ರಾಯಚೂರು

ಭೂ ಸಂತ್ರಸ್ತರ ಪರಿಹಾರಕ್ಕೆ ರೈತ ಸಂಘ ಆಗ್ರಹ

Published On :

ಲಿಂಗಸ್ಗೂರು: ತಾಲೂಕಿನ ಮಸ್ಕಿ ಹಳ್ಳಕ್ಕೆ ಸೇತುವೆ ನಿರ್ಮಿಸಲು ಭೂಮಿ ನೀಡಿದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಮಸ್ಕಿ ಹಳ್ಳದ ಸೇತುವೆ ನಿರ್ಮಿಸಲು ಭೂ ಸ್ವಾಧೀನ ಅಧಿನಿಯಮದಡಿ 2012ರ ಫೆಬ್ರವರಿಯಲ್ಲಿ 26 ಜನರಿಂದ ಭೂಸ್ವಾಧೀನ ಮಾಡಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ಅಂದಿನ ಸಹಾಯಕ ಆಯುಕ್ತರಾಗಿದ್ದ ಗೋವಿಂದರೆಡ್ಡಿ ಭರವಸೆ ನೀಡಿದ್ದರು. ಆದರೆ ಕೆಲ ಸಂತ್ರಸ್ತರಿಗೆ ಪ್ರತಿ ಚದರ್‌ಅಡಿಗೆ 259ರಿಂದ 1,199ರ ವರೆಗೆ ಪರಿಹಾರ ನೀಡಿ, ಇನ್ನುಳಿದವರಿಗೆ ಕೇವಲ 40 ಮಾತ್ರ ಪರಿಹಾರಧನ ಘೋಷಣೆ ಮಾಡಿರುವುದು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.
ಭೂಮಿ ಕಳೆದುಕೊಂಡ ಸಂತ್ರಸ್ತರು ಸೂರು ಇಲ್ಲದೆ ಹಾಗೂ ಸೂಕ್ತ ಪರಿಹಾರ ಇಲ್ಲದೆ ಪರದಾಡುವಂತಾಗಿದೆ. ತಾರತಮ್ಯ ನೀತಿಗೆ ಕಾರಣರಾದ ಎಂಜಿನೀಯರ್ ಗಿರೀಶ್ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಜೊತೆಗೆ ಭೂ ಸಂತ್ರಸ್ತರಿಗೆ ಸೂಕ್ತ ಪರಿಹಾರಧನ ಒದಗಿಸಬೇಕೆಂದು ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ ಮೇದಾರ, ತಾಲೂಕಾಧ್ಯಕ್ಷ ಬಸವರಾಜ ನಗನೂರ ಸೇರಿದಂತೆ ಇನ್ನಿತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಗಬ್ಬೂರು: ಪುರಾಣ ಮಂಗಲ ಮಹೋತ್ಸವ
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಗ್ರಾಮದ ಬಿಚ್ಚಾಲಿ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸ ಅಂಗವಾಗಿ ಆಯೋಜಿಸಿದ್ದ ಶ್ರೀಗುರುಮಹಾಂತೇಶ್ವರ ಪುರಾಣ ಮಂಗಲ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ವೇಳೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀರಾಚೋಟಿ ವೀರಶಿವಾಚಾರ್ಯರು, ಗ್ರಾಮದ ಬೂದಿಬಸವೇಶ್ವರ ಮಠ ಹಾಗೂ ಬಿಚ್ಚಾಲಿ ಮಠವು ಧಾರ್ಮಿಕ ಕಾರ್ಯಗಳ ಮೂಲಕ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಂತಸದ ಸಂಗತಿ ಎಂದರು.  ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ 1008 ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. 1008 ಕುಂಭೋತ್ಸವ ಮತ್ತು ಸುಮಂಗಲಿಯರ ಕಳಸದೊಂದಿಗೆ ಆನೆ ಅಂಬಾರಿಯೊಂದಿಗೆ ಬೆಳ್ಳಿರಥ ಮೆರವಣಿಗೆಯು ಬೂದಿಬಸವೇಶ್ವರ ಮಠದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿತು.
ಅಧ್ಯಕ್ಷತೆಯನ್ನ ಬೂದಿಬಸವೇಶ್ವರ ಶಿವಾಚಾರ್ಯರು ವಹಿಸಿದ್ದರು. ಶಾಂತಮಲ್ಲ ಶಿವಾಚಾರ್ಯರು, ಸಂಗಮೇಶ ಮರಿದೇವರು, ಪಂಚಾಕ್ಷರಿ ಸ್ವಾಮೀಜಿ, ಶಾಸಕ ವೆಂಕಟೇಶ ನಾಯಕ, ತಿಪ್ಪರಾಜ ಹವಾಲ್ದಾರ್ ಸೇರಿ ಅನೇಕರಿದ್ದರು. ಪುರಾಣ ಮಂಗಳ ಮಹೋತ್ಸವದಲ್ಲಿ ಗ್ರಾಮ ಸೇರಿ ಸುತ್ತಲಿನ ವಿವಿಧ ಹಳ್ಳಿಗಳ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ರಾಯಚೂರು: ಮುಂಗಾರು ಹಂಗಾಮಿಗಾಗಿ ಕೃಷಿ ಪ್ರಶಸ್ತಿ(ಬೆಳೆ ಸ್ಪರ್ಧೆ)ಗಾಗಿ ರಾಜ್ಯಮಟ್ಟ, ಜಿಲ್ಲಾಮಟ್ಟ ಹಾಗೂ ತಾಲೂಕಾ ಮಟ್ಟಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮುಂಗಾರು ಹಂಗಾಮಿಗಾಗಿ ತೊಗರಿ ಬೆಳೆ ಹಾಗೂ ಹಿಂಗಾರಿಗಾಗಿ ಹಿಂಗಾರಿ ಜೋಳ ಬೆಳೆಯನ್ನು ಆಯ್ಕೆ ಮಾಡಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ರೈತರು ಕನಿಷ್ಠ 1 ಎಕರೆ ಕ್ಷೇತ್ರ ಹೊಂದಿರಬೇಕು. ಅರ್ಜಿಯೊಂದಿಗೆ ಭೂಮಾಲೀಕತ್ವದ ಪತ್ರ(ಪಹಣಿ) ಹಾಗೂ ನಿಗದಿಪಡಿಸಿದ ಪ್ರವೇಶ ಶುಲ್ಕ ರಾಜ್ಯ ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ 300, ಪರಿಶಿಷ್ಟ ಜಾತಿ, ಪಂಗಡ ರೈತರಿಗೆ 75, ಜಿಲ್ಲಾ ಮಟ್ಟಕ್ಕೆ ಸಾಮಾನ್ಯ ರೈತರಿಗೆ 150, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ 40 ಹಾಗೂ ತಾಲೂಕು ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ 100, ಪರಿಶಿಷ್ಟ ಜಾತಿ, ಪಂಗಡ ರೈತರಿಗೆ 25 ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಸೆ.30ರಂದು ಕಡೆಯ ದಿನವಾಗಿದೆ. ಹಿಂಗಾರು ಹಂಗಾಮಿಗೆ ನ.30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆಯಬಹುದೆಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.