ರಾಯಚೂರು

ಮನವೊಲಿಕೆ ಮುಂದುವರಿಕೆ, ಹೆಚ್ಚಿದ ಎದೆಬಡಿತ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.6
ಆಯಾ ಕ್ಷೇತ್ರಗಳ ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆ ಅಗ್ನಿ ಪರೀಕ್ಷೆಯೇ ಸರಿ. ಟಿಕೆಟ್ ಹಂಚಿಕೆಯಲ್ಲಿನ ಅತೃಪ್ತಿ ಮತದಾನದ ವೇಳೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಆತಂಕ. ಜಿಲ್ಲೆಯ ಮತದಾರರು ಚುನಾವಣೆಯ ಮತದಾನಕ್ಕೆ ಒಂದೆಡೆ ಸಜ್ಜಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಿಗೆ ಎದೆಬಡಿತ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಗುರುವಾರ ನಡೆಯಲಿರುವ ಮತದಾನದ ಹಿನ್ನೆಲೆ ರಾಜಕೀಯ ಪಕ್ಷಗಳು ಸೋಲು- ಗೆಲವಿನ ಲೆಕ್ಕಾಚಾರಕ್ಕೆ ಮುಂದಾಗಿವೆ. ಮತದಾರರನ್ನು ಓಲೈಕೆಗಾಗಿ ಕಟ್ಟಕಡೆಯ ಪ್ರಯತ್ನ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಹೇಳಲಾಗಿರುವ ಈ ಚುನಾವಣೆಯಲ್ಲಿನ ಗೆಲವು ಎಲ್ಲ ರಾಜಕೀಯ ಪಕ್ಷಗಳ ಪಾಲಿಗೆ ಮಹತ್ವದ್ದಾಗಿದೆ.
ಜಾಣ ಮತದಾರ: ಪ್ರಸಕ್ತ ಚುನಾವಣೆ ಹಿನ್ನೆಲೆ ಒಂದೆಡೆ ಅಭ್ಯರ್ಥಿಗಳು ಮತದಾರರಿಗೆ ವಿವಿಧ ಆಮಿಷಗಳನ್ನೊಡ್ಡಿ ಮತ ಹಾಕಲು ದುಂಬಾಲು ಬಿದ್ದಿದ್ದಾರೆ. ಮತದಾರ ಮಾತ್ರ 'ಎಲ್ಲರಿಗೂ ಸೈ' ಎಂದು ಹೇಳುತ್ತಿರುವುದು ಅಭ್ಯರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಂತೂ ನಿಜ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಒಂದು ಅವಕಾಶ ಕೊಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ವಜ್ಜಲ್ ಜೆಡಿಎಸ್ ಪರ ಪ್ರಚಾರ: ಈ ಮಧ್ಯೆ ಜಿಲ್ಲೆಯಲ್ಲಿ ಮೂವರು ಬಿಜೆಪಿ, ಮೂವರು ಕಾಂಗ್ರೆಸ್ ಹಾಗೂ ಒಬ್ಬ ಜೆಡಿಎಸ್ ಶಾಸಕರಿದ್ದಾರೆ. ಶಾಸಕರು ಇದುವರೆಗೆ ಮಾಡಿದ ಅಭಿವೃದ್ಧಿಗೆ ಮತದಾರ ಮತದಾನದ ಮೂಲಕ ಪ್ರತಿಕ್ರಿಯೆ ನೀಡುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯ ಲಿಂಗಸ್ಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಗೆಲವಿಗೆ ಈಗಾಗಲೇ ಪ್ರಚಾರ ನಡೆಸಿದ್ದಾರೆ.
ಅದೇ ರೀತಿ ಮಸ್ಕಿಯ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಈಗಾಗಲೇ ಒಂದು ಹೆಜ್ಜೆ ಪಕ್ಷದಿಂದ ಹೊರಗಿಟ್ಟಿದ್ದಾರೆ. ಹೀಗಾಗಿ ಲಿಂಗಸ್ಗೂರು ತಾಲೂಕಿನಲ್ಲಿ ಬಿಜೆಪಿ ಬಲಕ್ಷೀಣಿಸಿದೆ. ಅಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟಕ್ಕೆ ಬಿಜೆಪಿ ಪರದಾಡಿದ್ದಿದೆ.
ಶಿವನಗೌಡ ನಾಯಕ ನಡೆ ನಿಗೂಢ!: ಇನ್ನು ದೇವದುರ್ಗದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಶಿವನಗೌಡ ನಾಯಕ ಸದ್ಯಕ್ಕೆ ಬಿಜೆಪಿಯಲ್ಲಿದ್ದೇನೆ ಎಂದು ಹೇಳುತ್ತಲೇ ಮುಂದುವರಿಯುತ್ತಿರುವುದು ಬಿಜೆಪಿಯಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಬಿಜೆಪಿಯ ಅನೇಕ ನಾಯಕರಿಗೆ ಅವರು ಪಕ್ಷದಲ್ಲೇ ಉಳಿಯುವ ಬಗ್ಗೆ ವಿಶ್ವಾಸವಿಲ್ಲ.
ಜೆಡಿಎಸ್‌ನಲ್ಲಿ ಅಸಮಾಧಾನ: ಸಿಂಧನೂರಿನಲ್ಲಿ ಶಾಸಕ ವೆಂಕಟರಾವ ನಾಡಗೌಡ ಶತಾಯಗತಾಯ ನಗರಸಭೆ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನ ನಡೆಸಿದ್ದರೂ ಕೆಜೆಪಿ ಮತ್ತು ಬಿಎಸ್ಸಾರ್ ಜತೆಯಾಗಿ ಅವರ ಓಟಕ್ಕೆ ತಡೆಯೊಡ್ಡುವ ಪ್ರಯತ್ನದಲ್ಲಿವೆ. ಈ ಪ್ರಯತ್ನಕ್ಕೆ ಮತದಾರರು ನಾಡಗೌಡರ ಕಾರ್ಯವೈಖರಿಯ ಬಗ್ಗೆ ಹೊಂದಿದ್ದಾರೆಂದು ಹೇಳಲಾಗುತ್ತಿರುವ ಅಸಮಾಧಾನ ಸಾಥ್ ನೀಡಲಿದೆ ಎಂಬುದು ರಾಜಕೀಯ ಕ್ಷೇತ್ರದಲ್ಲಿನ ಸದ್ಯದ ಲೆಕ್ಕಾಚಾರ.
ರಾಯಚೂರು ಮತ್ತು ಮಾನವಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ, ಗುಂಪುಗಾರಿಕೆ ರಾಯಚೂರು ನಗರಸಭೆ ಮತ್ತು ಮಾನವಿ ಪುರಸಭೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದು, ಶಾಸಕರು ಈ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿಯನ್ನು ಮತದಾರ ಗಮನಿಸುತ್ತಲೇ ಮತಗಟ್ಟೆಯತ್ತ ತೆರಳುವುದು ಖಚಿತವಾಗಿದೆ.
ಬಲಪ್ರದರ್ಶನದ ಧಾವಂತ: ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ವಿಧಾನಸಭೆ ಚುನಾವಣೆ ಕಣಕ್ಕಿಳಿಯಲು ಸ್ಥಳೀಯ ಸಂಸ್ಥೆಯಲ್ಲಿ ತಮ್ಮ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ತಂದು ಬಲಪ್ರದರ್ಶನದ ಧಾವಂತದಲ್ಲಿದ್ದಾರೆ.
ಮತ್ತೊಂದೆಡೆ ಈಚೆಗೆ ಹುಟ್ಟಿಕೊಂಡ ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ತಾವೇನೂ ಕಮ್ಮಿಯಿಲ್ಲ ಎಂದು ಪ್ರತಿಪಕ್ಷಗಳಿಗೆ ಎಚ್ಚರಿಕೆಯ ಸಂದೇಶ ಸಾರಲು ಇದೊಂದು ಅವಕಾಶ ಎಂದು ಹೊಂಚುಹಾಕಿವೆ. ಮತದಾರ ಮಾತ್ರ ಎಲ್ಲವನ್ನೂ ಗಮನಿಸುತ್ತಲೇ ಮೌನಕ್ಕೆ ಶರಣಾಗಿದ್ದಾನೆ. ರಾಜಕೀಯ ಚುರುಕುಗೊಂಡಿದ್ದು, ಅಭ್ಯರ್ಥಿಗಳು ಮಾ.7ರ ಮತದಾನಕ್ಕಾಗಿ ಕಾದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.