ರಾಯಚೂರು

ಉದ್ಧಟತನ: ಎಂಇಎಸ್ ಶಾಸಕರ ಪ್ರತಿಕೃತಿ ದಹನ

Published On :

ಆಡಳಿತದಲ್ಲಿ ಮರಾಠಿ ಬಳಸಬೇಕೆಂಬ ಹೇಳಿಕೆಗೆ ಆಕ್ರೋಶ ಟಿ ಕನ್ನಡಪರ ಸಂಘಟನೆಗಳಿಂದ ಆಕ್ರೋಶ
ಲಿಂಗಸ್ಗೂರು: ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಎಂಇಎಸ್ ಶಾಸಕ ಸಂಬಾಜಿರಾವ್ ಪಾಟೀಲ್ ವರ್ತನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಪಾಟೀಲರ ಪ್ರತಿಕೃತಿ ದಹನ ಮಾಡಿದರು.
ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ಬೆಳಗಾವಿ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಹಮ್ಮಿಕೊಂಡಿದ್ದ ಮಹಾಮೇಳದಲ್ಲಿ ಪಾಲ್ಗೊಂಡು ಶಾಸಕ ಸಂಬಾಜಿರಾವ್ ಪಾಟೀಲ್ ಕನ್ನಡಿಗರ ಸ್ವಾಭಿಮಾನ ಕೆರಳಿಸುವಂತೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರದ ಶವ ಹೊರುತ್ತೇವೆಂಬ ಅತಿರೇಕದ ಮಾತುಗಳನ್ನಾಡಿರುವುದು ಅಸಹನೀಯ ಎಂದರು.
ಕನ್ನಡ ನೆಲದ ಅನ್ನ ಉಂಡು, ಕನ್ನಡ ನೆಲದಲ್ಲಿ ವಾಸಿಸುವ ಎಂಇಎಸ್ ಶಾಸಕ ಸಾಂಬಾಜಿರಾವ್ ಪಾಟೀಲ್‌ರ ಕನ್ನಡ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಚ್ಚಿನ ಅರಿವಿಲ್ಲವೇ?: ಮರಾಠಿ ಭಾಷೆಯಲ್ಲಿ ಪಹಣಿ ಪತ್ರಿಕೆ ವಿತರಿಸಬೇಕು. ಮರಾಠಿ ಭಾಷೆಯಲ್ಲಿ ಸರ್ಕಾರಿ ಸುತ್ತೋಲೆ ಹೊರಡಿಸಬೇಕೆಂದು ಸಭಾತ್ಯಾಗ ಮಾಡಿದ ಕ್ರಮ ಕನ್ನಡಿಗರನ್ನು ಕೆರಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ಎಂಇಎಸ್ ಶಾಸಕರನ್ನು ಮುಟ್ಟಲು ಪ್ರಯತ್ನಿಸಿದರೆ ಕೈ ಕತ್ತರಿಸುತ್ತೇವೆಂದು ಹಾಗೂ ಕನ್ನಡ ಸಂಘಟನೆಗಳಲ್ಲಿ ಶಕ್ತಿ ಇದ್ದರೆ ನಾನು ಬೆಂಗಳೂರಿಗೆ ಬಂದಾಗ ನನ್ನನ್ನು ತಡೆಯಿರಿ ಎಂದೂ ಸೆಡ್ಡು ಹೊಡೆದ ಜೋಕುಮಾರ ಸಂಬಾಜಿರಾವ್‌ಗೆ ಕನ್ನಡಿಗರ ಸ್ವಾಭಿಮಾನ, ಕೆಚ್ಚೆದೆಯ ಅರಿವಿಲ್ಲವಾಗಿದೆ. ಕೂಡಲೇ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂಇಎಸ್ ಶಾಸಕರು ಪ್ರಚೋದನಕಾರಿ ಹೇಳಿಕೆ ನೀಡಿದ್ದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಬಹಿರಂಗ ಸವಾಲೆಸೆದ ಶಾಸಕ ಸಂಬಾಜಿರಾವ್ ವಿರುದ್ಧ ಸಂಘಟನೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲು ಹಿಂಜರಿಯುವುದಿಲ್ಲವೆಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕರವೇ ತಾಲೂಕು ಅಧ್ಯಕ್ಷ ಜಿಲಾನಿ ಪಾಶಾ, ಮುಖಂಡರಾದ ಶಿವರಾಜ ನಾಯಕ, ಅಜೀಜ್ ಪಾಶಾ, ಆಂಜನೇಯ ಭಂಡಾರಿ, ರಾಘವೇಂದ್ರ ಭಜಂತ್ರಿ, ಅಮರೇಶ ನಾಯಕ, ರಾಮಣ್ಣ, ನಿತ್ಯಾನಂದ, ರವಿ ಬರಗುಡಿ, ಯಲ್ಲಪ್ಪ ಬಂಡಿ, ರಮೇಶ ತವಗ, ಶ್ರೀನಿವಾಸ, ಭಗೀರಥ ಸರ್ಜಾಪೂರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.