ಏಡ್ಸ್ ಪೀಡಿತರನ್ನು ಆದರದಿಂದ ಕಾಣಿ: ನ್ಯಾ.ಶಶಿಧರ ಸಲಹೆ
ಸಿಂಧನೂರು: ಎಚ್ಐವಿ ಸೋಂಕಿತರು ಹಾಗೂ ಏಡ್ಸ್ ಪೀಡಿತರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆರ್.ವೈ. ಶಶಿಧರ ಕರೆ ನೀಡಿದರು. ನಗರದ ನ್ಯಾಯಾಲಯದಲ್ಲಿ ಎಚ್ಐವಿ ಏಡ್ಸ್ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಮಾತನಾಡಿ, ಏಡ್ಸ್ ನಿಯಂತ್ರಣ ಇಲಾಖೆಯನ್ನು ಸರ್ಕಾರ ಹೊಸದಾಗಿ ಆರಂಭಿಸುತ್ತಿದೆ. ಕಳೆದ ಜನವರಿಯಿಂದ ಈವರೆಗೆ ತಾಲೂಕಿನಲ್ಲಿ 724 ಪುರುಷರಿಗೆ ಐಸಿಟಿಸಿ ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 94 ಏಡ್ಸ್ ಬಾಧಿತರು ಕಂಡುಬಂದಿದ್ದಾರೆ. ಅದರಲ್ಲಿ 14 ವರ್ಷದೊಳಗಿನ 13 ಮಕ್ಕಳಿಗೆ ಏಡ್ಸ್ ಇರುವುದು ಭಯವನ್ನುಂಟು ಮಾಡಿದೆ. 664 ಮಹಿಳೆಯರಲ್ಲಿ 90 ಜನರಿಗೆ ಏಡ್ಸ್ ಇದೆ. ಅದರಲ್ಲಿ 9 ಹೆಣ್ಣುಮಕ್ಕಳಿಗೆ ಏಡ್ಸ್ ಇರುವುದು ಕಂಡು ಬಂದಿದೆ. ಸರ್ಕಾರದ ಕಾಳಜಿಯೊಂದಿಗೆ ಜನರಲ್ಲಿ ಬದಲಾವಣೆಯು ಅವಶ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಎಸ್.ರಾಯಣ್ಣವರ, ಸಹಾಯಕ ಸರ್ಕಾರಿ ಅಭಿಯೋಜ ಕರಾದ ಲಕ್ಷ್ಮಿದೇವಿ ಪಾಟೀಲ್, ಶೇಖರಪ್ಪ ಶಾಲಿಗನೂರು, ಹಿರಿಯ ನ್ಯಾಯವಾದಿ ಟಿ.ರಾಜಶೇಖರಯ್ಯ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ ವಹಿಸಿದ್ದರು. ಕಾರ್ಯಕ್ರಮವನ್ನು ನಿರುಪಾದೆಪ್ಪ ಗುಡಿಹಾಳ ವಕೀಲರು ನಿರೂಪಿಸಿದರು.
ಶರನ್ನವರಾತ್ರಿ ಅದ್ಧೂರಿ ಆಚರಣೆಗೆ ನಿರ್ಧಾರ
ಸಿಂಧನೂರು: ತಾಲೂಕಿನ ಸುಕ್ಷೇತ್ರ ಅಂಬಾಮಠದಲ್ಲಿ ಶರನ್ನವರಾತ್ರೋತ್ಸವವನ್ನು ಅ.5 ರಿಂದ 15 ರವರೆಗೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಲಿಂಗಸ್ಗೂರು ಉಪವಿಭಾಗದ ಸಹಾಯಕ ಆಯುಕ್ತ ಟಿ.ಯೋಗೀಶ ಹೇಳಿದರು. ತಾಪಂ ಸಭಾಂಗಣದಲ್ಲಿ ಅಂಬಾಮಠದ ಸಮಿತಿಯ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನವರಾತ್ರಿ ಅಂಗವಾಗಿ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮ, ವಾಹನೋತ್ಸವ ಜರುಗಲಿವೆ. ಭಕ್ತರ ಅನುಕೂಲಕ್ಕಾಗಿ ವೆಂಕಟೇಶ್ವರ ಕ್ಯಾಂಪ್ನಿಂದ ಅಂಬಾಮಠದವರಿಗಿನ 10 ಕಿಮೀ ರಸ್ತೆ ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೆ ಸೂಚಿಸಿದ್ದೇನೆ. ಕುಡಿವ ನೀರು, ಶೌಚಾಲಯ, ದಾಸೋಹದ ವ್ಯವಸ್ಥೆ ಕಲ್ಪಿಸಲಾಗುವುದು. ದಾಸೋಹ ಮಂಟಪ ನಿರ್ಮಿಸಲಾಗಿದೆ ಎಂದರು. ಆರೋಗ್ಯ, ಪೊಲೀಸ್, ತಾಲೂಕಮಟ್ಟದ ಅಧಿಕಾರಿಗಳನ್ನು ಉತ್ಸವದ ಯಶಸ್ವಿಗೆ ವಿವಿಧ ಜವಾಬ್ದಾರಿ ವಹಿಸಲಾಗಿದೆ. ದೇವಸ್ಥಾನ ಸಮಿತಿ ಸದಸ್ಯರು ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದರು. ತಾಪಂ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ ಹುಡಾ, ಗ್ರಾಮೀಣ ಪಿಎಸ್ಐ ಎಸ್.ಎಂ. ಪಾಟೀಲ್, ಎಇಇ ನಾಗರಾಜ, ತಾಲೂಕು ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

