ಬಂಡವಾಳ ಹೂಡಿಕೆ ಹಿನ್ನಡೆಗೆ ಮೂಲ ಸೌಕರ್ಯ ಕೊರತೆ ಕಾರಣ
ಕ.ಪ್ರ.ವಾರ್ತೆ, ರಾಯಚೂರು, ಅ.31
ರಾಜ್ಯದಲ್ಲಿ ಕಳೆದ ಅವಧಿಯಲ್ಲಿ ಸರ್ಕಾರ ಮೂಲ ಸೌಕರ್ಯಾಭಿವೃದ್ಧಿಗೆ ಕ್ರಮ ಕೈಗೊಳ್ಳದೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದರಿಂದ ಈಗಲೂ ಅನೇಕ ಉದ್ಯಮಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಶಿವಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ಸರ್ಕಾರಗಳು ಮೂಲ ಸೌಕರ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು. ಆನಂತರದಲ್ಲಿ ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಮುಂದಾಗಬೇಕು. ಪೂರ್ವ ತಯಾರಿ ಕೊರತೆಯಿಂದಲೇ ಕಳೆದ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹಿನ್ನಡೆಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಲೂ ಮೂಲ ಸೌಕರ್ಯಗಳ ಕೊರತೆಯಿದೆ. ಅಸಮರ್ಪಕ ರಸ್ತೆ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕೊರತೆಯಂಥ ಅಡಚಣೆಗಳಿಂದಾಗಿ ಉದ್ಯಮಗಳ ಸ್ಥಾಪನೆಗೆ ಹಿನ್ನೆಡೆಯಾಗುತ್ತಿದೆ. ಅದರಿಂದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರೆಯುತ್ತಿಲ್ಲ ಎಂದು ಹೇಳಿದರು.
ರಾಯಚೂರು ಜಿಲ್ಲೆಯಲ್ಲಿ ಎಫ್‌ಕೆಸಿಸಿಐನಿಂದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಆರಂಭಿಸಲು ಉದ್ದೇಶಿಸಿದ್ದು ಅದಕ್ಕಾಗಿ ನಿವೇಶನ ನಿಗದಿ ಪ್ರಕ್ರಿಯೆ ಜಾರಿಯಲ್ಲಿದೆ. ಕೌಶಲ್ಯಾಭಿವೃದ್ಧಿ ನಂತರ ಉದ್ಯೋಗವಕಾಶ ಸರಾಗವಾಗಿ ಲಭ್ಯವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಅಕ್ಕಿ ಲೆವಿ ಹೇರಿಕೆ ಪ್ರಮಾಣ ದುಪ್ಪಟ್ಟುಗೊಳಿಸಿದ್ದಕ್ಕೆ ವಿರೋಧವಿದೆ. ಸರ್ಕಾರ 'ಅನ್ನಭಾಗ್ಯ' ಯೋಜನೆಯ ಅವಶ್ಯಕತೆ ಪೂರೈಸಿಕೊಳ್ಳಲು ಅಕ್ಕಿ ಗಿರಣಿಗಳ ಮೇಲೆ ಒತ್ತಡ ಹೇರಲು ಮುಂದಾಗಿ ರುವುದು ಸಮಂಜಸವಲ್ಲ ಎಂದರು.
ಸರ್ಕಾರ ಕೂಡಲೇ ಅಕ್ಕಿ ಲೆವಿ ಸಂಗ್ರಹದ ಆದೇಶ ಮರುಪರಿಶೀಲಿಸಬೇಕು. ಇಲ್ಲವೇ ಸಂಪೂರ್ಣ ರದ್ದುಗೊಳಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಅಕ್ಕಿ ಗಿರಣಿಗಳ ಮಾಲಿಕರ ನೆರವಿಗೆ ಧಾವಿಸಬೇಕು. ಅಕ್ಕಿ ಲೆವಿ ಸಂಗ್ರಹದಂಥ ಕ್ರಮದಿಂದ ಬತ್ತ ಬೆಳೆಗಾರರು ಹಾಗೂ ಅಕ್ಕಿ ಗಿರಣಿಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಗಿರಣಿಗಳ ಮಾಲಿಕರು ಮತ್ತಷ್ಟು ಸಾಲದ ಹೊರೆ ಅನುಭವಿಸಬೇಕಾದೀತು ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜಾರಿಯಲ್ಲಿರುವ ಲೆವಿ ಅಕ್ಕಿ ಸಂಗ್ರಹ ಪದ್ಧತಿಯನ್ನು ಸಂಪೂರ್ಣ ಕೈಬಿಡಬೇಕು. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಸರ್ಕಾರದ ಯೋಜನೆಯಡಿ ಬಡವರಿಗೆ ವಿತರಿಸಬೇಕು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಶೀಘ್ರ ಭೇಟಿ ಮಾಡಿ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳು ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಹೊಂದಬೇಕೆಂಬುದು ಎಫ್‌ಕೆಸಿಸಿಐ ಗುರಿಯಾಗಿದೆ. ಇದಕ್ಕೆ ಪೂರಕವಾಗಿ ಎಲ್ಲೆಡೆ ಮೂಲ ಸೌಕರ್ಯಾಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜನರ ಜೀವನಮಟ್ಟದ ಸುಧಾರಣೆಯ ಜತೆಜತೆಗೆ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಆಗ ಮಾತ್ರ ಉದ್ಯೋಗವಕಾಶಗಳು ಹೆಚ್ಚಾಗಿ ಆರ್ಥಿಕ ಪ್ರಗತಿ ಕಾಣಲು ಸಾಧ್ಯ ಎಂದರು. ಈ ಸಂದರ್ಭ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ಪ್ರಮುಖರಾದ ಜಗದೀಶ್ ಗುಪ್ತಾ, ಕಮಲ್ ಕುಮಾರ್ ಜೈನ್, ಮೈಲಾಪುರ ಎನ್. ಮೂರ್ತಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

