ಸಾಮೂಹಿಕ ವಿವಾಹ: ವೆಚ್ಚಕ್ಕೆ ಕಡಿವಾಣ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮಾ.9
ಸಾಮೂಹಿಕ ಮದುವೆಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ ಸಮಾಜದಲ್ಲಿ ಸಾಮರಸ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಅಭಿಪ್ರಾಯಪಟ್ಟರು.
ಶಹಾಪುರ ತಾಲೂಕಿನ ಸುಕ್ಷೇತ್ರ ದೋರನಳ್ಳಿ ಗ್ರಾಮದ ಸಾವಿರ ದೇವರು ಮಠದ ಗುರು ಮಹಾಂತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರ್ಥಿಕ ಸಮಸ್ಯೆ: ಇಂದಿನ ತುಟ್ಟಿ ಕಾಲದಲ್ಲಿ ಮದುವೆ ಮಾಡಲು ಆರ್ಥಿಕ ಸಮಸ್ಯೆ ಕಾಡುತ್ತದೆ. ಅದರಲ್ಲೂ ಮುಖ್ಯವಾಗಿ ಹೆಣ್ಣು ಹೆತ್ತವರಿಗೆ ಹಾಗೂ ಬಡ ಕುಟುಂಬಗಳಿಗೆ ತುಂಬಾ ಸಮಸ್ಯೆಯಾಗುತ್ತದೆ.
ಆದ್ದರಿಂದ ಸಮೂಹಿಕ ವಿವಾಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಇದನ್ನು ಮನಗೊಂಡು ಮಠ ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ಸಂಗತಿ. ದೋರನಳ್ಳಿ ಗ್ರಾಮದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ವೀರಮಹಾಂತ ಸ್ವಾಮೀಜಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ. ಇಲ್ಲಿ ವಿವಾಹವಾದ ನವ ದಂಪತಿಗಳು ಮುಂದಿನ ಜೀವನವನ್ನು ಸುಖ ಹಾಗೂ ನೆಮ್ಮದಿಯಿಂದ ಕಳೆಯುವಂತಾಗಲಿ ಎಂದು ಆಶಿಸಿದರು.
ಆಶೀರ್ವಾದ: ಶಹಾಪುರ ಶಾಸಕ ಶರಣಬಸ್ಸಪ್ಪ ದರ್ಶನಾಪುರ ಮಾತನಾಡಿ, ಕಳೆದ 4 ವರ್ಷಗಳಿಂದ ದೋರನಳ್ಳಿ ಗ್ರಾಮದ ಸಾವಿರ ದೇವರು ಮಠ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಇತರ ಮಠಗಳಿಗೂ ಇದು ಮಾದರಿ. ಇಲ್ಲಿ ಮದುವೆಯಾದ ಜೋಡಿಗಳಿಗೆ ಪೂಜ್ಯರ ಆಶೀರ್ವಾದ ದೊರೆತಂತಾಗಿದೆ. ಇಂತಹ ಬಿರು ಬಿಸಲಿನಲ್ಲಿಯೂ ಸಾವಿರಾರು ಜನ ಸೇರಿರುವುದು ಮಠದ ಮೇಲಿರುವ ಭಕ್ತಿಯನ್ನು ತೋರಿಸುತ್ತದೆ ಎಂದರು.
ಮಠದ ಪೀಠಾಧಿಪತಿ ವೀರಮಹಾಂತ ಸ್ವಾಮೀಜಿ ಮಾತನಾಡಿ, ಮಠದ ಪ್ರತಿಯೊಂದು ಕಾರ್ಯಕ್ರಮಗಳಿಗೂ ದೋರನಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮತ್ತು ರಾಜಕೀಯ ಪ್ರತಿನಿಧಿಗಳು ಸಲಹೆ, ಸಹಕಾರ ನೀಡುತ್ತಿದ್ದು, ಇದು ನಿರಂತವಾಗಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಮಹಾಂತಶ್ರೀ ಪ್ರಶಸ್ತಿ: ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವಿದ್ಯಾಧರ ಗುರೂಜಿ ಅವರಿಗೆ ಮಹಾಂತಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
101 ಜೋಡಿ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾನ್ನಿಧ್ಯವನ್ನು ಅಬ್ಬೆತುಮಕೂರಿನ ಡಾ.ಗಂಗಾಧರ ಸ್ವಾಮೀಜಿ, ಕಡಗಂಚಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ಗುಲ್ಬರ್ಗ ಸುಲಫಲ ಮಠದ ಮಹಾಂತ ಸ್ವಾಮೀಜಿ, ಗುರಮಠಕಲ್ ಖಾಸಾ ಮಠದ ಶಾಂತವೀರ ಸ್ವಾಮೀಜಿ ಇತರರು ವಹಿಸಿದ್ದರು.
ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನೂರ್, ಜಿಪಂ ಅಧ್ಯಕ್ಷೆ ಮರೆಮ್ಮ ಶಾಣೆನೋರ, ಉಪಾಧ್ಯಕ್ಷ ಶರಣೀಕಕುಮಾರ ದೋಖಾ, ಸದಸ್ಯರಾದ ದೇವರಾಜ ನಾಯಕ, ಬಸವರಾಜ ಖಂಡ್ರೆ, ಪ್ರಮುಖರಾದ ಶ್ರೀನಿವಾಸರಡ್ಡಿ ಚೆನ್ನೂರ, ಡಾ.ಶರಣಭೂಪಾಲರಡ್ಡಿ ನಾಯ್ಕಲ್, ಡಾ.ಚಂದ್ರಶೇಖರ ಸುಬೇದಾರ್ ಮೊದಲಾದ ಗಣ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

