ಮತ್ತೇರಿದ ಕೃಷ್ಣೆ!
ಕನ್ನಡಪ್ರಭ ವಾರ್ತೆ ರಾಯಚೂರು ಜು.30
ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ಜಿಲ್ಲೆಯ ಕೃಷ್ಣಾ ನದಿ ಮತ್ತೆ ಉಕ್ಕಿ ಹರಿಯತೊಡಗಿದೆ. ಪರಿಣಾಮ ಮತ್ತೆ ಪ್ರವಾಹದ ಆತಂಕ ಮೂಡಿದೆ. ಇದೇ ವೇಳೆ ತುಂಗಭದ್ರಾ ನದಿಯಲ್ಲಿ ಹರಿವು ತಗ್ಗಿದ್ದು ನದಿ ತೀರದ ಜನತೆಗೆ ನೆಮ್ಮದಿ ತಂದಿದೆ. ದೇವದುರ್ಗ- ಶಹಾಪುರ ಮಧ್ಯೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೃಷ್ಣಾ ನದಿಯ ಪ್ರವಾಹದ ತೊಂದರೆ ಎದುರಾಗಿದ್ದು, ಲಿಂಗಸ್ಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ತೀರದಲ್ಲಿ ಆತಂಕದ ಪರಿಸ್ಥಿತಿಯಿದೆ. ತುಂಗಭದ್ರಾ ನದಿಯಲ್ಲಿಯೂ ಹೆಚ್ಚಿದ್ದ ಪ್ರವಾಹ ಆತಂಕವನ್ನು ಇಮ್ಮಡಿಗೊಳಿಸಿತ್ತು. ಆದರೆ ತುಂಗಭದ್ರಾದಲ್ಲಿ ಸದ್ಯ ಪ್ರವಾಹ ಇಳಿಮುಖವಾಗುವ ಮೂಲಕ ನಿರಾಳತೆ ತಂದಿದೆ.
2.69 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ: ನಾರಾಯಣಪುರ ಜಲಾಶಯದಿಂದ ಮತ್ತೆ ಭಾರೀ ಪ್ರಮಾಣದಲ್ಲಿ ನೀರು ಹೊರಹರಿಸುತ್ತಿರುವುದು ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟು ಮಾಡಿದೆ. ಮಂಗಳವಾರ ಜಲಾಶಯದಲ್ಲಿ 490.700 ಮೀಟರ್ ನೀರಿನ ಸಂಗ್ರಹವಿದ್ದು, 2.62 ಲಕ್ಷ ಕ್ಯುಸೆಕ್ ಒಳಹರಿವಿತ್ತು. ಜಲಾಶಯದಿಂದ 2.69 ಲಕ್ಷ ಕ್ಯುಸೆಕ್ ನೀರು ಹೊರಹರಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಲಿಂಗಸ್ಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ತೀರದಲ್ಲಿ ಆತಂಕ ಮೂಡಿದೆ.
ಸಂಪರ್ಕ ಕಡಿತ: ಲಿಂಗಸ್ಗೂರು ತಾಲೂಕಿನ ಶೀಲಹಳ್ಳಿ ಸೇತುವೆ ನೀರಿನಲ್ಲಿ ಮುಳುಗಿದ್ದು ಕಡದರಗಡ್ಡೆ, ಯರಗೋಡಿ, ಯಳಗುಂದಿ ಮತ್ತಿತರೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಜನತೆ ಸುತ್ತು ಬಳಸಿ ಲಿಂಗಸ್ಗೂರು ತಲುಪುವಂತಾಗಿದೆ. ಕೃಷ್ಣಾ ನದಿಯಲ್ಲಿರುವ ನಡುಗಡ್ಡೆ ಗ್ರಾಮಗಳಾದ ಮ್ಯಾದರಗಡ್ಡೆ ಮತ್ತು ಕರಕಲಗಡ್ಡೆ ಜನತೆ ನಡುಗಡ್ಡೆಯಲ್ಲಿಯೇ ವಾಸವಾಗಿದ್ದು ಸುರಕ್ಷಿತ ಸ್ಥಳಕ್ಕೆ ಆಗಮಿಸಲು ನಿರಾಕರಿಸಿದ್ದು, ಆಡಳಿತಕ್ಕೆ ತಲೆನೋವು ತಂದಿದೆ.
ಹೂವಿನಹೆಡಗಿ ಸೇತುವೆ ಮುಳುಗಡೆ: ದೇವದುರ್ಗ ತಾಲೂಕಿನಲ್ಲಿಯೂ ಕೃಷ್ಣಾ ಪ್ರವಾಹ ಸಂಕಷ್ಟ ತಂದಿದೆ. ನದಿ ತೀರದ ಮ್ಯಾದರಗೋಳ, ಕರ್ಕಿಹಳ್ಳಿ ಮತ್ತಿತರೆಡೆ ಪ್ರವಾಹ ರೈತರ ಗದ್ದೆಗಳಿಗೆ ನುಗ್ಗಿದ್ದು, ಆತಂಕಕ್ಕೆ ಸಿಲುಕಿದ್ದಾರೆ. ಇನ್ನು ದೇವದುರ್ಗ ಮತ್ತು ಶಹಾಪುರ ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಹೂವಿನಹೆಡಗಿ ಸೇತುವೆ ನೀರಿನಲ್ಲಿ ಮುಳುಗಿದ್ದರಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರಸಿದ್ಧ ಧಾರ್ಮಿಕ ಕೇಂದ್ರ ಕೊಪ್ಪರದ ಶ್ರೀಲಕ್ಷಿನರಸಿಂಹ ದೇವಸ್ಥಾನವನ್ನು ಕೃಷ್ಣಾ ಪ್ರವಾಹ ಸುತ್ತುವರಿದಿದ್ದು, ಪ್ರಯಾಸಪಡುತ್ತಲೇ ದೇವಸ್ಥಾನದ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಪ್ರವಾಹದ ಹಿನ್ನೆಲೆ ಭಕ್ತರು ಆತಂಕಕ್ಕೆ ಸಿಲುಕಿದ್ದಾರೆ.
ಗದ್ದೆಗಳಿಗೆ ನುಗ್ಗಿದ ನೀರು: ಇನ್ನು ರಾಯಚೂರು ತಾಲೂಕಿನ ಅರಷಿಣಗಿ, ಗುರ್ಜಾಪುರ, ಆತ್ಕೂರು, ಬುರ್ದಿಪಾಡ ಗ್ರಾಮಗಳ ನದಿ ತೀರದಲ್ಲಿ ಬತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು ರೈತರು ಬೆಳೆ ಹಾನಿ ಭೀತಿ ಎದುರಿಸುತ್ತಿದ್ದಾರೆ.
ತುಂಗಭದ್ರಾ ತೀರದವರು ನಿರಾಳ: ಜಿಲ್ಲೆಯ ತುಂಗಭದ್ರಾ ನದಿ ತೀರದಲ್ಲಿ ಕಳೆದ ಎರಡು ದಿನಗಳಿಂದ ಉಂಟಾಗಿದ್ದ ಪ್ರವಾಹ ಭೀತಿ ತಗ್ಗಿದೆ. ನದಿಯಲ್ಲಿ ನೀರಿನ ಹರಿವು ಇಳಿಮುಖಗೊಂಡಿದ್ದರಿಂದ ರೈತರ ಗದ್ದೆಗಳಿಗೆ ನುಗ್ಗಿದ್ದ ನೀರು ಕೊಂಚ ಹಿಂದೆ ಸರಿದಿದೆ. ಆ ಮೂಲಕ ರೈತರಲ್ಲಿ ನೆಮ್ಮದಿ ತಂದಿದೆ.
ಸಿಂಧನೂರು ಮತ್ತು ಮಾನವಿ ತಾಲೂಕುಗಳ ನದಿ ತೀರದಲ್ಲಿ ಆತಂಕ ಸದ್ಯಕ್ಕೆ ಕೊನೆಯಾಗಿದೆ. ಆಂಧ್ರದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದಲ್ಲಿ ನೀರಿನ ಮಟ್ಟ ಸ್ಥಿರವಾಗಿದ್ದು, ನದಿ ತೀರದ ಕಾಂಕ್ರೀಟ್ ಹಾಸಿನ ವರೆಗೆ ನೀರು ಸೇರಿದ್ದು ಭಕ್ತರಲ್ಲಿ ಆತಂಕ ಮರೆಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

