ಹಳ್ಳಕ್ಕೆ ರಿಂಗ್ಬಂಡ್ ಹಾಕಿ ನೀರು ಸಂಗ್ರಹಿಸಿ
ಸಿಂಧನೂರು: ಹಳ್ಳಕ್ಕೆ ರಿಂಗ್ ಬಂಡ್ ಹಾಕಿ ನೀರು ಸಂಗ್ರಹಿಸಿ ಬೇಸಿಗೆಯ ನೀರಿನ ಅಭಾವವನ್ನು ತಪ್ಪಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಂಧನೂರು ನಗರದಲ್ಲಿ ಉದ್ಭವಿಸಿರುವ ಕುಡಿವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
5 ದಿನಗಳಿಗೊಮ್ಮೆ ನೀರು: ಮೈಸೂರು, ಬೆಂಗಳೂರನ್ನು ಹೋಲಿಸಿ ನೋಡಿದರೆ ರಾಯಚೂರು ಜಿಲ್ಲೆಯಲ್ಲಿ ಅಷ್ಟೊಂದು ನೀರಿನ ಸಮಸ್ಯೆ ಇಲ್ಲ. ಅಲ್ಲಿ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
ಸಿಂಧನೂರಿನಲ್ಲಿ ಈ ಮುಂಚೆ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಬೇಸಿಗೆ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಮೇ 20ರಿಂದ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಭೆ ಕರೆದಿರುವುದು ಮುನ್ನೆಚ್ಚರಿಕೆ ದೃಷ್ಟಿಯಿಂದ ಒಳ್ಳೆಯದು. ಮೊದಲು ಹಳ್ಳದಲ್ಲಿ ಹರಿಯುತ್ತಿರುವ ನೀರನ್ನು ಹದಿನೈದು ದಿನಗಳೊಳಗಾಗಿ ಸಂಗ್ರಹಿಸಬೇಕಾದ ಎಲ್ಲಾ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಹೊಸ ಕಟ್ಟಡಗಳಿಗೆ ನೀರು ಪೂರೈಕೆಯನ್ನು ನಗರಸಭೆಯವರು ತುರ್ತಾಗಿ ನಿಲ್ಲಿಸಲು ಕ್ರಮಕೈಗೊಳ್ಳಬೇಕೆಂದು ಹೇಳಿದರು.
40 ಲಕ್ಷ ಪ್ರಸ್ತಾವನೆ: ಬೇಸಿಗೆಯ ಕುಡಿಯುವ ನೀರಿನ ಪೂರೈಕೆಗೆ 40 ಲಕ್ಷ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಶಾಸಕರು ನಗರಾಭಿವೃದ್ಧಿ ಇಲಾಖೆಯ ನಿರ್ದೇಶಕರ ಮೇಲೆ ಒತ್ತಡ ಹಾಕಿ ಹಣ ಬಿಡುಗಡೆ ಮಾಡಿಸಬೇಕೆಂದು ಜಿಲ್ಲಾಧಿಕಾರಿ ಶಾಸಕರಿಗೆ ಮನವಿ ಮಾಡಿದರು. ಕೆರೆಯಲ್ಲಿ ಸದ್ಯ 40 ಎಂಜಿ ನೀರು ಸಂಗ್ರಹವಿದೆ. ಈ ನೀರನ್ನು ಸದ್ಯದ ವ್ಯವಸ್ಥೆಯಲ್ಲಿ ಪೂರೈಕೆ ಮಾಡಿದರೆ ಜೂನ್ ಅಂತ್ಯಕ್ಕೆ ನೀರು ಖಾಲಿಯಾಗುತ್ತದೆ. ಆದ್ದರಿಂದ ಹಳ್ಳದಲ್ಲಿ ಹರಿಯುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲಿ ನೀರು ಸಂಗ್ರಹಗೊಂಡ ನಂತರ ಶಾಲಾ ಬೋರ್ವೆಲ್ ಹಾಕಿ 8 ಇಂಚಿನ ಪೈಪ್ಲೈನ್ ಹಾಕಬೇಕು. ಕನಿಷ್ಟ 4 ಮೋಟಾರ್ಗಳಿಂದ ನೀರನ್ನು ಪಂಪ್ಹೌಸ್ಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಈಗ ಬಿಡುತ್ತಿರುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ, ವಾಲ್ಗಳಲ್ಲಿ ಉಂಟಾಗುವ ಸೋರಿಕೆಯನ್ನು ತಡೆಗಟ್ಟಬೇಕು. ವಸತಿಗೃಹ, ಮತ್ತಿತರ ದೊಡ್ಡ ಮಹಲ್ಗಳಿಗಿರುವ ಎರಡೆರಡು ಪೈಪ್ಲೈನ್ಗಳನ್ನು ತೆಗೆಯಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಸಲಹೆ ನೀಡಿದರು.
ಕೆರೆ ನೀರನ್ನು ಮಿತವಾಗಿ ಬಳಸಿ: ಲಿಂಗಸ್ಗೂರು ಉಪವಿಭಾಗದ ಸಹಾಯಕ ಆಯುಕ್ತ ಟಿ.ಯೋಗೀಶ ಮಾತನಾಡಿ, ಕೆರೆ ನೀರನ್ನು ಮಿತವಾಗಿ ಬಳಸಬೇಕು. ನಗರಸಭೆ ಸದಸ್ಯರು ಆಯಾ ವಾರ್ಡ್ಗಳಲ್ಲಿ ಜನ ಮೋಟಾರ್ಗಳ ಮೂಲಕ ನೀರು ಪಡೆದುಕೊಳ್ಳುವುದನ್ನು ನಿಯಂತ್ರಿಸಬೇಕು.
ಹೊಸ ಕಟ್ಟಡಗಳಿಗೆ ಪರವಾನಿಗೆ ನೀಡಬಾರದು. ನಗರಸಭೆಯ ನೀರು ಬಿಡುವ ಸಿಬ್ಬಂದಿ, ಅಭಿಯಂತರರು ಬೇಸಿಗೆ ಮುಗಿಯುವವರೆಗೆ ಹಗಲು ರಾತ್ರಿಯೆನ್ನದೆ ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ನಗರಸಭೆಯ ಸದಸ್ಯರಾದ ಕೆ.ಮರಿಯಪ್ಪ, ಜಾಫರ್ ಜಾಗೀರದಾರ, ಶೇಖರಪ್ಪ ಗಿಣಿವಾರ, ಲಿಂಗರಾಜ ಹೂಗಾರ, ಚಂದ್ರಶೇಖರ ಮೈಲಾರ, ಪ್ರಭುರಾಜ ಮತ್ತಿತರರು ವಿವಿಧ ರೀತಿಯ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ನಾಸೀರಲಿ, ಸದಸ್ಯರಾದ ಎಂ.ಬಿ.ಪಾಟೀಲ್, ಮೈಹಿಬೂಬ್, ರಾಜುಬಂಡಿ, ನಬೀಸಾಬ, ನಾಗಪ್ಪ, ಹಾಜಿಮಸ್ತಾನ, ಸಣ್ಣವೀರಭದ್ರಪ್ಪ, ಶರಣಬಸವ, ಗ್ಯಾನಪ್ಪ, ಅನಿತಾ ಸಿದ್ರಾಮೇಶ, ಸುಮಂಗಲಾ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

