ಮಾ.10 ರವರೆಗೆ ಕಾಲುವೆಗೆ ನೀರು ಹರಿಸಲು ನಿರ್ಧಾರ
ಬಸವನಬಾಗೇವಾಡಿ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ ನೀರಾವರಿ ಯೋಜನೆಗಳ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಮಾರ್ಚ್ 10ರವರೆಗೆ ನೀರು ಹರಿಸಲು ತಾಲೂಕಿನ ಆಲಮಟ್ಟಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಬಳಕೆಗಾಗಿ ಒಟ್ಟಾರೆ 105 ಟಿ.ಎಂ.ಸಿ. ಅಡಿಯಷ್ಟು ನೀರು ಲಭ್ಯವಿದ್ದು, ಅದರಲ್ಲಿ ಕುಡಿಯಲು, ಆವಿಯಾಗುವುದು, ಡೆಡ್ ಸ್ಟೋರೇಜ್ ತೆಗೆದು ಒಟ್ಟಾರೆ 78 ಟಿ.ಎಂ.ಸಿ ಅಡಿ ನೀರು ನೀರಾವರಿಗೆ ಲಭ್ಯವಿದೆ. ಅಷ್ಟರಲ್ಲಿಯೇ ಮಿತವಾಗಿ ನೀರು ಬಳಸಿಕೊಂಡು ಮಾರ್ಚ್ 10ರವರೆಗೆ ಕಾಲುವೆಗೆ ನೀರು ಒದಗಿಸಲು ನಿರ್ಧರಿಸಲಾಯಿತು.
ನೀರು ನಿರ್ವಹಣೆ, ಕಾಲುವೆ ದುರಸ್ತಿ, ನೀರು ಬಳಕೆದಾರರ ಸಂಘ ಸ್ಥಾಪನೆ, ಸವುಳು ಜವುಳು, ನೀರಿನ ಕರ ಮೊದಲಾದವುಗಳ ಕುರಿತು ವಿವರವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಹೊಸದಾಗಿ 14,561 ಹೆಕ್ಟೇರ್ ಪ್ರದೇಶ ನೀರಾವರಿ ಸೇರಿ ಒಟ್ಟಾರೆ 6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತದೆ ಎಂಬ ವಿವರ ಸಭೆಯಲ್ಲಿ ವ್ಯಕ್ತವಾಯಿತು. ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಮುಖ್ಯ ಕಾಲುವೆ, ಉಪ ಕಾಲುವೆಗಳ ದುರಸ್ತಿ, ಕ್ಲೋಸರ್ ಕಾಮಗಾರಿ ಟೆಂಡರ್ ಪ್ರಕ್ರಿಯೆ ಫೆಬ್ರವರಿ ಅಂತ್ಯದೊಳಗೆ ಕರೆಯಲಾಗುವುದು ಎಂಬ ವಿವರ ಸಭೆಯಲ್ಲಿ ನೀಡಲಾಯಿತು.
ಶಾಸಕ ಮಾನಪ್ಪ ವಜ್ಜಲ ಸೇರಿದಂತೆ ಕೆಲವರು ಕಾಲುವೆ ದುರಸ್ತಿ ಬದಲಾಗಿ, ಹಳೆಯ ಕಾಲುವೆಗಳ ಆಧುನೀಕರಣ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಅದಕ್ಕಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹಳೆಯ ಮುಖ್ಯ ಕಾಲುವೆಗಳು ಹಾಗೂ ಶೇ.25 ಉಪಕಾಲುವೆಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಕಟ್ಟುನಿಟ್ಟಾಗಿ ವಾರಾಬಂಧಿ ಪದ್ದತಿ ಜಾರಿಗೆ ತರಲಾಗುವುದು. ವಾರಾಬಂಧಿ ಜಾರಿಗೆ ತರಲು ಕೆಲವು ರೈತರು ವಿನಾಕಾರಣ ತಂಟೆ ತಕರಾರು ತೆಗೆಯುತ್ತಿದ್ದು, ಪ್ರತ್ಯೇಕ ಪೊಲೀಸ್ ಬಂದೋಬಸ್ತ್ ಪಡೆದು ಕಟ್ಟುನಿಟ್ಟಾಗಿ ಕಾಲುವೆಗುಂಟ ವಾರಾಬಂಧಿ ಜಾರಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಗೃಹ ಮಂತ್ರಿಯೊಂದಿಗೆ ಚರ್ಚಿಸುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಎಸ್.ಆರ್. ಪಾಟೀಲ್ ಹೇಳಿದರು.
ನೀರು ಅನುಮತಿ ಪ್ರಕ್ರಿಯೆ ಸರಳೀಕರಣ: ರೈತರು ನೀರು ಬಳಸಲು ಅನುಮತಿ ನೀಡುವ ಪ್ರಕ್ರಿಯೆ ಅತ್ಯಂತ ಕಠಿಣವಾಗಿದ್ದು, ಈ ಕುರಿತು ಸಭೆಯಲ್ಲಿ ಶಾಸಕ ಜಿ.ಟಿ. ಪಾಟೀಲ್ ಹಾಗೂ ಎಚ್.ವೈ. ಮೇಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುವುದು. ಅರ್ಜಿ ನೀಡಿದ ನಿಗದಿತ ದಿನಗಳಲ್ಲಿಯೇ ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು.
ಶಾಸಕರಾದ ಶಿವಾನಂದ ಪಾಟೀಲ್, ಜಿ.ಟಿ. ಪಾಟೀಲ್, ಎಚ್.ವೈ. ಮೇಟಿ, ಅಲ್ಲಮಪ್ರಭು ಪಾಟೀಲ್, ರಮೇಶ ಭೂಸನೂರ, ಮುಖ್ಯ ಎಂಜಿನಿಯರ್ ಅನಂತರಾಮು, ಬಿ.ವೈ. ಜುಮನಾಳ ಸೇರಿದಂತೆ ಕೆಬಿಜೆಎನ್ಎಲ್, ಕೃಷಿ ಅಧಿಕಾರಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

