ಮರಾಠಿಗರ ಓಲೈಕೆ: ಬಿಜೆಪಿ ಅಭ್ಯರ್ಥಿ ವಿರುದ್ಧ ಟೀಕೆ
ರಾಯಚೂರು: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜಯ್ ಪಾಟೀಲ್ ತಮ್ಮ ಪ್ರಚಾರ ವೇಳೆ ಮರಾಠಿ ಮತದಾರರ ಓಲೈಕೆಗೆ ನೀಡಿರುವ ಹೇಳಿಕೆಗೆ ಕರ್ನಾಟಕ ನವನಿರ್ಮಾಣ ಸೇನೆ ವಿರೋಧಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ನಗರ ಅಧ್ಯಕ್ಷ ಮಹೇಶ ಕುಮಾರ್ ಮತ್ತಿತರರು, ಮರಾಠಿ ಮತದಾರರ ಓಲೈಕೆಗೆ ಅಭ್ಯರ್ಥಿ ಸಂಜಯ್ ಪಾಟೀಲ್, ತಮಗೆ ಬೆಂಬಲಿಸಿದರೆ ಮರಾಠಿ ಭಾಷೆಯಲ್ಲಿಯೇ ವಿಧಾನಸೌಧದಲ್ಲಿ ಕಡತಗಳನ್ನು ನಿರ್ವಹಿಸಿ ಮತ್ತು ಮರಾಠಿಯನ್ನು ಶಾಲಾ ಕಾಲೇಜುಗಳಲ್ಲಿ ಅಳವಡಿಸಲು ಭರವಸೆ ನೀಡಿದ್ದು ಖಂಡನೀಯ ಎಂದು ಟೀಕಿಸಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ರಾಜಕೀಯ ನಾಯಕರು ಸ್ವಾರ್ಥ ಸಾಧನೆಗೆ ಮುಂದಾಗಿರುವುದು ಸರಿಯಲ್ಲ. ಅಷ್ಟೇ ಅಲ್ಲ ಬಿಜೆಪಿ ಪಕ್ಷವು ಇಂಥ ಕನ್ನಡ ವಿರೋಧಿ ನಿಲುವಿನ ವ್ಯಕ್ತಿಯನ್ನು ಬೆಳಗಾವಿಯಲ್ಲಿ ಕಣಕ್ಕಿಳಿಸಿರುವುದು ಆ ಪಕ್ಷದ ನಿಲುವು ಸ್ಪಷ್ಟಪಡಿಸಿದೆ ಎಂದು ದೂರಿದ್ದಾರೆ.
ಹೀಗೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರಿಗೆ ಅನ್ಯಾಯ ಮಾಡ ಹೊರಟಿರುವ ಇಂಥ ನಾಯಕರ ವಿರುದ್ಧ ಬಿಜೆಪಿ ಪಕ್ಷದ ವರಿಷ್ಠರು ಕೂಡಲೇ ಕ್ರಮ ಕೈಗೊಳ್ಳಬೇಕು. ಕನ್ನಡಿಗರ ಕ್ಷಮೆಯಾಚಿಸುವಂತೆ ಸೂಚಿಸಲು ಆಗ್ರಹಿಸಿದ್ದಾರೆ.
ಮಸ್ಕಿಗೆ ಗ್ರಾಮಗಳ ಸೇರ್ಪಡೆಗೆ ವಿರೋಧ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಲಿಂಗಸ್ಗೂರು: ಸರ್ಜಾಪುರ, ಕುಪ್ಪಿಗುಡ್ಡ ಮತ್ತು ಅಮರಾವತಿ ಗ್ರಾಮಗಳನ್ನು ಮಸ್ಕಿ (ತಾಲೂಕು) ಕ್ಷೇತ್ರದಲ್ಲಿ ಒಳಪಡಿಸಿದ್ದನ್ನು ವಿರೋಧಿಸಿ ಮತ್ತು ಲಿಂಗಸ್ಗೂರು ತಾಲೂಕಿನಲ್ಲಿ ಉಳಿಸಬೇಕೆಂದು ಆಗ್ರಹಿಸಿ ಮೇ 5ರಂದು ನಡೆವ ಮತದಾನ ಬಹಿಷ್ಕರಿಸಲಾಗುವುದೆಂದು ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದರು.
ಲಿಂಗಸ್ಗೂರು ತಾಲೂಕು ಕೇಂದ್ರದಿಂದ ಸುಮಾರು 6-8 ಕಿಮೀ ಅಂತರವಿರುವ ಸರ್ಜಾಪುರ, ಕುಪ್ಪಿಗುಡ್ಡ ಮತ್ತು ಅಮರಾವತಿ ಗ್ರಾಮಗಳು ಲಿಂಗಸ್ಗೂರು ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿದ್ದವು. ಆದರೆ ಸದರಿ ಗ್ರಾಮಗಳನ್ನು ಸುಮಾರು 50 ಕಿಮೀ ಅಂತರವಿರುವ ಮಸ್ಕಿ (ತಾಲೂಕು) ವಿಧಾನಸಭೆ ಕ್ಷೇತ್ರಕ್ಕೆ ಒಳಪಡಿಸಲಾಗಿದೆ. ಇದರಿಂದ ಮೂರು ಗ್ರಾಮಗಳ ಜನತೆ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ.
ಸದರಿ ಗ್ರಾಮಗಳನ್ನು ಲಿಂಗಸ್ಗೂರು ತಾಲೂಕಿನಲ್ಲಿ ಯಥಾಸ್ಥಿತಿ ಉಳಿಸುವಂತೆ ಆಗ್ರಹಿಸಿ ಫೆ.11ರಂದು ಸರ್ಜಾಪುರ ಗ್ರಾಮದಿಂದ ಪಾದಯಾತ್ರೆ ಮೂಲಕ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರಿಗೆ ಮನವಿ ಮಾಡಲಾಯಿತು. ಅಲ್ಲದೆ ಇತ್ತಿಚಿಗೆ 3 ಗ್ರಾಮಗಳ ಜನತೆ ಸರ್ಜಾಪುರ ಗ್ರಾಮದಲ್ಲಿ ಸಭೆ ಸೇರಿ ನಂತರ ಸುದ್ಧಿಗೋಷ್ಠಿ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಯಾವುದೆ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ಮೂರು ಗ್ರಾಮಗಳ ಜನತೆ ಮೇ 5ರಂದು ನಡೆವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮೂರು ಗ್ರಾಮಗಳ ಮುಖಂಡರಾದ ಗುಂಡಪ್ಪ ನಾಯಕ, ಮಾಧವ ನೆಲೋಗಿ, ಶಂಕರಗೌಡ ದಳಪತಿ, ಹನುಮಂತರಾಯ ನೆಲೋಗಿ, ಶಂಕ್ರಪ್ಪ ಕುಪ್ಪಿಗುಡ್ಡ, ಶರಣಪ್ಪ ಕುಪ್ಪಿಗುಡ್ಡ, ಗ್ರಾಪಂ ಸದಸ್ಯ ಹನುಮೇಶ, ಬಾಲಪ್ಪ ಮಾನಮಟ್ಟಿ, ಲಕ್ಷ್ಮಣ ಗುಂಟ್ರಾಳ, ಏಕಅಮರಣ್ಣ, ಮಾನಯ್ಯ, ಬಸನಗೌಡ ಇದ್ದರು.
ಕಾಂಗ್ರೆಸ್ ಗೆಲವು ನಿಶ್ಚಿತ: ಶಶಿಕುಮಾರ್
ದೇವದುರ್ಗ: ಕ್ಷೇತ್ರದಲ್ಲಿ ಮಾಜಿ ಸಂಸದ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕ ಗೆಲವು ಖಚಿತ ಎಂದು ಚಿತ್ರನಟ ಶಶಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಗುರುವಾರ ತಾಲೂಕಿನ ಗಬ್ಬೂರು, ಮಸರಕಲ್, ದೇವದುರ್ಗ, ಜಾಲಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪರ ಅಲೆಯಿದ್ದು, ಪ್ರಸಕ್ಚ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
2008ರ ಚುನಾವಣೆಯ ನಂತರದಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ ಬಿಜೆಪಿ ಶಾಸಕ ಶಿವನಗೌಡ ನಾಯಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಿಲ್ಲ. ಬದಲಿಗೆ ವೈಯಕ್ತಿಕವಾಗಿ ಸಾಕಷ್ಟು ಬೆಳೆದಿದ್ದಾರೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದಾರೆಂದು ಟೀಕಿಸಿ, ಕೇವಲ ನಾಲ್ಕೂವರೆ ವರ್ಷದಲ್ಲಿ ಅಪಾರ ಪ್ರಮಾಣದ ಆಸ್ತಿ ಗಳಿಸಲು ಹೇಗೆ ಸಾಧ್ಯ ಎಂಬುದನ್ನು ಮತದಾರರು ಗಮನಿಸಬೇಕೆಂದು ಮನವಿ ಮಾಡಿದರು.
ಕಳೆದ 20 ವರ್ಷಗಳಿಂದ ಮಾಜಿ ಸಂಸದ ಎ. ವೆಂಕಟೇಶ ನಾಯಕ ತಮಗೆ ಪರಿಚಿತರಾಗಿದ್ದು, ಸರಳ- ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಅಧಿಕಾರದಾಸೆಗೆ ಅವರು ಎಂದಿಗೂ ಸುಳ್ಳು ಭರವಸೆ ನೀಡಿಲ್ಲ. ಇತರರಿಗೆ ಕೆಟ್ಟದ್ದು ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ವಿ. ನಾಯಕ, ಅಮರೇಗೌಡ ಹಂಚಿನಾಳ, ರವಿಕುಮಾರ, ಬುಡ್ಡನಗೌಡ ಜಾಗಟಕಲ್, ಎ.ಮಲ್ಲಿಕಾರ್ಜುನ ಪಾಟೀಲ್, ರಾಜಾ ಚಂದ್ರಹಾಸ ನಾಯಕ, ಯಕ್ಬಾಲ ಸಾಬ ಹೌದುಡಿ, ಅಮರೇಶ ಬಲ್ಲಿದವ್, ಪುರಸಭೆ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಗೋಸಲ್ ಸೇರಿ ಅನೇಕರಿದ್ದರು.
ಕಾಂಗ್ರೆಸ್ ವೀಕ್ಷಕರ ನೇಮಕ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಕ್ಷೇತ್ರಗಳ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಪಕ್ಷದ ವೀಕ್ಷಕರನ್ನಾಗಿ ಪ್ರೇಮಲತಾ ಅವರನ್ನು ಮಸ್ಕಿ ಮತ್ತು ದೇವದುರ್ಗ ಕ್ಷೇತ್ರಕ್ಕೆ ನೇಮಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷೆ ಎ.ಎಸ್. ಮಹೇಶ್ವರಿ ಅವರು, ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಗೆಲವಿಗೆ ಶ್ರಮಿಸುವ ನಿಟ್ಟಿನಲ್ಲಿ ಪೂರಕವಾಗಿ ಮುಖಂಡರೊಂದಿಗೆ ಜತೆಗೂಡಿ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

