ಮುದಗಲ್: ಹೆಚ್ಚಿದ ಕಳ್ಳಭಟ್ಟಿ ಸಾರಾಯಿ ಹಾವಳಿ
-ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಟಿ ಮುದಗಲ್ ಟಿ ಅ.28
ಪಟ್ಟಣದ ಸುತ್ತಮುತ್ತಲಿನ ತಾಂಡಾ ಮತ್ತು ಹಳ್ಳಿಗಳಲ್ಲಿ ಕಳ್ಳಭಟ್ಟಿ ಸಾರಾಯಿ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಸದ್ದಿಲ್ಲದೆ ಸಾವು- ನೋವುಗಳೂ ಸಂಭವಿಸುತ್ತಿವೆ. ಆದರೆ ಅಬಕಾರಿ ಅಧಿಕಾರಿಗಳು ಮಾತ್ರ ಇದನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.
ಸರ್ಕಾರ ಕಳ್ಳಭಟ್ಟಿ ಸಾರಾಯಿ ನಿಯಂತ್ರಿಸಲು ಅಬಕಾರಿ ಇಲಾಖೆ ಅಧಿಕಾರಿಗಳು ಬಗಡಿತಾಂಡಾ, ಜಕ್ಕೇರಮಡು ತಾಂಡಾ, ಮಾರಲದಿನ್ನಿ ತಾಂಡಾ, ಖೈರವಾಡಗಿ ತಾಂಡಾ ಸೇರಿದಂತೆ ತಾಲೂಕಿನ 16ಕ್ಕೂ ಹೆಚ್ಚು ತಾಂಡಾಗಳನ್ನು ಸಾರಾಯಿಮುಕ್ತ ಎಂದು ಘೋಷಣೆ ಮಾಡಿದ್ದರೂ ಯಾವ ತಾಂಡಾಗಳಲ್ಲೂ ಕಳ್ಳಭಟ್ಟಿ ಸಾರಾಯಿ ತಯಾರಿ ನಿಂತಿಲ್ಲ.
ಸದ್ದಿಲ್ಲದೆ ಸಾವು: ಕಳ್ಳಭಟ್ಟಿ ಸಾರಾಯಿ ಸೇವಿಸಿ ಸಾಕಷ್ಟು ಜನ ಸದ್ದಿಲ್ಲದ ಸಾವನ್ನಪ್ಪಿದ್ದಾರೆ. ಪ್ರತಿನಿತ್ಯ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿದ್ದಾರೆ. ಜಮೀನುಗಳಲ್ಲಿ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಅನೇಕರು ಹೆಗ್ಗಿಲ್ಲದೆ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಹಳ್ಳಿಗಳಿಗೆ ತಂದು ಮಾರಾಟ ಮಾಡುತ್ತಾರೆ. ಇದನ್ನು ಸೇವಿಸಿ ಬರುವ ಮದ್ಯವ್ಯಸನಿಗಳು ಮಹಿಳೆಯರಿಗೆ ತೀವ್ರ ತೊಂದರೆ ಕೊಡುತ್ತಾರೆ ಎಂದು ಗ್ರಾಮದ ಮಹಿಳೆಯರು 'ಕನ್ನಡಪ್ರಭ'ಕ್ಕೆ ತಮ್ಮ ಗೋಳು ತೋಡಿಕೊಂಡರು.
ಸರ್ಕಾರ ಸಾರಾಯಿ ಬಂದ್ ಮಾಡಿದಾಗಿನಿಂದ ತಾಂಡಾ ಮತ್ತು ಹಳ್ಳಿಗಳಲ್ಲಿ ಕಳ್ಳಭಟ್ಟಿ ಸಾರಾಯಿ ಹಾವಳಿ ಹೆಚ್ಚಿದ್ದು ಗ್ರಾಮೀಣ ಜನರಲ್ಲಿ ನೆಮ್ಮದಿ ಹಾಳು ಮಾಡಿದೆ. ಅಬಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಎನ್ನುವಂತೆ ತಾಂಡಾಗಳ ಮೇಲೆ ದಾಳಿ ಮಾಡುತ್ತಾರೆ. ಅಲ್ಪಸ್ವಲ್ಪ ಕಳ್ಳಭಟ್ಟಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದು ಬಿಟ್ಟರೆ ಯಾರ ಮೇಲೂ ಕಠಿಣ ಕ್ರಮ ಜರುಗಿಸಿಲ್ಲ. ಸಾಲದ್ದಕ್ಕೆ ಎಲ್ಲ ಗ್ರಾಮಗಳಲ್ಲಿ ಸರ್ಕಾರಿ ಮದ್ಯದ ಬಾಟಲಿಗಳು ಮಾರಾಟವಾಗುತ್ತಿವೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ದರಕ್ಕೆ ಮಾರಾಟ: ಮುದಗಲ್ ಪಟ್ಟಣದಿಂದ ಹಿಡಿದು ಸುತ್ತಮುತ್ತಲಿನ ಎಲ್ಲ ಹಳ್ಳಿಗಳಲ್ಲಿ ಸರ್ಕಾರದ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಮುದಗಲ್, ಮಸ್ಕಿ, ಲಿಂಗಸ್ಗೂರು ಬಾರ್ಗಳ ಮಾಲೀಕರು ಗ್ರಾಮೀಣ ಪ್ರದೇಶಗಳಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರೂ ಪೊಲೀಸ್ ಇಲಾಖೆಯಾಗಲಿ, ಅಬಕಾರಿ ಇಲಾಖೆಯಾಗಲಿ ಯಾವುದೇ ಕ್ರಮ ಜರುಗಿಸುತ್ತಿಲ್ಲ.
ಸರ್ಕಾರ ಬಾರ್ ಮತ್ತು ಮದ್ಯದ ಅಂಗಡಿಗಳಿಗೆ ಎಂಆರ್ಪಿ ದರ ನಿಗದಿಪಡಿಸಿ ಪ್ರತಿ ಬಾಟಲ್ಗೆ ಕಮೀಷನ್ ನೀಡುತ್ತಿದ್ದರೂ ಬಾರ್ ಮಾಲೀಕರು ಪ್ರತಿ ಕ್ವಾಟರ್ ಬಾಟಲ್ಗೆ 25- 30 ಹೆಚ್ಚುವರಿಯಾಗಿ ಪಡೆದು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನೆಯಾಗಿಲ್ಲ ಎಂದು ಮದ್ಯವ್ಯಸನಿಗಳು ಹೇಳುತ್ತಿದ್ದಾರೆ.
ತಾಲೂಕಿನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರಿಂದ ಮಧ್ಯಮ ವರ್ಗದವರು, ಬಡವರು ಕಳ್ಳಭಟ್ಟಿ ಸಾರಾಯಿಗೆ ಮೊರೆ ಹೋಗುತ್ತಿದ್ದಾರೆ. ಆದ್ದಿರಂದ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುವ ಮದ್ಯದ ಅಂಗಡಿಗಳ ಲೈಸನ್ಸ್ ರದ್ದುಪಡಿಸಬೇಕು. ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಿ ಸಂಭವಿಸುತ್ತಿರುವ ಸಾವುಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

