13ರಂದು ಬರಹಗಾರರಿಗೆ ಪ್ರಶಸ್ತಿ, ಶಾಸಕರಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.5
ಚೆನ್ನಬಸವಪ್ಪ ಬೆಟ್ಟದೂರು ಅವರ ಐದನೇ ಪುಣ್ಯಸ್ಮರಣೆ ಅಂಗವಾಗಿ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಮತ್ತು ಶಾಸಕ ಪುಟ್ಟಣ್ಣಯ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು ನಗರದಲ್ಲಿ ಜೂ.13ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂದು ಬೆ.10.30ಕ್ಕೆ ನಡೆಯುವ ಸಮಾರಂಭದಲ್ಲಿ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನದಿಂದ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಸಾಹಿತಿ ದೇವನೂರು ಮಹಾದೇವ, ಶಾಸಕರಾದ ಪುಟ್ಟಣ್ಣಯ್ಯ, ಡಾ. ಶಿವರಾಜ್ ಪಾಟೀಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಪ್ರಶಸ್ತಿಗೆ ಭಾಜನರಾದವರು: ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳದ ಬರಹಗಾರ ಎಚ್.ಎಸ್. ಪಾಟೀಲ್ ವಹಿಸುವರು. ಇದೇ ವೇಳೆ ಡಾ. ಮಲ್ಲಿಕಾ ಘಂಟಿ, ಡಾ. ಜಿ.ಎನ್.ಉಪಾಧ್ಯ ಹಾಗೂ ಅಬ್ಬಾಸ ಅಲಿ ಮೇಲಿನಮನಿ ಅವರನ್ನು ಪ್ರತಿಷ್ಠಾನದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ರೈತ ಮುಖಂಡ ಹಾಗೂ ಶಾಸಕರಾಗಿ ಆಯ್ಕೆಯಾಗಿರುವ ಪುಟ್ಟಣ್ಣಯ್ಯ ಅವರನ್ನು ಅಭಿನಂದಿಸಲಾಗುತ್ತದೆ ಎಂದು ತಿಳಿಸಿದರು.
ಈನಂತರ ನಡೆಯಲಿರುವ ಹೈ.ಕ. ಭಾಗದ ರೈತ ಸಂಘದ ಕಾರ್ಯಕರ್ತರ ಸಮಾವೇಶದಲ್ಲಿ ಈ ಭಾಗದ ನೀರಾವರಿ ಸೇರಿದಂತೆ ವಿವಿಧ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುತ್ತದೆ. ನಂತರ ಆಯಾ ಕ್ಷೇತ್ರಗಳ ಶಾಸಕರಿಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪತ್ರ ಬರೆಯುವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕಳಪೆ ಕಾಮಗಾರಿ ನಡೆದರೆ ತಡೆ: ತುಂಗಭದ್ರಾ ಎಡದಂಡೆಯ ಆಧುನೀಕರಣ ಕಾಮಗಾರಿಗೆ ಸಂಬಂಧಿಸಿ ರೈತರಿಗೆ ಕಾಮಗಾರಿಯ ಗುಣಮಟ್ಟದ ಮೇಲೆ ನಿಗಾಯಿರಿಸಲು ಸಂಘಟನೆ ಸಲಹೆ ನೀಡಿದ್ದು, ಕಳಪೆ ಕಾಮಗಾರಿ ನಡೆದಿದ್ದಲ್ಲಿ ಅದರ ಬಗ್ಗೆ ಮಾಹಿತಿ ಒದಗಿಸಿದಲ್ಲಿ ಕಾಮಗಾರಿ ತಡೆಯಲಾಗುತ್ತದೆ ಎಂದು ಅವರು ಹೇಳಿದರು.
ಸಂಘಟನೆಯಿಂದ ತಾವೂ ಇತ್ತೀಚೆಗೆ ಕಾಲುವೆಯ 76, 82 ಹಾಗೂ 98ನೇ ಮೈಲ್ಗಳಿಗೆ ಭೇಟಿ ನೀಡಿದ ವೇಳೆ ಕಾಮಗಾರಿಗೆ ಕಳಪೆ ಸಾಮಗ್ರಿ ಬಳಸುತ್ತಿದ್ದ ಬಗ್ಗೆ ಗಮನಕ್ಕೆ ಬಂದಿದ್ದು, ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಕಾಮಗಾರಿಯ ಬಗ್ಗೆ ದೂರಿತ್ತಿದ್ದು, ಅವರು ಕೂಡಲೇ ಗುಣಮಟ್ಟದ ಕಾಮಗಾರಿಗೆ ಆದೇಶಿಸಿದ್ದಾರೆಂದು ತಿಳಿಸಿದರು.
ಕಾಟಾಚಾರಕ್ಕೆ ತಂತ್ರಜ್ಞರ ತಂಡ: ಕಾಲುವೆಯ ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ತಂತ್ರಜ್ಞರ ತಂಡ ನೇಮಿಸಿದ್ದು, ಈ ತಂಡವು ಕಾಟಾಚಾರಕ್ಕೆ ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವತ್ತ ಹೆಚ್ಚಿನ ಗಮನಹರಿಸುವಂತೆ ಒತ್ತಾಯಿಸಿದರು.
ಈ ವೇಳೆ ಸಂಘಟನೆಯ ಪ್ರಮುಖರಾದ ಲಕ್ಷ್ಮಣಗೌಡ ಕಡಗಂದೊಡ್ಡಿ, ಹಂಪಣ್ಣ ಜಾನೇಕಲ್, ಜಯಪ್ಪ ಸ್ವಾಮಿ, ನರಸಿಂಗರಾವ್ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

