ಪ್ರಸವಪೂರ್ವ ಲಿಂಗಪತ್ತೆ ಸಮಾಜ ವಿರೋಧಿ ಕೃತ್ಯ
ರಾಯಚೂರು: ಸಮಾಜದ ಆರೋಗ್ಯ ಕಾಪಾಡಬೇಕಾದ ಕೆಲ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿರುವವರು ಹಣದಾಸೆಗೆ ಪ್ರಸವಪೂರ್ವ ಲಿಂಗಪತ್ತೆಯಂಥ ಕೃತ್ಯ ನಡೆಸುವುದು ಸಮಾಜ ವಿರೋಧಿ ಕಾರ್ಯ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಸವಪೂರ್ವ ಲಿಂಗಪತ್ತೆ ನಿಷೇಧ (ಪಿಸಿ ಮತ್ತು ಪಿಎನ್ಡಿಟಿ)ಕಾಯಿದೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜ ದ್ರೋಹಿ ಕೆಲಸ: ಸಮಾಜದಲ್ಲಿ ವೈದ್ಯರಿಗೆ ಉನ್ನತ ಸ್ಥಾನ ನೀಡಲಾಗಿದೆ. ಉನ್ನತ ಶಿಕ್ಷಣ ಪಡೆದಂಥ ಅತೀ ಸುಶಿಕ್ಷಿತರೆಂಬ ಹೆಸರು ಗಳಿಸಿದವರು ಪುಡಿಗಾಸಿನ ಆಸೆಗೆ ಲಿಂಗಪತ್ತೆಯಂಥ ಕಾರ್ಯಕ್ಕೆ ಮುಂದಾಗುವುದು ಸರಿಯಲ್ಲ. ಇದೊಂದು ಸಮಾಜ ದ್ರೋಹಿ ಕೆಲಸವಾಗುತ್ತದೆ ಎಂದು ಎಚ್ಚರಿಸಿದರು.
ವೈದ್ಯರು ಲಿಂಗ ಪತ್ತೆ ವಿವರ ಮತ್ತು ಹೆಣ್ಣು ಭ್ರೂಣ ಹತ್ಯೆಗೈಯುವ ಕಾರ್ಯಕ್ಕೆ ತೊಡಗಿದಾಗ ವೈದ್ಯರಿಗೆ ಕನಿಷ್ಟ ತಾವು ಮಾಡುತ್ತಿರುವ ಕೆಲಸ ಪಾಪದ್ದು ಎಂಬ ಅರಿವಾಗಬೇಕು. ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಪುರುಷ ಮತ್ತು ಮಹಿಳೆಯರ ಸಂಖ್ಯೆಯ ಅನುಪಾತದಲ್ಲಿ ಏರುಪೇರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಕೈ ಜೋಡಿಸುವಂತೆ ಮನವಿ: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಸಿ.ಎನ್. ಕುಲಕರ್ಣಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸೂಕ್ತ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದಲೇ ಲಿಂಗಪತ್ತೆ ನಿಷೇಧ ಕಾಯಿದೆ ರೂಪಿಸಲಾಗಿದೆ. ಅದರ ಪರಿಣಾಮಕಾರಿ ಜಾರಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಜಿಪಂ ಯೋಜನಾಧಿಕಾರಿ ಡಾ. ಟಿ. ರೋಣಿ, ಕಾರ್ಯಕ್ರಮದ ರಾಜ್ಯ ಅನುಷ್ಠಾನಾಧಿಕಾರಿ ಬೆಂಗಳೂರಿನ ಡಾ. ವಿಜಯಾ, ಹಿರಿಯ ನ್ಯಾಯವಾದಿ ವಿ.ಸತೀಶ್, ಮಕ್ಕಳ ತಜ್ಞ ಡಾ.ಶಿವಪ್ಪ ಮಾಲಿಪಾಟೀಲ್, ಸೈಯದಾ ಸಫಿಯಾ, ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅಲಿಯಾ ಖಾನಂ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣಪ್ಪ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ಸುರೇಂದ್ರಬಾಬು, ಡಾ. ಪವಾಡೆಪ್ಪ ಸೇರಿ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

