ಬೋಟ್ನಲ್ಲಿ ತಾಂತ್ರಿಕ ದೋಷ; ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.26
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಪ್ರಯುಕ್ತ ನದಿಯಲ್ಲಿ ಪ್ರವಾಹ ಉಂಟಾಗಿ ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳು ಶುಕ್ರವಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸಾಲಡಗಿ, ಸಹಾಯಕ ಆಯುಕ್ತ ಟಿ. ಯೋಗೇಶ, ಡಿವೈಎಸ್ಪಿ ಸೂರ್ಯವಂಶಿ, ತಹಸೀಲ್ದಾರ್ ಎನ್.ಬಿ. ಪಾಟೀಲ್ ಹಾಗೂ ಮಹಾಜನ್, ಸಿಡಿಪಿಒ ಪ್ರಭಾಕರ, ಸಿಪಿಐ ಪಂಚಾಕ್ಷರಯ್ಯ, ಪಿಎಸ್ಐ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತುರ್ತು ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯೊಂದಿಗೆ ನಡುಗಡ್ಡೆ ಗ್ರಾಮಗಳ ಜನರ ರಕ್ಷಣೆಗೆ ಯಳಗುಂದಿ ಗ್ರಾಮದ ನದಿ ತೀರಕ್ಕೆ ಶುಕ್ರವಾರ ತೆರಳಿದರು.
40 ಜನರ ಸುರಕ್ಷಿತ ಸ್ಥಳಾಂತರಕ್ಕೆ ಯತ್ನ: ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಿದ ಪ್ರಯುಕ್ತ ನದಿಯಲ್ಲಿ ಪ್ರವಾಹ ಉಂಟಾಗಿ ನಡುಗಡ್ಡೆ ಪ್ರದೇಶದ ಮ್ಯಾದರಗಡ್ಡಿಯಲ್ಲಿ ಸುಮಾರು 10 ಜನರು ಮತ್ತು ಕರಕಲಗಡ್ಡಿಯಲ್ಲಿ ಸುಮಾರು 30 ಜನರು ಹಲವು ವರ್ಷಗಳಿಂದ ತಮ್ಮ ಜಮೀನುಗಳಲ್ಲಿ ವಾಸಿಸುವ ಒಟ್ಟು 40 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಅಧಿಕಾರಿಗಳು ತುರ್ತು ವಿಪತ್ತು ನಿರ್ವಹಣಾ ಪಡೆಯ ರಕ್ಷಣಾ ಬೋಟ್ ಸಮೇತ ಶುಕ್ರವಾರ ಯಳಗುಂದಿ ಗ್ರಾಮಕ್ಕೆ ತೆರಳಿ ಸಂತ್ರಸ್ತರ ರಕ್ಷಣೆಗಾಗಿ ಕಾರ್ಯಚರಣೆಗೆ ಮುಂದಾದರು.
ಆದರೆ ನದಿಯಲ್ಲಿ ಗುಂಡು ಕಲ್ಲುಗಳು ಇರುವ ಪ್ರಯುಕ್ತ 2 ರಕ್ಷಣಾ ಬೋಟ್ ಮೂಲಕ ಮ್ಯಾದರಗಡ್ಡಿಗೆ ತೆರಳಲು ಅಧಿಕಾರಿ ಮತ್ತು ಸಿಬ್ಬಂದಿ ಹೆಣಗಾಡಬೇಕಾಯಿತು. ಅಲ್ಲದೆ ರಕ್ಷಣಾ ಬೋಟ್ಗಳು ತುಂಬಾ ಹಳೆಯದಾದ ಪ್ರಯುಕ್ತ ಒಂದು ರಕ್ಷಣಾ ಬೋಟ್ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಪ್ರಯುಕ್ತ ಯಳಗುಂದಿ ಗ್ರಾಮದಲ್ಲಿಯೇ ನಿಲ್ಲಿಸಲಾಯಿತು.
ಮನವೊಲಿಸುವ ಪ್ರಯತ್ನ: ಇನ್ನೊಂದು ಬೋಟ್ನಲ್ಲಿ ತುರ್ತು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಹಾಗೂ ಇಬ್ಬರು ಪೊಲೀಸರು ಮ್ಯಾದರಗಡ್ಡಿಗೆ ತೆರಳಿ ಅಲ್ಲಿನ ಜನರೊಂದಿಗೆ ಸ್ಥಾಳಾಂತರಕ್ಕೆ ಮನವೊಲಿಸುವ ಪ್ರಯತ್ನ ನಡೆಸಿದರು. ಇದಕ್ಕೆ ಸಂತ್ರಸ್ಥರು ನಿರಾಕರಿಸಿದರು. ಕಳೆದ ವರ್ಷ ನದಿಗೆ ನೀರು ಬಿಟ್ಟ ಸಮಯದಲ್ಲಿ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವುದಾಗಿ ಹೇಳಿ ಯರಗೋಡಿ ಗ್ರಾಮದಲ್ಲಿ ಬಿಟ್ಟು ಕೇವಲ ಒಂದು ಗಂಜಿ ಕೇಂದ್ರ ತೆರೆದು ಯಾವುದೆ ಮೂಲ ಸೌಕರ್ಯ ಒದಗಿಸದೆ ನಿರ್ಲಕ್ಷ್ಯ ತೋರಿದ್ದೀರಿ. ಆದ್ದರಿಂದ ನಾವು ಬರುವುದಿಲ್ಲವೆಂದು ಪಟ್ಟು ಹಿಡಿದರು.
ಇದರಿಂದ ದಿಕ್ಕುತೋಚದ ಸಿಬ್ಬಂದಿ ಯಳಗುಂದಿ ಗ್ರಾಮದ ನದಿ ದಡದಲ್ಲಿ ತಂಗಿದ್ದ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಸಂಪರ್ಕ ಕಲ್ಪಿಸಿ ಜನರೊಂದಿಗೆ ಮನಮೊಲಿಸುವ ಶತ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಸಂಜೆ ಮ್ಯಾದರಗಡ್ಡಿಯ ಸುಮಾರು 30 ಜನರಲ್ಲಿ ಕೇವಲ 3 ಜನರು ಬರಲು ಒಪ್ಪಿದ ಪ್ರಯುಕ್ತ ಅವರನ್ನು ಕರೆಯಲು ಸಿದ್ಧರಾದರು.
ತಾಂತ್ರಿಕ ತೊಂದರೆ: ಆದರೆ ಕರೆತರುವ ಸಮಯದಲ್ಲಿ ರಕ್ಷಣಾ ಬೋಟ್ಗೆ ನದಿಯಲ್ಲಿನ ಕಲ್ಲೊಂದು ಬಡಿದ ಪ್ರಯುಕ್ತ ಯಂತ್ರದಲ್ಲಿ ತಾಂತ್ರಿಕ ತೊಂದರೆ ಕಂಡು ಬಂದಿತು. ಆಗ ನದಿಯಲ್ಲಿನ ಒಂದು ನಡುಗಡ್ಡೆಯಂತೆ ಕಂಡು ಬರುವ ಸ್ಥಳದಲ್ಲಿ ಅವರನ್ನು ಉಳಿಸಲಾಯಿತು. ನಂತರ ಬೇರೊಂದು ಯಂತ್ರವನ್ನು ತಂದು ನದಿಯ ನಡುಗಡ್ಡಿಯಲ್ಲಿ ತಂಗಿದ್ದ ರಕ್ಷಣಾ ಬೋಟ್ಗೆ ಅಳವಡಿಸಿ 3 ಜನರನ್ನು ಕರೆತರಲಾಗಿದೆ ಎಂದು ಸಹಾಯಕ ಆಯುಕ್ತ ಟಿ. ಯೋಗೇಶ ತಿಳಿಸಿದರು.
ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸನಳ್ಳಿ ಅವರು ಯಳಗುಂದಿ ಗ್ರಾಮಕ್ಕೆ ಆಗಮಿಸಿದ್ದಾರೆ. ನಡುಗಡ್ಡೆ ಗ್ರಾಮಸ್ಥರು ಸುರಕ್ಷಿತವಾಗಿದ್ದು, ಯಾವುದೇ ತೊಂದರೆ ಇರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲು ಮುಂದಾಗಿದ್ದೇವೆ. ನದಿಯಲ್ಲಿ ನೀರಿನ ಪ್ರಮಾಣ ತಿಳಿದು ಅಪಾಯ ಕಂಡು ಬಂದರೆ ಶನಿವಾರ ಕಾರ್ಯಚರಣೆಗೆ ಮುಂದಾಗುವುದಾಗಿ ಅವರು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

