ಜೆಡಿಎಸ್ ತೆಕ್ಕೆಗೆ ಲಿಂಗಸ್ಗೂರು ತಾಪಂ
ತೆನೆ ಹಿಡಿದ 'ಕೈ' ಸದಸ್ಯರು 14 ಸದಸ್ಯರ ಬೆಂಬಲದಿಂದ ಅಧ್ಯಕ್ಷರಾಗಿ ಬಸಮ್ಮ
ಕ.ಪ್ರ.ವಾರ್ತೆ ಟಿ ಲಿಂಗಸ್ಗೂರು ಟಿ ನ.28
ಕಾಂಗ್ರೆಸ್ ನಾಯಕರ ಒಣ ಪ್ರತಿಷ್ಠೆ, ಬಣ ರಾಜಕೀಯ ಹಾಗೂ ಕೆಲ ಸದಸ್ಯರ ಅಸಮಾಧಾನದಿಂದ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದು, ಜೆಡಿಎಸ್ ಪಕ್ಷ ತನ್ನದಾಗಿಸಿಕೊಂಡಿದೆ.
ಸ್ಥಳೀಯ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ 8 ಸದಸ್ಯರು ಹಟ್ಟಿ ಕ್ಷೇತ್ರದ ಜೆಡಿಎಸ್ನ ಬಸಮ್ಮ ಪರಮೇಶ ಯಾದವ್ ಅವರನ್ನು ಬೆಂಬಲಿಸುವ ಮೂಲಕ ನೂತನ ಅಧ್ಯಕ್ಷರಾಗಿ ಹಟ್ಟಿ ಕ್ಷೇತ್ರದ ಜೆಡಿಎಸ್ ಪಕ್ಷದ ಬಸಮ್ಮ ಪರಮೇಶ ಯಾದವ್ ಆಯ್ಕೆಯಾಗಿದ್ದಾರೆ.
ಲಲಿತಮ್ಮ ವಿರುದ್ಧ ಅವಿಶ್ವಾಸ ಅಂಗೀಕರಿಸಿದ್ದರು: ತಾಲೂಕು ಪಂಚಾಯಿತಿಗೆ ಕಾಂಗ್ರೆಸ್ನ 13 ಸದಸ್ಯರು, ಜೆಡಿಎಸ್ 6, ಬಿಜೆಪಿಯ 6 ಹಾಗೂ ಪಕ್ಷೇತರ ಒಬ್ಬ ಸದಸ್ಯ ಸೇರಿ ಒಟ್ಟು 26 ಸದಸ್ಯರು ಆಯ್ಕೆಗೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ 2 ಬಣಗಳು ಹುಟ್ಟಿಕೊಂಡು 8 ಸದಸ್ಯರು ತಾಪಂ ಅಧ್ಯಕ್ಷೆಯಾಗಿದ್ದ ಲಲಿತಮ್ಮ ಶಿವನಗೌಡ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಅಂಗೀಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ 26 ನ ಸದಸ್ಯರು ಪಾಲ್ಗೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಅಯ್ಯಪ್ಪ ಸರ್ಜಾಪೂರ ಹಾಗೂ ಬಸ್ಸಮ್ಮ ಪರಮೇಶ ಯಾದವ್ ಹಟ್ಟಿ ಇವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಬಸಮ್ಮಗೆ 14 ಸದಸ್ಯರ ಬೆಂಬಲ: ನಂತರ ನಡೆದ ಚುನಾವಣೆಯಲ್ಲಿ ತಾಪಂ ಉಪಾಧ್ಯಕ್ಷ ಮಾನಪ್ಪ ಕೀರಪ್ಪ ಈಚನಾಳ, ತಮ್ಮಣ್ಣ ಬಾಲಪ್ಪ ಹಡಗಲಿ, ಸಂಗಮ್ಮ ಸಿದ್ಧನಗೌಡ ರೋಡಲಬಂಡಾ(ಯುಕೆಪಿ), ಬಸವರಾಜ ಲಕ್ಷ್ಮಪ್ಪ ನಾಗಲಾಪೂರ, ಯಮನವ್ವ ಹನುಮಂತ ಗೌಡೂರು, ಗುರುಬಾಯಿ ವಿರುಪಾಕ್ಷಪ್ಪ ಆಮದಿಹಾಳ, ಬಸವರಾಜ ನಾಯಕ ಗುರುಗುಂಟಾ, ಗುಂಡಮ್ಮ ದುರುಗಪ್ಪ ದೇವರಭೂಪೂರ, ಮಲ್ಲಪ್ಪ ಮಲ್ಲಪ್ಪ ಖೈರವಾಡಗಿ, ಬಸಯ್ಯ ಸೋಮಲಿಂಗಯ್ಯ ಪೈದೊಡ್ಡಿ, ಬಾಲಪ್ಪ ತಿಮ್ಮಣ್ಣ ಮೆದಿಕಿನಾಳ, ಲಕ್ಷ್ಮೀ ಆದಪ್ಪ ಅನ್ವರಿ, ರುದ್ರಗೌಡ ನಾಗನಗೌಡ ಬನ್ನಿಗೋಳ ಸೇರಿದಂತೆ ಒಟ್ಟು 14 ಸದಸ್ಯರು ಬಸಮ್ಮ ಪರಮೇಶ ಯಾದವ್ರನ್ನು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಲಲಿತಾ ಪರಾಭವ: ಪ್ರತಿಸ್ಪರ್ಧಿ ಲಲಿತಾ ಅಯ್ಯಪ್ಪ ಸರ್ಜಾಪೂರ 12 ಸ್ಥಾನ ಪಡೆದು ಪರಾಭವಗೊಂಡಿದ್ದಾರೆಂದು ಚುನಾವಣಾಧಿಕಾರಿ ಟಿ.ಯೋಗೇಶ್ ಘೋಷಣೆ ಮಾಡಿದರು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಬಿ. ಕುಲ್ಕರ್ಣಿ ಉಪಸ್ಥಿತರಿದ್ದರು.
ತಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಡಿವೈಎಸ್ಪಿ ಅನಿತಾ ಹದ್ದಣ್ಣವರ್, ಸಿಪಿಐ ವರದರಾಜ, ಪಿಎಸ್ಐ ಖಾಜಾ ಹುಸೇನ್ ಸೂಕ್ತ ಪೊಲೀಸ್ ಭದ್ರತೆ ಒದಗಿಸಿದ್ದರು.
ಅಧ್ಯಕ್ಷರ ಬದಲಾವಣೆಗೆ ಅಸಹಕಾರ ಕಾರಣ: ರುದ್ರಗೌಡ
ಲಿಂಗಸ್ಗೂರು: ಬ್ಲಾಕ್ ಕಾಂಗ್ರೆಸ್ನ ನಾಯಕರ ಹಾಗೂ ಕೆಲ ಸದಸ್ಯರ ಅಸಹಕಾರ ಮತ್ತು ನಿರ್ಲಕ್ಷ್ಯ ಧೋರಣೆಯೇ ತಾಪಂ ಅಧ್ಯಕ್ಷರ ಬದಲಾವಣೆಗೆ ಪ್ರಮುಖ ಕಾರಣ. ಕಾಂಗ್ರೆಸ್ನಲ್ಲಿನ ಭಿನ್ನಮತ ಹೋಗಲಾಡಿಸಲು ಜಿಲ್ಲಾ ಮತ್ತು ರಾಜ್ಯ ನಾಯಕರು ಮಧ್ಯಸ್ಥಿಕೆ ವಹಿಸುವುದು ಅಗತ್ಯ ಎಂದು ತಾಪಂ ಸದಸ್ಯ ರುದ್ರಗೌಡ ಬನ್ನಿಗೋಳ ಸ್ಪಷ್ಟಪಡಿಸಿದರು.
ತಾಪಂ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಪಂ.ನ ಒಟ್ಟು 26 ಸದಸ್ಯರಲ್ಲಿ 13 ಸದಸ್ಯರು ಕಾಂಗ್ರೆಸ್ನಿಂದ ಆಯ್ಕೆಗೊಂಡಿದ್ದರು. ಬಹುಮತವಿಲ್ಲದ ಕಾರಣ ಬೇರೆ ಪಕ್ಷದ ಸದಸ್ಯರ ಬೆಂಬಲ ಪಡೆದು ಪ್ರಥಮ ಬಾರಿಗೆ ಬಸವರಾಜ ಮಾಕಾಪೂರ ಅವರನ್ನು ಆಯ್ಕೆ ಮಾಡಲಾಯಿತು.
ನಿರ್ಲಕ್ಷ್ಯ: ನಂತರ ಅವರ ರಾಜಿನಾಮೆ ಬಸವರಾಜ ದೊಡ್ಡಹೊಲ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಪಕ್ಷದ ಮುಖಂಡರು ಜವಾಬ್ದಾರಿ ನಿರ್ವಹಿಸದ ಪರಿಣಾಮ ಪಕ್ಷದ ಒಬ್ಬ ಸದಸ್ಯ ವಿರೋಧ ಪಕ್ಷಕ್ಕೆ ಬೆಂಬಲ ನೀಡಿ ಅಂದು ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದರು.
ನಂತರ 2ನೇ ಅವಧಿಗೆ ಪಕ್ಷದ ಲಲಿತಮ್ಮ ಶಿವನಗೌಡ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಇವರ ಅವಧಿಯಲ್ಲಿ ನಿಷ್ಕ್ರೀಯ ಧೋರಣೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಅಲ್ಲದೆ ಪಕ್ಷದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬೇಜವಬ್ದಾರಿತನ ತೋರಿದರು. ಅಲ್ಲದೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕೆಲ ನಾಯಕರು ಸದಸ್ಯರ ಕಡೆಗಣನೆಯಿಂದ ಗೊಂದಲದ ಗೂಡಾಯಿತು. ಇದರಿಂದ ಬೇಸತ್ತ ಕೆಲ ಸದಸ್ಯರು ಅವರ ವಿರುದ್ಧ ಅವಿಶ್ವಾಸ ನಿರ್ಣಯಿಸಿ ಬೇರೆ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ಅನಿವಾರ್ಯತೆ ಎದುರಾಗಿದೆ.
ಸಂಘಟನೆಗೆ ಆದ್ಯತೆ ನೀಡಲಿ: ಕಾಂಗ್ರೆಸ್ ನಾಯಕರ ಭಿನ್ನಮತದಿಂದ ಪಕ್ಷಕ್ಕೆ ಅಗತ್ಯ ಬಹುಮತವಿದ್ದರೂ ಅಧಿಕಾರ ಪಡೆಯುವಲ್ಲಿ ವಂಚಿಗೊಂಡಿದ್ದು, ಜಿಲ್ಲೆ ಮತ್ತು ರಾಜ್ಯ ನಾಯಕರು ಮಧ್ಯ ಪ್ರವೇಶಿಸಿ ಬ್ಲಾಕ್ ಮಟ್ಟದಲ್ಲಿ ಉದ್ಭವಿಸಿದ ಅಸಮಾಧಾನ, ಗೊಂದಲ, ವೈಮನಸ್ಸುಗಳನ್ನು ದೂರ ಮಾಡಿ ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡುವ ಮೂಲಕ ಸರ್ವ ಸದಸ್ಯರನ್ನು ಸಹಮತದಿಂದ ಮುನ್ನಡೆಸಲು ಮುಂದಾಗಬೇಕಿದೆ ಎಂದು ತಿಳಿಸಿದರು.
ತಾಪಂ ನೂತನ ಅಧ್ಯಕ್ಷೆ ಬಸಮ್ಮ ಪರಮೇಶ, ಉಪಾಧ್ಯಕ್ಷ ಮಾನಪ್ಪ ಚೌಹಾಣ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

