ಶೀಘ್ರವೇ ನ್ಯಾಯಾಲಯಕ್ಕೆ ಮೊರೆ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.9
ಸ್ಥಳೀಯ ನಗರಸಭೆಗೆ ಈಚೆಗೆ ನಡೆದ ಚುನಾವಣೆಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿಯುಂಟು ಮಾಡುವಂಥದ್ದಾಗಿದೆ. ಮತದಾರರ ಹೆಸರು ತೆಗೆದು ಹಾಕುವ ಮೂಲಕ ಅವರ ಮತದಾನದ ಹಕ್ಕು ಕಿತ್ತುಕೊಂಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ. ಹೀಗೆಂದು ಹೇಳಿದವರು ನಗರಸಭೆಯ 18ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸದಸ್ಯ ಮಾರೆಪ್ಪ.
ಅಧಿಕಾರಿಗಳು ಶಾಮೀಲು: ಅವರು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆಗೆ ಮಾ.7ರಂದು ನಡೆದ ಚುನಾವಣೆಯಲ್ಲಿ ಸಾವಿರಾರು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಆಧಾರವಿಲ್ಲದೇ ತೆಗೆದು ಹಾಕಲಾಗಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಆರೋಪಿಸಿದರು.
ಚುನಾವಣೆ ವೇಳೆ ಅಭ್ಯರ್ಥಿಗಳಿಗೆ ನೀಡಿದ ಮತದಾರರ ಪಟ್ಟಿಯಲ್ಲಿ ಎಲ್ಲ ಮತದಾರರ ಹೆಸರಿತ್ತು. ಆದರೆ ಮತದಾನದ ವೇಳೆ ಜಿಲ್ಲಾಡಳಿತವು ಅಧಿಕಾರಿಗಳಿಗೆ ಒದಗಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವುದು ಮತದಾರರಿಗೆ ಅನ್ಯಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯಿದೆ ಅಡಿ ಜಿಲ್ಲಾಡಳಿತದಿಂದ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಪಡೆದು ನ್ಯಾಯ ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದರು.
18ನೇ ವಾರ್ಡ್ ಒಂದರಲ್ಲಿಯೇ ಸುಮಾರು 1300ಕ್ಕೂ ಹೆಚ್ಚಿನ ಸಂಖ್ಯೆ ಮತದಾರರ ಹೆಸರುಗಳನ್ನು ಯಾವುದೇ ರೀತಿಯ ಆಧಾರವಿಲ್ಲದೇ ತೆಗೆದು ಹಾಕಿರುವುದು ಅಕ್ಷಮ್ಯ. ಇದಕ್ಕೆ ಜಿಲ್ಲಾಧಿಕಾರಿ ಮತ್ತು ರಾಜ್ಯ ಚುನಾವಣೆ ಆಯೋಗದ ಆಯುಕ್ತರೇ ನೇರ ಹೊಣೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದರು.
ಮತದಾರರಿಗೆ ಅನ್ಯಾಯ: ರಾಜ್ಯ ಚುನಾವಣೆ ಆಯೋಗವು ಸಮರ್ಪಕ ಸಿದ್ಧತೆಯಿಲ್ಲದೇ ಚುನಾವಣೆಗೆ ತೆರಳಿದ್ದೇ ಅವಾಂತರಕ್ಕೆ ಮೂಲ ಕಾರಣವಾಗಿದೆ. ಆದರೆ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ಆಯೋಗವು ತರಾತುರಿಯಲ್ಲಿ ಚುನಾವಣೆಗೆ ಮುಂದಾಗಿದ್ದರಿಂದ ಮತದಾರರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಮತದಾರರ ಮೂಲಭೂತ ಹಕ್ಕನ್ನು ಜಿಲ್ಲಾಡಳಿತ ಮತ್ತು ಚುನಾವಣೆ ಆಯೋಗಗಳು ಮೊಟಕುಗೊಳಿಸಿರುವುದು ಅಪರಾಧವಾಗಿದೆ. ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯನ್ನು ಸರಿಪಡಿಸಲ ಮಾತು ಜಿಲ್ಲಾಡಳಿತ ಕೇಳಿಬಂದಿದೆ. ಆದರೆ ಸದ್ಯದ ಚುನಾವಣೆಯಲ್ಲಿ ಭರ್ಜರಿ ಗೆಲವಿನ ಹುಮ್ಮಸ್ಸಿನಲ್ಲಿದ್ದ ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯ ಗೊಂದಲ ಭೀತಿ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಕ್ರೋಶ: ಮತದಾರರ ಪಟ್ಟಿಯಿಂದ ಅಭ್ಯರ್ಥಿಗಳ ಹೆಸರು ಸ್ವಯಂಪ್ರೇರಿತವಾಗಿ ತೆಗೆದು ಹಾಕುವ ಅಧಿಕಾರ ಜಿಲ್ಲಾಡಳಿತಕ್ಕಿಲ್ಲ. ಮತದಾರರ ಮನವಿಯಿಲ್ಲದೇ ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯ ಮಾರ್ಪಾಟು ಮಾಡುವಂತಿಲ್ಲ. ಆದರೆ ಮತದಾರರು ಮನವಿ ಮಾಡದಿದ್ದರೂ ಅವರ ಹೆಸರನ್ನು ತೆಗೆದು ಹಾಕುವುದು, ಇಲ್ಲವೇ ಬೇರೆ ವಾರ್ಡುಗಳಿಗೆ ಸ್ಥಳಾಂತರಿಸಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಶೀಘ್ರವೇ ಮತದಾರರ ಪಟ್ಟಿಯ ಅವಾಂತರ ವಿರುದ್ಧ ಅಗತ್ಯ ದಾಖಲೆಗಳನ್ನು ಪಡೆದು ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಮಾರೆಪ್ಪ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

