ರಾಯಚೂರು

ಯುಪಿಎ ಸರ್ಕಾರದಿಂದ ಭ್ರಷ್ಟಾಚಾರ

Published On :

ಕನ್ನಡಪ್ರಭ ವಾರ್ತೆ  ಮಸ್ಕಿ  ಸೆ.1
ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭಾರೀ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೇಂದ್ರದ ಆರ್ಥಿಕ ನೀತಿಯ ದೋಷದಿಂದಾಗಿ ರುಪಾಯಿ ಮೌಲ್ಯ ಕುಸಿತ ಕಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಹೇಳಿದರು.
  ಪಟ್ಟಣದಲ್ಲಿ ಭಾನುವಾರ ಭ್ರಮರಾಂಬಾ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಸ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಅರ್ಥವ್ಯವಸ್ಥೆ ಕುಸಿತ ಕಾಣಲು ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಟೀಕಿಸಿದರು.
ರಸಗೊಬ್ಬರ ಬೆಲೆ ಗಗನಕ್ಕೆ: ದೇಶದಲ್ಲಿ ರಸಗೊಬ್ಬರದ ಬೆಲೆಗಳು ಗಗನಕ್ಕೇರಿವೆ. ರೈತರಿಗೆ ಸಮರ್ಪಕ ಬೆಲೆ ದೊರೆಯದೇ ಪರದಾಡುತ್ತಿದ್ದಾರೆ. ರೈತರ ಬದುಕಿಗೆ ಭದ್ರತೆ ಒದಗಿಸದೇ ಆಹಾರ ಉತ್ಪಾದನೆ ಹೆಚ್ಚಳ ಅಸಾಧ್ಯ ಎಂದರು.
  ಕಳೆದ ಅನೇಕ ದಿನಗಳಿಂದ ಡಾಲರ್ ಎದುರು ದೇಶದ ರುಪಾಯಿ ಬೆಲೆ ಕುಸಿತ ಕಾಣುತ್ತಿದೆ. ಆರ್ಥಿಕ ಸ್ಥಿತಿ ತಳಕಚ್ಚಿದೆ. ಬೆಲೆಗಳು ಏರಿಕೆ ಕಾಣುತ್ತಿವೆ. ಇಂಧನ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಅಕ್ರಮಗಳೇ ಯುಪಿಎ ಸರ್ಕಾರದ ಸಾಧನೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರವಧಿಯಲ್ಲಿ ನದಿ ಜೋಡಣೆ, ರಸ್ತೆಗಳ ಅಭಿವೃದ್ಧಿಯಂಥ ಮಹತ್ವದ ಕಾರ್ಯ ಕೈಗೊಂಡಿತ್ತು. ಆದರೆ ಸದ್ಯದ ಯುಪಿಎ ಸರ್ಕಾರ ಲಕ್ಷ ಕೋಟಿ ರು. ಅಕ್ರಮಗಳನ್ನು ನಡೆಸುವಲ್ಲಿ ಸಾಧನೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
  ರಾಜ್ಯದ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಹೊಸತೇನಿಲ್ಲ. ಎಪಿಎಲ್ ಪಡಿತರದಾರರಿಗೆ ಆಹಾರಧಾನ್ಯ ಪೂರೈಕೆ ನಿಲುಗಡೆ ಮಾಡಿ ಬಿಪಿಎಲ್ ಪಡಿತರದಾರರಿಗೆ ನೀಡಲಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ಘೋಷಿಸಿತ್ತು. ಅದರಲ್ಲಿ ಮಸ್ಕಿ ಪಟ್ಟಣವೂ ಸೇರಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹೊಸ ತಾಲೂಕು ಕೇಂದ್ರ ಘೋಷಣೆಯ ವಿಚಾರ ಕೈಬಿಡಲಾಗಿದೆ ಎಂದು ದೂರಿದರು.
ಮೋದಿ ಪ್ರಧಾನಿಯಾಗಬೇಕಿದೆ: ದೇಶಕ್ಕೀಗ ನರೇಂದ್ರ ಮೋದಿಯವರಂಥ ಪ್ರಧಾನಿಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಗೆಲ್ಲಲು ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಜ್ಜಾಗಬೇಕಿದೆ ಎಂದು ಮನವಿ ಮಾಡಿದರು.
  ಬಿಜೆಪಿ ಮುಖಂಡ ಶಿವನಗೌಡ ಗೋರೆಬಾಳ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿಯದಂತೆ ಅದನ್ನು ಬಿ ಸ್ಕೀಂನಲ್ಲಿ ಅಳವಡಿಸಿ ಮಸ್ಕಿ, ಕನಕಗಿರಿ, ಕೊಪ್ಪಳ ಭಾಗದ ರೈತರಿಗೆ ನೀರೊದಗಿಸುವ ಪ್ರಯತ್ನವನ್ನು ಲಿಂಗಸ್ಗೂರು, ಮಸ್ಕಿ ಶಾಸಕರು ಹಾಗೂ ಕೊಪ್ಪಳ ಸಂಸದರು ಮಾಡಬೇಕೆಂದು ಒತ್ತಾಯಿಸಿದರು.
  ಮಸ್ಕಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ ಮಾತನಾಡಿದರು. ರಾಮಣ್ಣ ವಕೀಲ, ಜೈರುದ್ದೀನ್, ಶಂಕರ ಮ್ಯಾದಾರ, ಹನುಮೇಶ ವಾಲೆಕಾರ್, ಹನುಮೇಶ ನಾಯಕ, ಪ್ರಾಣೇಶ ದೇಶಪಾಂಡೆ, ಶರಣಪ್ಪ ವಕೀಲ, ಶಿವಪುತ್ರಪ್ಪ, ಶಂಕರಗೌಡ, ಬಾಲಪ್ಪ, ಕುಂಟೋಜಿ ಇತರರಿದ್ದರು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ನೇಮಕ: ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರು ರಾಜ್ಯ ಪರಿಷತ್ತಿನ ಸದಸ್ಯರನ್ನಾಗಿ ಶಂಕರಕುಮಾರ ಮೇದಾರ ಅವರನ್ನು ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ವಿವಿಧ ಬಿಜೆಪಿ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಿ ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.