ರಾಯಚೂರು

ರಕ್ತ ಕಣ ಪ್ರತ್ಯೇಕಿಸುವ ಘಟಕ ಸ್ಥಾಪನೆ ವಿಳಂಬವೇಕೆ?

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಜೂ.20
ಜಿಲ್ಲೆಯಲ್ಲಿ ಡೆಂಘೀ ಜ್ವರದ ಸಾವಿನ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ಅವಶ್ಯವಿರುವ ರಕ್ತದ ಕಣ ಪ್ರತ್ಯೇಕಿಸುವ ಘಟಕ ಸ್ಥಾಪನೆಗೆ ಅನುದಾನ ಒದಗಿಸಿದ್ದರೂ ಸ್ಥಾಪನೆಯಲ್ಲಾಗುತ್ತಿರುವ ವಿಳಂಬಕ್ಕೆ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜಿಪಂ ಅಧ್ಯಕ್ಷೆ ಲಲಿತಮ್ಮ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಾತನಾಡಿದ ಸದಸ್ಯರು, 2009-10ನೇ ಸಾಲಿನಲ್ಲಿಯೇ ಬಿಆರ್ ಜಿಎಫ್ ಯೋಜನೆ ಅಡಿ ಈ ಘಟಕದ ಸ್ಥಾಪನೆಗೆ ಅನುದಾನ ಒದಗಿಸಿದ್ದರೂ ಇದುವರೆಗೆ ಘಟಕ ಸ್ಥಾಪನೆ ಸಾಧ್ಯವಾಗಿಲ್ಲ. ಅಧಿಕಾರಿಗಳು ಹುಸಿ ಭರವಸೆ ನೀಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಅನುಮತಿ ಪಡೆವಲ್ಲಿ ವಿಳಂಬ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ನಾಯಕ ಸಭೆಯಲ್ಲಿ ಮಾತನಾಡಿ, ಬ್ಲಡ್ ಕಾಂಪೋನೆಂಟ್ ಥೆರೆಪಿ ಘಟಕದ ಸ್ಥಾಪನೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೆಲ ಇಲಾಖೆಗಳಿಂದ ಅದಕ್ಕಾಗಿ ಅನುಮತಿ ಪಡೆಯಬೇಕಿದೆ ಎಂದು ಸಭೆಗೆ ವಿವರಿಸಿ, ಅನುಮತಿ ಪಡೆಯುವಲ್ಲಿ ಆಗುತ್ತಿರುವ ವಿಳಂಬದಿಂದ ಘಟಕದ ಕಾರ್ಯಾರಂಭ ತಡವಾಗಿದೆ ಎಂದು ವಿವರಿಸಿದರು.
ಸದಸ್ಯರು ಹಾಗೂ ಅಧ್ಯಕ್ಷೆ ಲಲಿತಮ್ಮ ಅವರು, ಈ ಹಿಂದೆಯ ಘಟಕದ ಸ್ಥಾಪನೆಗೆ ದಿನಾಂಕ ನಿಗದಿಯಾಗಿದ್ದು ನಂತರದಲ್ಲಿ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ. ಡೆಂಘೀಯಿಂದ ಅನೇಕರು ಈಗಾಗಲೇ ಹೊರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುವಂಥ ಸ್ಥಿತಿಯಿದೆ. ಬಡ ಜನತೆ ಸಂಕಷ್ಟದಲ್ಲಿದ್ದು, ಘಟಕದ ಸ್ಥಾಪನೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ರೋಗಿಗಳ ಜೀವನದೊಂದಿಗೆ ಚೆಲ್ಲಾಟ: ಜಿಪಂ ಸದಸ್ಯ ಅಸ್ಲಂ ಪಾಷಾ ಮಾತನಾಡಿ, ಅಧಿಕಾರಿಗಳು ಅನಗತ್ಯವಾಗಿ ತಡ ಮಾಡುವ ಮೂಲಕ ಬಡ ರೋಗಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸದಸ್ಯ ಎಚ್.ಬಿ. ಮುರಾರಿ  ಮಾತನಾಡಿ, ರಿಮ್ಸ್ ಕಾಲೇಜಿನ ಕೂಡಲೇ ಸ್ವತಃ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಭೇಟಿ ನೀಡಿ ವಸ್ತುಸ್ಥಿತಿ ಅರಿಯುವ ಕಾರ್ಯ ಮಾಡಬೇಕೆಂದು ಪಟ್ಟು ಹಿಡಿದರು. ಅದಕ್ಕೆ ಸಭೆ ಸಮ್ಮತಿಸಿತು.
ಸಿಟಿ ಸ್ಕ್ಯಾನಿಂಗ್ ಯಂತ್ರ: 2009- 10ನೇ ಸಾಲಿನಲ್ಲಿ ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಬಿಆರ್‌ಜಿಎಫ್ ಯೋಜನೆಯಡಿ ಸಿಟಿ ಸ್ಕ್ಯಾನ್ ಯಂತ್ರ ಖರೀದಿಸಲು ಅನುದಾನ ನೀಡಿದ್ದು, 3 ವರ್ಷದ ಹಿಂದೆ 1.78 ಕೋಟಿಗೆ ಟೆಂಡರ್ ನೀಡಲಾಗಿದೆ. ಅದರ ನಿರ್ವಹಣೆಗಾಗಿ ಲಿಂಗಸ್ಗೂರು ಸಿಟಿ ಮುನ್ಸಿಪಲ್ ಕಚೇರಿಯ ಅನುದಾನದಲ್ಲಿ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದೊರೆಯುವ ಸಿಟಿ ಸ್ಕ್ಯಾನ್ ಯಂತ್ರದ ನಿರ್ವಹಣೆಗೆ 17ಲಕ್ಷ ಬಿಆರ್‌ಜಿಎಫ್ ಅನುದಾನದಲ್ಲಿ ಮಂಜೂರು ಮಾಡಲು ಜಿಪಂ ಸದಸ್ಯ ಮುರಾರಿ ಸಲಹೆ ನೀಡಿದರು. ಲಿಂಗಸ್ಗೂರು ಆಸ್ಪತ್ರೆಗೆ ಸ್ಕ್ಯಾನ್‌ಗೆ ಆಗಮಿಸುವವರಿಂದ ಅತ್ಯಲ್ಪ ದರ ಪಡೆದು ಅದಕ್ಕಾಗಿ ಬೇರೆ ಖಾತೆ ನಿರ್ವಹಣೆ ಮಾಡಬೇಕು. ಇತರೆ ಅನುದಾನದಲ್ಲಿ ಯಂತ್ರದ ನಿರ್ವಹಣೆಗೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿ, ನಿರ್ವಹಣೆ ವೆಚ್ಚಕ್ಕಾಗಿ ಯೋಚಿಸುವ ಭರದಲ್ಲಿ 2 ಕೋಟಿ ಮೊತ್ತದ ಯಂತ್ರ ಸ್ಥಾಪನೆ ವಿಳಂಬವಾಗಬಾರದು ಎಂದರು.
26ರಂದು ಸಿಟಿ ಪಾಲಿ ಕ್ಲಿನಿಕ್ ಸ್ಥಾಪನೆ: ಸಿಟಿ ಪಾಲಿ ಕ್ಲಿನಿಕ್ ಸ್ಥಾಪನೆಗೆ ಜೂ. 26ರಂದು ದಿನಾಂಕ ನಿಗದಿಯಾಗಿದೆ. ಜಿಪಂ ಅಧ್ಯಕ್ಷರ ಅಪ್ಪಣೆ ಪಡೆಯಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಸೋಮಸುಂದರಂ ಸಭೆಗೆ ವಿವರಿಸಿದರು.
ಜಿಲೆಯಲ್ಲಿ ಸಾಕು ಪ್ರಾಣಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶವಿಲ್ಲದ ಕಾರಣ ಪಾಲಿ ಕ್ಲಿನಿಕ್ ಸಲುವಾಗಿ ರಾಯಚೂರು ತಾಲೂಕಿನ ಪಶು ಆಸ್ಪತ್ರೆಯ ಕಟ್ಟಡವನ್ನು ದುರಸ್ತಿ ಮಾಡಿಸಿ ಶಸ್ತ್ರ ಚಿಕಿತ್ಸಾ ಕೊಠಡಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.
ಸಭೆಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಸಲಹೆಗಾರ ಈಶ್ವರ ಡಿಸೋಜಾ, ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಸಿಇಒ ಜ್ಞಾನಪ್ರಕಾಶ, ಯೋಜನಾ ಸಮಿತಿ ಸದಸ್ಯರು, ಸ್ಥಳಿಯ ಸಂಸ್ಥೆಗಳ ಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.

ರಿಮ್ಸ್ ಕಟ್ಟಡ ಪರಿಶೀಲನೆ
ರಾಯಚೂರು: ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷೆ, ಜಿಪಂ ಅಧ್ಯಕ್ಷೆ ಲಲಿತಮ್ಮ ಅವರ ನೇತೃತ್ವದಲ್ಲಿ ಗುರುವಾರ ಸಮಿತಿ ಸದಸ್ಯರ ತಂಡವು ರಿಮ್ಸ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿತು.
ಸಮಿತಿ ಸದಸ್ಯರು ಅಧಿಕಾರಿಗಳನ್ನೊಳಗೊಂಡ ತಂಡವು ರಿಮ್ಸ್ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪರಿಶೀಲಿಸಿ, ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಸಮಿತಿ ಸೂಚಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.