ರಾಯಚೂರು

ಕೃಷಿಗಿಂತ ಕೂದಲು ವ್ಯಾಪಾರ ಸೂಕ್ತ: ಪುಟ್ಟಣ್ಣಯ್ಯ ವ್ಯಂಗ್ಯ

Published On :

ಕನ್ನಡಪ್ರಭ ವಾರ್ತೆ  ಸಿಂಧನೂರು  ನ.12
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕೃಷಿ ನಷ್ಟ, ಹೂಡಿಕೆ ಬಗ್ಗೆ ಚಿಂತನೆಯಿಲ್ಲ. ಒಂದು ಕೆಜಿ ಕೂದಲು ಬೆಲೆ ಸುಮಾರು 5,000, ಆದರೆ ಕ್ವಿಂಟಲ್ ಬತ್ತಕ್ಕೆ 1,500 ಕೂಡ ಇಲ್ಲವಾಗಿವೆ. ಕೂದಲು ಬೆಳೆಯುವ ಗಿಡಗಳಿದ್ದರೆ ಕೊಡಿ ಸ್ವಾಮಿ, ಅವುಗಳನ್ನೇ ಬೆಳೆಯುತ್ತೇವೆ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಮುಖಂಡ, ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ವ್ಯಂಗ್ಯವಾಡಿದರು.
ನಗರದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬತ್ತ ಹಾಗೂ ಹತ್ತಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ಆಯೋಜಿಸಿದ್ದ ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ದಾವಣಗೆರೆ ರೈತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಬೆಂಬೆಲೆಯಿಲ್ಲದೆ ಸಂಕಷ್ಟ: ಬತ್ತ, ತೊಗರಿ, ಹತ್ತಿ, ಕಬ್ಬು ಇತ್ಯಾದಿ ಬೆಳೆಗಳ ಖರ್ಚು ಆಧಾರಿಸಿ ವೈಜ್ಞಾನಿಕ ಬೆಲೆ ನಿಗದಿಯಾಗಬೇಕಿದೆ. ರಾಜ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಲು 1 ಸಾವಿರ ಕೋಟಿ ಆವರ್ತ ನಿಧಿ ಮೀಸಲಿಟ್ಟಿರುವುದಾಗಿ ಹೇಳುತ್ತಿದೆ. ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೇ ರೈತ ಸಂಕುಲ ಸಂಕಷ್ಟಕ್ಕೆ ಸಿಲುಕಿದೆ. ದಾಖಲೆಯಲ್ಲಿ ಬರಗಾಲ, ಗುಳೆ ತಪ್ಪಿಸಲು ಸರ್ಕಾರ 30 ಸಾವಿರ ಕೋಟಿ ಖರ್ಚು ಮಾಡಿದೆ. ತುಂಗಭದ್ರಾ ಹಾಗೂ ಕೃಷ್ಣಾ ಕಣಿವೆಯಲ್ಲಿ ಪ್ರತಿ ವರ್ಷ 43 ಲಕ್ಷ ಟನ್ ಬತ್ತ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
ಬೆಲೆ ನಿಗದಿ ಆಯೋಗ ರಚಿಸಿ: ದೇಶ ಶೇ.70ರಷ್ಟು ಜನರಿಗೆ ಕೃಷಿ ಉದ್ಯೋಗ ನೀಡಿದೆ. ಶೇ.75ರಷ್ಟು ಕರ ನೀಡುತ್ತಿದೆ. ಕೃಷಿಯ ಮೇಲೆಯೇ ಎಲ್ಲ ಉದ್ಯಮಗಳು ನಿಂತಿವೆ. ಕೃಷಿ ಬಂಡವಾಳದ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲ. ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ರೈತರಿಗೆ ಬರೀ ಸಾಲ ನೀಡಿದ ಸುಳಿಯಲ್ಲಿ ಸಿಲುಕಿಸುತ್ತಿದೆ. ರಾಜ್ಯದಲ್ಲಿ 4500 ಟಿಎಂಸಿ ನೀರಿನ ಮೂಲಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು 1500 ಟಿಎಂಸಿ ಮಾತ್ರ. ರೈತರಿಗೆ ನೀರಿನ ಕೊರತೆ ನೀಗಿಸಲು ಸಹ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಇದ್ದಂತೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಲು ಸರ್ಕಾರ ಆಯೋಗ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿ: ಜಾತಿಯ ಜಂಜಾಟ, ಧರ್ಮದ ಮೇಲಾಟದಲ್ಲಿ ರಾಜಕೀಯ ಕಲುಷಿತಗೊಂಡಿದೆ. ಜಾತಿ ಬಗ್ಗೆ ಮಾತನಾಡುವ ರಾಜಕಾರಣಿಗಳನ್ನು ಜೈಲಿಗೆ ಕಳುಹಿಸಬೇಕು. ಅಕ್ರಮ ಆಸ್ತಿ ಮುಟ್ಟುಗೋಲು ಹಾಕಬೇಕು. ಪ್ರತಿ 20 ವರ್ಷಕ್ಕೊಮ್ಮೆ ರುಪಾಯಿ ನೋಟಿನ ಬದಲಾವಣೆ ಮಾಡಿದರೆ ಮಾತ್ರ ಅಕ್ರಮ ಸಂಪಾದನೆ ನಿಲ್ಲುತ್ತದೆ. ಅದನ್ನು ಜಾರಿಗೊಳಿಸಬೇಕಿದೆ.
ಉದ್ಯಮಗಳಿಗೆ ನೀಡುವ ರೀತಿಯಲ್ಲಿಯೇ ರೈತರಿಗೆ ಸಾಲ ಸೌಲಭ್ಯ ನೀಡಬೇಕು. ದುಡಿಯುವವನ ಬದುಕು ರಕ್ಷಣೆ ಆಗಬೇಕು. ಗುಳೆ ಹೋಗುವುದನ್ನು ತಪ್ಪಿಸಬೇಕು. ರೈತರ ಬದುಕು ಹಸನುಗೊಳಿಸವಂತಹ ಆರ್ಥಿಕ ನೀತಿ ಜಾರಿಯಾಗಬೇಕು. ರೈತರಲ್ಲಿ ಸ್ವಾಭಿಮಾನ, ಆತ್ಮಗೌರವ ಬೆಳೆಬೇಕಿದೆ. ಬತ್ತಕ್ಕೆ 2,000, ಹತ್ತಿಗೆ 6,500 ಬೆಂಬಲ ಬೆಲೆ ನಿಗದಿಗೊಳಿಸಬೇಕು. ಈ ಬಗ್ಗೆ ವಿಧಾನಸೌಧದಲ್ಲಿ ಚರ್ಚಿಸುವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.