18ರಂದು ಕೇಂದ್ರದ ವಿರುದ್ಧ ರೈತ ಸಂಘಟನೆಗಳ ಸಮಾವೇಶ
ರಾಯಚೂರು: ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಯಿಂದಾಗಿ ದೇಶದಲ್ಲಿ ಪ್ರತಿ ವರ್ಷ 16ರಿಂದ 17 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೃಷಿ ಭೂಮಿ ಕಬಳಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಾಲ ಮನ್ನಾ ಹೆಸರಿನಲ್ಲಿ ಅಕ್ರಮ ನಡೆದಿರುವುದನ್ನು ಖಂಡಿಸಿ ಕೇಂದ್ರದ ಧೋರಣೆ ವಿರೋಧಿಸಿ ಮಾ.18ರಂದು ನವದೆಹಲಿಯಲ್ಲಿ ದೇಶದ ಎಲ್ಲ ರೈತ ಸಂಘಟನೆಗಳು ರಾಷ್ಟ್ರೀಯ ರೈತರ ಮತ್ತು ಕೃಷಿ ಕಾರ್ಮಿಕರ ಬೃಹತ್ ಸಮಾವೇಶ ಆಯೋಜಿಸಿವೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಕೃಷಿಗೆ ಸಂಬಂಧಿಸಿದ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಿದ ವಿಚಾರಗಳು ಕೇವಲ ತೋರಿಕೆಗೆ ಮಾತ್ರ. ಅಂಥ ಕಾರ್ಯಕ್ರಮಗಳಿಂದ ದೇಶದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗದು ಎಂದು ಟೀಕಿಸಿದರು.
ಆರ್ಥಿಕ ಹಿನ್ನಡೆ: ಹೆಚ್ಚುತ್ತಿರುವ ನಗರೀಕರಣ, ಕೈಗಾರಿಕೀಕರಣದಿಂದ ದೇಶದ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ದೇಶದ ಆಹಾರ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ನಿಲುವು ತಳೆಯುತ್ತಿದ್ದು, ಅದರಿಂದ ರೈತರು ಮತ್ತಷ್ಟು ಆರ್ಥಿಕ ಹಿನ್ನಡೆ ಅನುಭವಿಸುವಂತಾಗಿದೆ ಎಂದು ದೂರಿದರು.
ಆರ್ಥಿಕ ಸಮೀಕ್ಷೆಯು ಕೇವಲ ಉತ್ಪಾದನೆಯ ಹೆಚ್ಚಳದ ಬಗ್ಗೆ ವಿಚಾರ ಮಂಡಿಸುತ್ತದೆಯೇ ವಿನಾ ರೈತರಿಗೆ ಅದರಿಂದ ಸಿಗುವ ಲಾಭದ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬಹುತೇಕ ರಾಜ್ಯಗಳಲ್ಲಿ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಿದೆ ಎಂಬುದನ್ನು ಕೇಂದ್ರ ಅರಿಯಬೇಕಿದೆ.
ದಕ್ಷಿಣ ಭಾರತದ ಅನೇಕ ರಾಜ್ಯಗಳು ಬರಗಾಲಕ್ಕೆ ಸಿಲುಕಿದ್ದರೂ ಕೇಂದ್ರ ಅವುಗಳೆಡೆಗೆ ಗಮನ ಹರಿಸುತ್ತಿಲ್ಲ. ರೈತರ ಪರಿಸ್ಥಿತಿ ಈ ರಾಜ್ಯಗಳಲ್ಲಿ ಶೋಚನೀಯವಾಗಿದ್ದರೂ, ರೈತರ ರಕ್ಷಣೆಗೆ ಕೇಂದ್ರ ಬಂದಿಲ್ಲ. ಬಜೆಟ್ನಲ್ಲಿ ರೈತರ ಹಿತ ಕಾಯುವ ಕಾರ್ಯವನ್ನು ಕೇಂದ್ರ ಮಾಡಿಲ್ಲ ಎಂದು ಟೀಕಿಸಿದರು.
ರೈತರಿಗೆ ವಂಚನೆ: ಕೃಷಿ ಭೂಮಿಯನ್ನು ಎಲ್ಲೆಡೆ ಕೈಗಾರಿಕೆಗಳ ಸ್ಥಾಪನೆಗೆ ಕಬಳಿಸಲಾಗುತ್ತಿದೆ. ಆದರೆ ವಶಪಡಿಸಿಕೊಂಡ ಎಲ್ಲ ಜಮೀನಿನ ಸಮರ್ಪಕ ಬಳಕೆಯಾಗುತ್ತಿಲ್ಲ. ಅದರಿಂದ ರೈತರೂ ಬೀದಿಗೆ ಬೀಳುವಂತಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ. ಅದರಿಂದಾಗಿ ರೈತರಿಗೆ ವಂಚನೆಯಾಗುತ್ತಿದೆ ಎಂದು ದೂರಿದರು.
ಈ ಎಲ್ಲ ಅಂಶಗಳನ್ನು ಮುಂದಿರಿಸಿಕೊಂಡು ಮಾ.18ರಂದು ನವದೆಹಲಿಯ ಜಂತರ್ ಮಂತರ್ನಲ್ಲಿ ರಾಷ್ಟ್ರೀಯ ರೈತರ ಮತ್ತು ಕೃಷಿ ಕಾರ್ಮಿಕರ ಬೃಹತ್ ಸಮಾವೇಶ ಆಯೋಜಿಸಿದ್ದು, ರಾಜ್ಯದಿಂದ ಸಾವಿರಾರು ಸಂಖ್ಯೆಯ ರೈತರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಸಮಾವೇಶದ ಮೂಲಕ ಭೂಮಿಯ ಹಕ್ಕು ಕಿತ್ತುಕೊಳ್ಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ಕೈಬಿಡಬೇಕು. ಸ್ವಾಧೀನ ಪಡಿಸಿಕೊಂಡ ಜಮೀನಿನ ಸಂಪೂರ್ಣ ಪರಿಹಾರ ರೈತರಿಗೆ ದೊರಕುವವರೆಗೆ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಖಾಸಗಿ ಯೋಜನೆಗಳಿಗೆ ರೈತರ ಸಮೀನು ಸ್ವಾಧೀನ ಮಾಡಿಕೊಳ್ಳುವುದು ಕೈಬಿಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ಕೃಷಿ ವೇತನ ಆಯೋಗ: ಮಾರುಕಟ್ಟೆ ಅಭದ್ರತೆ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗುವ ಹಾನಿ, ಬಿತ್ತನೆ ಬೀಜಗಳಲ್ಲಿನ ಮೋಸದಿಂದಾಗುವ ನಷ್ಟ, ಇನ್ನಿತರೆ ಕಾರಣಗಳಿಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ. ರೈತರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕೃಷಿ ವೇತನ ಆಯೋಗವನ್ನು ರಚಿಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು. ಅದೇ ರೀತಿ ರೈತರು ಬೆಳೆದ ಕೃಷಿ ಉತ್ಪನ್ನಕ್ಕೆ ಸೂಕ್ತ ಬೆಂಬಲ ಬೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ಪರಿಶೀಲಿಸಿ ನಿಗದಿ ಮಾಡುವ ನೀತಿ ಜಾರಿಗೆ ತರಬೇಕು. ಕೃಷಿ ಕ್ಷೇತ್ರಕ್ಕೆಂದೇ ಕೇಂದ್ರ ಪ್ರತ್ಯೇಕ ಬಜೆಟ್ ಮಂಡಿಸಿ ಜಾರಿಗೆ ತರಬೇಕು. ಕುಲಾಂತರಿ ತಂತ್ರಜ್ಞಾನವನ್ನು ಕೂಡಲೇ ಬಹಿಷ್ಕರಿಸಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.
ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕು. ಮುಕ್ತ ವ್ಯಾಪಾರಕ್ಕಾಗಿ ಮಾಡಿಕೊಂಡ ಒಪ್ಪಂದ ರದ್ದುಗೊಳಿಸಬೇಕು. ರೈತರ ಆತ್ಮಹತ್ಯೆ ಬಗ್ಗೆ ವಿಶೇಷ ಸಂಸತ್ ಅಧಿವೇಶನ ಕರೆದು ಆತ್ಮಹತ್ಯೆಗೆ ಶರಣಾಗಿರುವ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ಕಾರ್ಯವನ್ನು ಕೇಂದ್ರ ಮಾಡಬೇಕೆಂದು ಸಮಾವೇಶದಲ್ಲಿ ಒತ್ತಾಯಿಸಿವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

