ಪಿಯು ಪರೀಕ್ಷೆ ಸಿದ್ಧತೆಗೆ ಡಿಸಿ ಸೂಚನೆ
ರಾಯಚೂರು: ವಿದ್ಯಾರ್ಥಿಗಳು ನಿರ್ಭೀತಿಯಿಂದ ಪಿಯುಸಿ ದ್ವಿತೀಯ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಈಚೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರ್ವಸಿದ್ಧತೆಯ ಸಭೆಯಲ್ಲಿ ಮಾತನಾಡಿ, ಪರೀಕ್ಷೆ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಎಚ್ಚರಿಕೆ ವಹಿಸುವುದು ಅಧಿಕಾರಿಗಳ ಮೊದಲಾದ್ಯತೆ ಯಾಗಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಡಿಡಿಪಿಯು ಇಲಾಖೆಯ ಅಧಿಕಾರಿಗಳು, ಮಾ.13ರಿಂದ 28ರವರೆಗೆ ನಡೆಯುವ ಪಿಯುಸಿ ದ್ವೀತಿಯ ಪರೀಕ್ಷೆಗೆ ಜಿಲ್ಲೆಯಿಂದ 9691 ಹೊಸ ವಿದ್ಯಾರ್ಥಿಗಳು, 4187 ಪುನರಾವರ್ತ ವಿದ್ಯಾರ್ಥಿಗಳು ಹಾಗೂ 1112 ಖಾಸಗಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆಂದು ತಿಳಿಸಿದರು.
27 ಪರೀಕ್ಷೆ ಕೇಂದ್ರ: ಜಿಲ್ಲೆಯಲ್ಲಿ ಒಟ್ಟು 27 ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ರಾಯಚೂರು ತಾಲೂಕಿನಲ್ಲಿ 5 ಸಾಮಾನ್ಯ, 5 ಸೂಕ್ಷ್ಮ ಪರೀಕ್ಷೆ ಕೇಂದ್ರಗಳಿವೆ. ಸಿಂಧನೂರು ತಾಲೂಕಿನಲ್ಲಿ 5 ಸೂಕ್ಷ್ಮ ಮತ್ತು ಒಂದು ಹೊಸ ಕೇಂದ್ರ ಸ್ಥಾಪಿಸಲಾಗುತ್ತಿದೆ. ಮಾನವಿ ತಾಲೂಕಿನಲ್ಲಿ 3 ಕೇಂದ್ರಗಳು ಸೂಕ್ಷ್ಮ ಕೇಂದ್ರಗಳಾಗಿವೆ. ಲಿಂಗಸ್ಗೂರುನಲ್ಲಿ 1 ಸಾಮಾನ್ಯ ಹಾಗೂ 4 ಸೂಕ್ಷ್ಮ ಕೇಂದ್ರಗಳಿದ್ದು, ಒಂದು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.
ದೇವದುರ್ಗ ತಾಲೂಕಿನಲ್ಲಿ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಎರಡೂ ಕೇಂದ್ರಗಳನ್ನು ಅತೀ ಸೂಕ್ಷ್ಮ ಕೇಂದ್ರಗಳೆಂದು ಪರಿಗಣಿಸಲಾಗಿದೆ. ಒಟ್ಟು ಜಿಲ್ಲೆಯ 27 ಕೇಂದ್ರಗಳ ಪೈಕಿ 6 ಸಾಮಾನ್ಯ, 17ಸೂಕ್ಷ್ಮ ಮತ್ತು 3 ಅತೀ ಸೂಕ್ಷ್ಮ ಮತ್ತು ಒಂದು ಹೊಸ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
9 ವಾಹನ ಅವಶ್ಯ: ಪರೀಕ್ಷೆ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸರಬರಾಜು ಮಾಡಲು ಒಟ್ಟು 7 ವಾಹನಗಳ ಅವಶ್ಯವಿದ್ದು, ವಾಹನಗಳ ಸಂಖ್ಯೆಯನ್ನು 9ಕ್ಕೇರಿಸುವ ಅವಶ್ಯಕತೆಯಿದೆ. ಲಿಂಗಸ್ಗೂರು ತಾಲೂಕಿನ ಮುದಗಲ್, ಮಸ್ಕಿ ಹಾಗೂ ಹಟ್ಟಿ ಪಟ್ಟಣಗಳ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಹೆಚ್ಚಿನ ವಾಹನದ ಅವಶ್ಯಕತೆಯಿದೆ ಎಂದು ಸಾರಿಗೆ ಅಧಿಕಾರಿಗಳ ಗಮನಕ್ಕೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷೆ ವೇಳೆ ನಿಷೇಧಾಜ್ಞೆ ಜಾರಿಗೊಳಿಸಲು ಮತ್ತು ಈ ಅವಧಿಯಲ್ಲಿ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲು ಆಯಾ ತಾಲೂಕು ತಹಸೀಲ್ದಾರರು ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಆದೇಶಿಸಿದರು.
ಆದೇಶ: ವಿಶೇಷ ವಿಚಕ್ಷಣಾ ದಳಗಳನ್ನು ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡು ರಚಿಸಲು ಅವರು ಸೂಚಿಸಿ, ಸಾಮಾನ್ಯ ಹಾಗೂ ಸೂಕ್ಷ್ಮ, ಅತೀ ಸೂಕ್ಷ್ಮ ಪರೀಕ್ಷೆ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸುವುದು ಹಾಗೂ ವಿಚಕ್ಷಣ ದಳಗಳಿಗೆ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಸರಬರಾಜು ಮಾಡುವ ತಂಡಗಳಿಗೆ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು.
ಅಗತ್ಯ ಆಸನಗಳ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರದಲ್ಲಿ ಮಾಡಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಹಾಗೂ ತಾಲೂಕು ಖಜಾನೆಗಳಲ್ಲಿ ಇರಿಸಿ, ಸರಿಯಾದ ಸಮಯಕ್ಕೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವುದು ಈ ಬಗ್ಗೆ ಜಿಲ್ಲಾ ಖಜಾನೆ ಅಧಿಕಾರಿಗಳು ಹಾಗೂ ಉಪ ಖಜಾನೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರಿಗೆ ಸಮಯಕ್ಕೆ ಸರಿಯಾಗಿ ಖಜಾನೆಗಳಿಂದ ಪ್ರಶ್ನೆ ಪತ್ರಿಕೆಗಳನ್ನು ನೀಡುವಂತೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ನಾಗರಾಜು ಸೂಚಿಸಿದರು.
ಸ್ಥಳಾಂತರ: ಸಿಂಧನೂರು ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿರುವ ಹಿನ್ನೆಲೆಯಲ್ಲಿ ಅಲ್ಲಿದ್ದ ಪರೀಕ್ಷೆ ಕೇಂದ್ರವನ್ನು ಸಿಂಧನೂರಿನ ದುದ್ದುಪೂಡಿ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ಡಿಡಿಪಿಯು ಸಭೆಗೆ ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ, ಸಹಾಯಕ ಪೋಲಿಸ್ ಅಧೀಕ್ಷಕಿ ಡಾ. ದಿವ್ಯ ಗೋಪಿನಾಥ, ಸಹಾಯಕ ಆಯುಕ್ತೆ ಮಂಜುಶ್ರೀ, ಉಪನಿರ್ದೇಶಕರಾದ ಕೆ. ಶರಣಪ್ಪ ಹಾಗೂ ಪರಮೇಶ್ವರ, ವಿವಿಧ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

