ರಾಯಚೂರು ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 600 ಕ್ಯುಸೆಕ್ ನೀರನ್ನು ಎಡದಂಡೆ ಕಾಲುವೆಯ ಮೂಲಕ ಗಣೇಕಲ್ ಜಲಾಶಯಕ್ಕೆ ಹರಿಸಲಾಗುತ್ತದೆ. ರೈತರು ಕೃಷಿ ಕಾರ್ಯಗಳಿಗೆ ಈ ನೀರನ್ನು ಬಳಸದಂತೆ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಫೆ.18ರ ಬೆಳಗ್ಗೆ 6ರಿಂದ ಫೆ. 24ರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅನಧಿಕೃತವಾಗಿ ರೈತರು ಹೊಲಗಳಿಗೆ ನೀರು ಹರಿಸುವುದು ಅಥವಾ ಪಂಪ್ ಸೆಟ್ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಸಂಬಂಧಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳ ಹೊರತು ತೂಬುಗಳನ್ನು ಅನ್ಯರು ತೆಗೆಯುವುದನ್ನು ನಿಷೇಧಿಸಿದ್ದು, ಜಿಲ್ಲಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ರಜೆ ಪಡೆಯದಂತೆ ಹಾಗೂ ಕೇಂದ್ರ ಸ್ಥಾನ ತೊರೆಯದಂತೆ ನೀರಾವರಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಕಳೆದಿದ್ದ ಚಿನ್ನದ ಉಂಗುರ ವಾಪಸ್
ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕ
ಮುದಗಲ್: ಮನೆಯಲ್ಲಿ ಭದ್ರವಾಗಿಟ್ಟಿದ್ದ ಚಿನ್ನದ ಆಭರಣಗಳನ್ನು ದೋಚುವ ಇಂತಹ ದಿನಗಳಲ್ಲಿ ಸ್ಥಳೀಯ ಪೌರ ಕಾರ್ಮಿಕ ಹುಲ್ಲೇಶ ಪೂಜಾರಿ ಮನೆ ಮುಂದಿನ ತ್ಯಾಜ್ಯವನ್ನು ಸಾಗಿಸುವಾಗ ಕಸದ ಬುಟ್ಟಿಯಲ್ಲಿ ಸಿಕ್ಕ ಚಿನ್ನದ ಉಂಗುರವನ್ನು ಕಳೆದುಕೊಂಡಿದ್ದ ಶಿಕ್ಷಕಿ ಸೌಮ್ಯರಿಗೆ ವಾಪಸ್ ನೀಡಿದ ಅಪರೂಪದ ಪ್ರಸಂಗ ಜರುಗಿದೆ.
ಬೆಲೆ ಬಾಳುವ ಚಿನ್ನದ ಉಂಗುರವನ್ನು ಕಳೆದುಕೊಂಡು ಪೇಚಾಡುತ್ತಿದ್ದ ಶಿಕ್ಷಕಿ ವಿಷಯ ತಿಳಿದ ಪೌರ ಕಾರ್ಮಿಕ ಹಲ್ಲೇಶ ಪೂಜಾರಿ ಮತ್ತು ಸಿಬ್ಬಂದಿ ಟ್ಯಾಕ್ಟರಿಯಲ್ಲಿ ಕಸವನ್ನು ವಿಲೇವಾರಿ ಮಾಡುತ್ತಿರುವಾಗ ಸಿಕ್ಕಿದ್ದರಿಂದ ಶಿಕ್ಷಕಿಗೆ ಪೌರ ಕಾರ್ಮಿಕ ಹುಲೇಶ ಪೂಜಾರಿ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಚನ್ನಪ್ಪ, ರವಿಕುಮಾರ ಶಿಕ್ಷಕಿ ಮನೆಗೆ ತೆರಳಿ ಚಿನ್ನದ ಉಂಗುರವನ್ನು ನೀಡಿ ಮಾನವಿಯತೆ ಮೆರೆದಿದ್ದಲ್ಲದೆ ಕರ್ತವ್ಯ ನಿಷ್ಠೆ ತೋರಿಸಿದ್ದಾರೆ.
ಪೌರ ಕಾರ್ಮಿಕರ ಕರ್ತವ್ಯ ನಿಷ್ಠೆಯನ್ನು ಶಿಕ್ಷಕಿ ಸೌಮ್ಯ ಕೊಂಡಾಡಿದ್ದಾರೆ. ಕಡಿಮೆ ವೇತನದಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಇಂತಹ ನಿಷ್ಠೆ ಇರುವುದು ಅತ್ಯಂತ ವಿರಳ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಕಾಂಗ್ರೆಸ್ಗೆ ದ್ರೋಹ ಬಗೆಯಲು ಹುನ್ನಾರ
ಮುದಗಲ್: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದ ವಸಂತಕುಮಾರ, ಈ ಬಾರಿ ದುರ್ಬಲ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಕಾಂಗ್ರೆಸ್ಗೆ ದ್ರೋಹ ಬಗೆಯಲು ಹುನ್ನಾರ ನಡೆಸಿದ್ದಾರೆ ಎಂದು ಡಾ. ಚಂದ್ರಶೇಖರ ಆಶಿಹಾಳ ತಾಂಡ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ಮೂಲಕ ಲಿಂಗಸ್ಗೂರು ವಿಧಾನಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಚಂದ್ರಶೇಖರ್ಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ಮುಖಂಡರು ನೀಡಿರುವ ಹೇಳಿಕೆಯನ್ನು ಖಂಡಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಕಾಂಗ್ರೆಸ್ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರಿಗೆ ಗುರುವಾರ ತಿರುಗೇಟು ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಹಾಗೂ ಟಿಕೆಟ್ ಆಕಾಂಕ್ಷಿ ಟಿ.ಆರ್. ನಾಯ್ಕ ವಿರುದ್ಧ ಹರಿಹಾಯ್ದಿದ್ದಾರೆ. ನನ್ನ ಏಳಿಗೆಯನ್ನು ಸಹಿಸದ ಇವರು ಪತ್ರಿಕೆ ಮೂಲಕ 'ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಪಡೆದಿಲ್ಲವೆಂದು ಸುಳ್ಳು ಹೇಳಲು ಹೊರಟ ಇವರಿಗೆ ಮತಿಭ್ರಮಣೆಯಾಗಿದೆ' ಎಂದು ಕಿಡಿಕಾರಿದರು.
ಕಾಂಗ್ರೆಸ್ಗಾಗಿ ದುಡಿದ ಕುಟುಂಬ: 2008ರ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಿದ್ದೇನೆ. ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರ ನಮ್ಮ ತಾತ ರಾಮಜೀ ನಾಯ್ಕ್ ಅವರ ಕಾಲದಿಂದಲೂ ಮೂಲತಃ ಕಾಂಗ್ರೇಸ್ ಪಕ್ಷಕ್ಕಾಗಿ ನಮ್ಮ ಕುಟುಂಬ ದುಡಿದಿದೆ.
ಸ್ವಗ್ರಾಮದವರೇ ಆದ ಟಿ.ಆರ್. ನಾಯ್ಕ್ ಇದೇ ನಮ್ಮ ತಾತನವರ ಸಹಾಯದಿಂದಲೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆದು ಹಳೆಯದೆಲ್ಲವನ್ನೂ ಮರೆತು ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಸದ್ಯ ಲಿಂಗಸ್ಗೂರು ಕ್ಷೇತ್ರ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸುದ್ದಿ ತಿಳಿದು ಇವರು ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಿದ್ದಾರೆ. ಇವರು ಪತ್ರಿಕೆ ಮೂಲಕ ಮಾಡಿದ ಆರೋಪ ಕೇವಲ ಸ್ವಾರ್ಥದಿಂದ ಕೂಡಿದ್ದು ಇದನ್ನು ಯಾರು ನಂಬಬಾರದು ಎಂದು ಮನವಿ ಮಾಡಿದರು.
ರಾಮಜೀ ನಾಯ್ಕ್ ಅವರ ಮೊಮ್ಮಗ ನಾನಲ್ಲ ಎಂದು ಜರಿದಿರುವವರ ವಿರುದ್ಧ ನ್ಯಾಯಾಲಯದ ಮೂಲಕ ಉತ್ತರ ನೀಡುತ್ತೇನೆ ಎಂದೂ ಡಾ. ಚಂದ್ರಶೇಖರ ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

