ಅಗ್ಗದ ಅಕ್ಕಿ ಕೊಟ್ರೆ ಸೋಮಾರಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.19
ರಾಜ್ಯ ಕಾಂಗ್ರೆಸ್ ಸರ್ಕಾರ 1ರಂತೆ ತಿಂಗಳಿಗೆ 30 ಕೆಜಿ ಅಗ್ಗದ ಅಕ್ಕಿಯನ್ನು ನೀಡುವುದಾಗಿ ಘೋಷಿಸುವ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡಲು ಹೊರಟಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ನಗರದ ರಂಭಾಪುರಿ ಖಾಸಾಶಾಖಾ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಗ್ಗದ ಅಕ್ಕಿ ಕೆಲವರಿಗೆ ಉಪಯೋಗವಾಗಬಹುದು. ಆದರೆ ಬಹುತೇಕರಿಗೆ ಸೋಮಾರಿತನವನ್ನು ಕಲಿಸುತ್ತದೆ. ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿರುವುದು ಸ್ವಾಗತಾರ್ಹ. ಆದರೆ ಅಡಿಕೆ ಬೆಳೆಗಾರರಿಗೆ ನಷ್ಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
ಗುಟ್ಕಾದಂತೆ ಮದ್ಯಪಾನ ನಿಷೇಧಿಸಿ: ಸರ್ಕಾರ ಅಗ್ಗದ ದರದಲ್ಲಿ ಸಾರಾಯಿಯನ್ನು ವಿತರಿಸಲು ಹೊರಟಿರುವುದು ಸರಿಯಲ್ಲ. ಸಾರಾಯಿಯಿಂದ ಅನೇಕ ಸಂಸಾರಗಳು ಹಾಳಾಗಿವೆ. ಗುಟ್ಕಾದಂತೆ ಮದ್ಯಪಾನವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಜಾತಿ ರಾಜಕೀಯ ಯಾವ ಪಕ್ಷಗಳಿಗೂ ಶೋಭೆಯಲ್ಲ. ಈ ಬಾರಿ ರಾಜ್ಯದಲ್ಲಿ ಜಾತಿ ರಾಜಕೀಯ ಮಾಡಿದವರು ಏನಾದರು ಎಂದು ಎಲ್ಲರಿಗೆ ತಿಳಿದಿದೆ. ಜನರ ಭಾವನೆಗಳಿಗೆ ಸ್ಪಂದಿಸುವ, ಸಮಸ್ಯೆಗಳನ್ನು ಬಗೆಹರಿಸುವ ನಾಯಕರನ್ನು ಜನರು ಪಕ್ಷಭೇದ ಮರೆತು ಆರಿಸುತ್ತಾರೆ. ಶಾಸಕ ಹಂಪನಗೌಡರು ಕಳೆದ 15 ವರ್ಷಗಳ ಹಿಂದೆ ಸಿಂಧನೂರಿನಲ್ಲಿ ಅದ್ಧೂರಿಯಾಗಿ ದಸರಾ ದರ್ಬಾರ್ ನಡೆಸಿಕೊಟ್ಟರು. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಮುಂದೆ ಬಂದರೆ ಮತ್ತೊಮ್ಮೆ ಸಿಂಧನೂರಿನಲ್ಲಿ ದಸರಾ ದರ್ಬಾರ್ ಹಮ್ಮಿಕೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಬಡಮಕ್ಕಳಿಗಾಗಿ ವಸತಿ ನಿಲಯ: ರಂಭಾಪುರಿ ಪೀಠ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳನ್ನು ಹೊರತುಪಡಿಸಿ ಅನೇಕ ಶಾಲಾ-ಕಾಲೇಜುಗಳನ್ನು ನಡೆಸುತ್ತಲಿದೆ. ವಿಶೇಷವಾಗಿ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಉಚಿತ ವಸತಿ ನಿಲಯಗಳನ್ನು ನಡೆಸುತ್ತಲಿದೆ ಎಂದರು.
ಎಲ್ಲ ರಂಗಗಳಲ್ಲಿ ಪರಸ್ಪರ ಸಂಘರ್ಷಗಳು ಹೆಚ್ಚುತ್ತಲಿದ್ದು, ಸಾರ್ವಜನಿಕ ಬದುಕು ಅಶಾಂತಿಯಿಂದ ತತ್ತರಿಸುತ್ತಿದೆ. ಸ್ವಾರ್ಥ ರೀತಿಯ ಜೀವನ ರೂಪಿಸಿಕೊಳ್ಳಲು ಮನುಷ್ಯನ ಭಾವನೆಗಳು ವಿಕಾಸಗೊಳ್ಳಬೇಕಿದೆ. ಎಲ್ಲ ಧರ್ಮಗಳು ಮನುಷ್ಯನ ಸುಖ ಸಾಧನೆಗೆ ದಾರಿಯನ್ನು ತೋರಿಸಿವೆ. ಯುವಕರು ಚಟಗಳಿಂದ ಮುಕ್ತರಾಗಿ ಧರ್ಮದ ಹಾದಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.
27ರಂದು ರೇಣುಕಾಚಾರ್ಯರ ಯುಗಮಾನೋತ್ಸವ: ಜೂ.27ರಂದು ಸಿಂಧನೂರಿನಲ್ಲಿ ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಈಗಾಗಲೇ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ವಿವಿಧ ಸಮಿತಿಗಳು ಕೆಲಸ ನಿರ್ವಹಿಸುತ್ತಲಿವೆ. ಅಂದೇ ಸಂಸ್ಕೃತ ಪಾಠ ಶಾಲೆಯನ್ನು ಉದ್ಘಾಟಿಸುವ ಕಾರ್ಯಕ್ರಮ ಇದೆ. ಕಾರ್ಯಕ್ರಮಕ್ಕೆ ಮಠದ ಭಕ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಬೇಕೆಂದು ವಿನಂತಿಸಿದರು.
ಇದೇ ವೇಳೆ ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್ ಅವರನ್ನು ರಂಭಾಪುರಿ ಜಗದ್ಗುರುಗಳು ಸನ್ಮಾನಿಸಿ ಗೌರವಿಸಿದರು. ಸುದ್ದಿಗೋಷ್ಠಿಯಲ್ಲಿ ರಂಭಾಪುರ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯರು, ಮಸ್ಕಿಯ ರುದ್ರಮುನಿ ಸ್ವಾಮೀಜಿ, ಮಠದ ಕಾರ್ಯದರ್ಶಿ ಎನ್.ಶಿವನಾಗಪ್ಪ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ವರ್ತಕರ ಸಂಘದ ಅಧ್ಯಕ್ಷ ಕಾನಿಹಾಳ ಮಲ್ಲನಗೌಡ, ಶಿವಕುಮಾರ ಜವಳಿ, ಬಸವರಾಜಸ್ವಾಮಿ ಹಸಮಕಲ್, ಅಮರಯ್ಯಸ್ವಾಮಿ, ಜಿಪಂ ಎಇಇ ಬಿ.ಆರ್. ಗೌಡೂರು, ಚಂದ್ರಶೇಖರಗೌಡ ವಿರುಪಾಪುರ, ಪಂಪಯ್ಯಸ್ವಾಮಿ ಸಾಲಿಮಠ, ಅಜಿತ್ ಓಸ್ತವಾಲ್, ಬಸವರಾಜ ಬಾದರ್ಲಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

