ವಿದ್ಯಾರ್ಥಿಗಳ ತಲೆ ಮೇಲೆ ಅಪಾಯದ ತೂಗುಗತ್ತಿ!
-ಬಿಂದುಮಾಧವ ಮಣ್ಣೂರು
ಕನ್ನಡಪ್ರಭ ವಾರ್ತೆ, ಅಫಜಲ್ಪುರ, ಮಾ. 12
ತಾಲೂಕಿನ ಮಣ್ಣೂರು ಹಾಗೂ ರಾಮನಗರ ಗ್ರಾಮಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 10 ಕೋಣೆಗಳು ಶಿಥಿಲಗೊಂಡಿವೆ. ಈ ಕೋಣೆಗಳ ಸೂರಿನಿಂದ ಸಿಮೆಂಟ್ ಕಳಚಿ ಬೀಳುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಗೋಡೆಗಳಿಂದ ಸಿಮೆಂಟ್ ಉದುರುತ್ತಿದ್ದರೂ ನೂರಾರು ಮಕ್ಕಳು ನಿತ್ಯವೂ ಶಿಥಿಲ ಶಾಲಾ ಕೋಣೆಗಳ ಆಸರೆಯಲ್ಲೇ ಪಾಠ ಕಲಿಯುವಂತಾಗಿದೆ. ಇದರಿಂದಾಗಿ ಈ ಹಳ್ಳಿಗಳ ನೂರಾರು ಪುಟಾಣಿಗಳ ನೆತ್ತಿ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ
ಮಣ್ಣೂರಲ್ಲಿ ಗೋಳು: ಮಣ್ಣೂರು ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯ 6 ಕೋಣೆಗಳು ಬಿರುಕು ಬಿಟ್ಟಿವೆ. ಯಾವುದೇ ಕ್ಷಣದಲ್ಲಿ ಬೀಳುವ ಹಂತದಲ್ಲಿವೆ. 2012-13ನೇ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಿರ್ಮಿಸಲಾದ 4 ಕೋಣೆಗಳು 2005-06ನೇ ಸಾಲಿನಲ್ಲಿ ನಿರ್ಮಿಸಲಾದ ಎರಡು ಕೋಣೆಗಳು ಸಂಪೂರ್ಣ ಬಿರುಕು ಬಿಟ್ಟಿದೆ.
ಈ ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿಯವರಿಗೆ 900 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ಬಿರುಕು ಬಿಟ್ಟಿರುವ ಕೋಣೆಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ವರದಿ ಸಲ್ಲಿಸಿ ಸುಮಾರು ಎರಡು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ.
ರಾಮನಗರ ಶಾಲಾ ಕೋಣೆಗಳೂ ಶಿಥಿಲ: ರಾಮನಗರ ಗ್ರಾಮದಲ್ಲಿ ಸುಮಾರು 150 ವಿದ್ಯಾರ್ಥಿಗಳು ಓದುತ್ತಿದ್ದಾರೆ. 1 ರಿಂದ 3ನೇ ತರಗತಿವರೆಗೆ ಒಟ್ಟು 76 ವಿದ್ಯಾರ್ಥಿಗಳನ್ನು ನಲಿಕಲಿ ಕೋಣೆಯಲ್ಲಿ ಕೂಡಿಸಿ ಪಾಠ ಹೇಳಬೇಕೆಂದು ಸರಕಾರದ ಆದೇಶ. ಅದರಂತೆಯೇ ಇಲ್ಲಿ 1ರಿಂದ 3ನೇ ತರಗತಿಯ ಒಟ್ಟು 76 ವಿದ್ಯಾರ್ಥಿಗಳು ಬಿರುಕು ಬಿಟ್ಟಿರುವ ಮೇಲ್ಚಾವಣೆಯಲ್ಲಿ ಕುಸಿಯುತ್ತಿರುವ ಈ ನಲಿ-ಕಲಿ ಕೋಣೆಯಲ್ಲಿ ಭಯದಿಂದಲೇ ಆತಂಕದಿಂದ ಪಾಠ ಮಾಡುತ್ತಿದ್ದಾರೆ.
ಬಿಸಿಯೂಟ: ಈ ಶಾಲೆಗೆ ಒಟ್ಟು 5 ಕೋಣೆಗಳು ಮಂಜೂರಾಗಿದ್ದು, ಇದರಲ್ಲಿ 2 ಕೋಣೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಬರುವ ಮಳೆಗಾಳದಲ್ಲಿ ಸಂಪೂರ್ಣವಾಗಿ ಕುಸಿದು ಬೀಳುವ ಹಂತದಲ್ಲಿವೆ. ಈ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆ ಸರಿಯಾಗಿದೆ. ಬಿಸಿಯೂಟದ ಸಲುವಾಗಿ ಸಿಲೆಂಡರ್ಗಳ ಪೂರೈಕೆಯಿಲ್ಲ.
ಸೌದೆಯಿಂದ ಒಲೆಯ ಮೇಲೆ ಬಿಸಿಯೂಟ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಶಾಲೆಯಲ್ಲಿ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಉತ್ತಮವಾಗಿದೆ. ಕುಡಿಯುವ ನೀರಿನ ಸಲುವಾಗಿ ವಿದ್ಯಾರ್ಥಿಗಳಿಗೆ ಅನುಕೂಲಮಾಡಿ ಕೊಡಲಾಗಿದೆ. ಶಾಲೆಯ ಕೋಣೆಗಳು ಕುಸಿಯುತ್ತಿರುವುದರಿಂದ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಗಮನ ಹರಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

