ರಾಯಚೂರು

ಕೇಂದ್ರದ ಜನ ವಿರೋಧಿ ನೀತಿ; 27ರಂದು ಬಿಜೆಪಿ ಹೋರಾಟ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 24
ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಕಳೆದ ಎರಡು ಅವಧಿಯ ಅಧಿಕಾರದಲ್ಲಿ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಿಸುವಲ್ಲಿಯೂ ವಿಫಲವಾಗಿದೆ. ಕೇಂದ್ರದ ಅಕ್ರಮ ಮತ್ತು ಜನವಿರೋಧಿ ನೀತಿ ಖಂಡಿಸಿ ಮೇ 27ರಂದು ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ತ್ರಿವಿಕ್ರಮ್ ಜೋಷಿ ಹೇಳಿದರು.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ವೈಫಲ್ಯವನ್ನು ಖಂಡಿಸಿ ರಾಜ್ಯಾದ್ಯಂತ ಮೇ 27ರಂದು ಬಿಜೆಪಿಯಿಂದ ಪ್ರತಿಭಟನೆ, ಧರಣಿ ಹೋರಾಟ ಆಯೋಜಿಸಲಾಗಿದೆ. ಅದರಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಗರಣಗಳ ಸರಮಾಲೆ: ಕೇಂದ್ರದ ಯುಪಿಎ ಸರ್ಕಾರವು ಕಳೆದ ಎರಡು ಅವಧಿಯಲ್ಲಿಯೂ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಲಕ್ಷಾಂತರ ಕೋಟಿ ರು. ಹಗರಣಗಳಲ್ಲಿ ಭಾಗಿಯಾಗಿರುವ ಅನೇಕರನ್ನು ಕಾಂಗ್ರೆಸ್ ಸರ್ಕಾರ ಬೆಂಬಲಿಸುತ್ತಲೇ ಸಾಗಿದೆ. ಕಾಮನ್ವೆಲ್ತ್ ಹಗರಣ, 2ಜಿ ತರಂಗಾಂತರ ಹಂಚಿಕೆ ಅಕ್ರಮ, ಕಲ್ಲಿದ್ದಲು ಹಗರಣ ಸೇರಿದಂತೆ ಅನೇಕ ರೀತಿಯ ಹಗರಣಗಳಲ್ಲಿ ಕಾಂಗ್ರೆಸ್ ಸಚಿವರು ತೊಡಗಿದ್ದು ಸಾಬೀತಾಗಿದೆ ಎಂದು ಆರೋಪಿಸಿದರು.
ತೀರಾ ಈಚೆಗೆ ರೇಲ್ವೆ ಖಾತೆ ಸಚಿವರ ಸಂಬಂಧಿಯೊಬ್ಬ ರೇಲ್ವೆ ಇಲಾಖೆ ಬಡ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ಲಂಚ ಸ್ವೀಕರಿಸಿದ್ದು ಬಯಲಿಗೆ ಬಂದಿದೆ. ಇಂಥ ಅನೇಕ ಹಗರಣಗಳಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಶಾಮೀಲಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಅಕ್ರಮಗಳಲ್ಲಿ ಭಾಗಿಯಾಗಿದ್ದರೂ ಸಚಿವರನ್ನು ಕಾಂಗ್ರೆಸ್ ಬೆಂಬಲಿಸುತ್ತಲೇ ಬಂದಿದೆ. ಈಚೆಗೆ ಸಂಸತ್ ಅಧಿವೇಶನದಲ್ಲಿ ಸಚಿವರ ಅಕ್ರಮದ ಹಿನ್ನೆಲೆ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಹೋರಾಟಕ್ಕೆ ಮುಂದಾದರೂ ತಿಂಗಳುಗಟ್ಟಲೇ ಕಾಲಹರಣ ಮಾಡಿ ಕೊನೆಗೆ ರಾಜಿನಾಮೆ ಪಡೆಯುವ ಕಾರ್ಯ ಕಾಂಗ್ರೆಸ್ ಮಾಡಿತೆಂದು ದೂರಿದರು.
ಬದಲಾಣೆಗೆ ಆದ್ಯತೆ: ಈಚೆಗೆ ಖಾಸಗಿ ವಾಹಿನಿಗಳು ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾರ್ಯವೈಖರಿಯ ಬಗ್ಗೆ ಹಾಗೂ ಪ್ರಧಾನಿ ಕಚೇರಿಯೇ ಅಕ್ರಮಗಳಿಗೆ ನೆರವು ನೀಡಿದ ಬಗ್ಗೆ ಬೇಸರಗೊಂಡಿರುವ ಶೇ.67ರಷ್ಟು ಜನತೆ ಬದಲಾವಣೆ ಬಯಸಿದ್ದಾರೆ. ಇದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಜನಪ್ರಿಯತೆಯನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಅಂತರಿಕ ಭದ್ರತೆಯ ವಿಚಾರದಲ್ಲಿಯೂ ಕೇಂದ್ರ ಸರ್ಕಾರ ವೈಫಲ್ಯ ಎದ್ದು ಕಾಣುತ್ತಿದೆ. ಅದರಲ್ಲೂ ಮಾಲ್ಡೀವ್ಸ್ ನಂಥ ಪುಟ್ಟ ರಾಷ್ಟ್ರ ದೇಶದ ಭದ್ರತೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಕಾರ್ಯ ಮಾಡುತ್ತಿದೆ. ಅದೇ ರೀತಿಯ ನೆರೆಯ ರಾಷ್ಟ್ರಗಳಿಂದ ಆತಂಕವಿದ್ದರೂ ಕೇಂದ್ರ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿದರು.
ದೇಶದ ವಿವಿಧೆಡೆ ಬಾಂಬ್ ಸ್ಫೋಟದ ಘಟನೆಗಳಿಗೆ ಸಂಬಂಧಿಸಿ ಆರೋಪಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ತನಿಖೆಯನ್ನು ತೀವ್ರಗೊಳಿಸುತ್ತಿಲ್ಲ. ಇದರಿಂದ ದೇಶದ ನಿವಾಸಿಗಳಿಗೆ ಆತಂಕ ಎದುರಾಗಿದೆ. ಜನತೆಗೆ ಭದ್ರತೆ ಒದಗಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ದೂರಿದರು.
ಜನವಿರೋಧಿ ನೀತಿ: ಅದೇ ರೀತಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಅದರ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಣಾಮ ಬಡವರು ಹಾಗೂ ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಎಲ್ಲ ಜನವಿರೋಧಿ ನೀತಿಯನ್ನು ಖಂಡಿಸಿ ಮೇ 27ರಂದು ನಗರದಲ್ಲಿ ಬಿಜೆಪಿ ವತಿಯಿಂದ ಹೋರಾಟ ಆಯೋಜಿಸಿದ್ದು ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, 371ನೇ ಕಲಂ ಜಾರಿಯಲ್ಲಿ ರಾಜ್ಯ ಸರ್ಕಾರ ಇನ್ನು ವಿಳಂಬ ಮಾಡುವುದು ಸರಿಯಲ್ಲ. ಈಗಾಗಲೇ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ 371ನೇ ಕಲಂ ಜಾರಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಆದಷ್ಟು ಶೀಘ್ರ ವಿಶೇಷ ಸ್ಥಾನಮಾಕ್ಕೆ ಸಂಬಂಧಿಸಿದ ಕಾನೂನು ಜಾರಿಗೆ ತಂದು ಹೈ.ಕ.ಭಾಗದ ಜನತೆಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರಮುಖರಾದ ಆರ್. ತಿಮ್ಮಯ್ಯ, ಬಂಡೇಶ್ ವಲ್ಕಂದಿನ್ನಿ, ರಮಾನಂದ ಯಾದವ್, ನರಸಪ್ಪ ಯಕ್ಲಾಸಪುರ, ಗಿರೀಶ್ ಕನಕವೀಡು ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.