ರಾಯಚೂರು

29ರಂದು ಆಶಾ ಕಾರ್ಯಕರ್ತೆಯರ ರ್ಯಾಲಿ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ನ.16
ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಬಹುದಿನದ ಕೆಲ ಬೇಡಿಕೆಗಳನ್ನು ಈಚೆಗೆ ಈಡೇರಿಸಿದ್ದು, ಇನ್ನುಳಿದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ಚುರುಕುಗೊಳಿಸಲು ಸಂಘಟನೆಯ ಬಲವರ್ಧನೆ ಅವಶ್ಯ. ಈ ಹಿನ್ನೆಲೆಯಲ್ಲಿ ನ.29ರಂದು ನಗರದಲ್ಲಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಸಮಾವೇಶ ಹಾಗೂ ಬೃಹತ್ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎನ್.ಎಸ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ ಆಶಾ ಕಾರ್ಯಕರ್ತೆಯರು ನಡೆಸಿದ ವಿವಿಧ ಹೋರಾಟಗಳ ಫಲವಾಗಿ ಇತ್ತೀಚೆಗೆ ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ನೀಡುವಷ್ಟೇ ಮೊತ್ತದ ಪ್ರೋತ್ಸಾಹ ಧನ ನೀಡಲು ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ಸರ್ಕಾರದಿಂದ ವಿವಿಧ ಸೌಲಭ್ಯ: ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಕಾರ್ಯಕರ್ತೆಯರಿಗೆ ನೆರವಾಗುವಂತೆ ಮೊಬೈಲ್ ಮತ್ತು ಸಿಮ್ ಕಾರ್ಡ್ ನೀಡಲು ಸರ್ಕಾರ ಒಪ್ಪಿದೆ. ಆಶಾ ಕಾರ್ಯಕರ್ತೆಯರ ಉನ್ನತ ವ್ಯಾಸಂಗಕ್ಕೂ ಆರ್ಥಿಕ ಸಹಾಯ ಮಾಡಲು ಸರ್ಕಾರ ಸಮ್ಮತಿಸಿದೆ. ಶೀಘ್ರದಲ್ಲಿಯೇ ಈ ಎಲ್ಲ ಬೇಡಿಕೆಗಳು ಜಾರಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರ ಈ ಹಿಂದೆಯೇ ಗರ್ಭಿಣಿಯರ ಹೆರಿಗೆ ಕುರಿತ ದೃಢೀಕರಣ ಪತ್ರವಿಲ್ಲದಿದ್ದರೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವಂತೆ ಸೂಚಿಸಿದೆ. ಆದರೆ ಈ ನಿಯಮ ಪಾಲಿಸಲಾಗುತ್ತಿಲ್ಲ. ಅದರಿಂದಾಗಿ ಪ್ರೋತ್ಸಾಹಧನ ವಿಳಂಬವಾಗುತ್ತಿದೆ. ಹಾಗೆಯೇ ಸರ್ಕಾರದ ವಿವಿಧ ಕಾರ್ಯಕ್ರಮಗಳಡಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಗೌರವಧನ ನೀಡಿಕೆಯಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನೂ ಕೆಲ ಬೇಡಿಕೆಗೆ ಸ್ಪಂದಿಸುತ್ತಿಲ್ಲ: ವಿವಿಧ ದಾಖಲೆಗಳನ್ನು ನಿರ್ವಹಿಸಲು ಸರ್ಕಾರ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನಿಗದಿ ಮಾಡಿದೆ. ಆದರೆ ಪಾವತಿ ಮಾತ್ರ ಆಗುತ್ತಿಲ್ಲ. ಹಾಗೆಯೇ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಕುಡಿವ ನೀರು, ಶೌಚಾಲಯ, ಮತ್ತಿತರೆ ಸೌಲತ್ತುಗಳಿರುವ ವಿಶ್ರಾಂತಿ ಕೊಠಡಿ ಒದಗಿಸಲು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸರ್ಕಾರ ಕೆಲ ಬೇಡಿಕೆಗಳನ್ನು ಮಾತ್ರ ಈಡೇರಿಸಿದ್ದು, ಇನ್ನೂ ಸಾಕಷ್ಟು ಬೇಡಿಕೆಗಳ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಆಶಾ ಕಾರ್ಯಕರ್ತೆಯರ ಸಂಘಟನೆಯ ಬಲವರ್ಧನೆಗೆ ಪೂರಕವಾಗಿ ನ. 29ರಂದು ಆಶಾ ಕಾರ್ಯಕರ್ತೆಯರ ಬೃಹತ್ ಸಮಾವೇಶ ಹಾಗೂ ರ್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತದೆ. ಜಿಲ್ಲೆಯಲ್ಲಿ 1,200 ಆಶಾ ಕಾರ್ಯಕರ್ತೆಯರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಆಲ್ ಇಂಡಿಯಾ ಯುಟಿಯುಸಿಯ ಸದಸ್ಯ ಹಾಗೂ ಎಸ್‌ಯುಸಿಐ(ಸಿ)ಜಿಲ್ಲಾ ಕಾರ್ಯದರ್ಶಿ ಡಾ. ಸುನೀತ್ ಕುಮಾರ್, ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್., ಸೇರಿ ಅನೇಕರು ಪಾಲ್ಗೊಂಡು ಮಾತನಾಡಲಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.