ಗುರುಗುಂಟಾದಲ್ಲಿ ದಾಳಿ; ರು 29.71ಲಕ್ಷ ಅಕ್ರಮ ಹಣ ಪತ್ತೆ
ರಾಯಚೂರು: ಲಿಂಗಸ್ಗೂರು ತಾಲೂಕಿನ ಗುರಗುಂಟಾ ಗ್ರಾಮದಲ್ಲಿ ಚುನಾವಣಾಧಿಕಾರಿಗಳು ನಡೆಸಿದ ದಾಳಿ ವೇಳೆ ಎರಡು ಮನೆಗಳಲ್ಲಿ ಒಟ್ಟು ರು 29.71 ಲಕ್ಷ ಪತ್ತೆಯಾಗಿದೆ. ಗುರುಗುಂಟಾ ಗ್ರಾಮದ ನಿವೃತ್ತ ಸರ್ಕಾರಿ ಅಧಿಕಾರಿ ಅಮರಪ್ಪ ನಾಯಕ ಎಂಬುವವರ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಮನೆಯಲ್ಲಿ ರು 2,08,520 ದಾಖಲೆಯಿಲ್ಲದ ಹಣ ಪತ್ತೆಯಾಗಿದೆ. ಹಾಗೆಯೇ ಆ ಮನೆಯಲ್ಲಿ ಬಿಜೆಪಿ ಪ್ರಚಾರ ಸಾಮಗ್ರಿ ಮತ್ತು ಮತದಾರರ ಪಟ್ಟಿ ದೊರೆತಿವೆ. ನಂತರ ಅದೇ ಗ್ರಾಮದ ಶ್ರೀನಿವಾಸ ನಾಯಕ ಎಂಬುವವರ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಮನೆಯಲ್ಲಿ ದಾಖಲೆಯಿಲ್ಲದೇ ಸಂಗ್ರಹಿಸಿಟ್ಟಿದ್ದ ರು 27,62,920 ಹಣ ದೊರೆತಿದೆ. ಇವರು ಕಾಂಗ್ರೆಸ್ ಮುಖಂಡ ರಾಜಾ ಅಮರೇಶ್ವರ ನಾಯಕ ಅವರ ಸಹೋದರ ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್ಗೆ ಈ ಅಕ್ರಮ ಹಣ ಸಂಬಂಧಿಸಿದ್ದೇ ಅಥವಾ ಅಲ್ಲವೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಈ ಅಕ್ರಮ ಹಣ ಪತ್ತೆ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದು ತನಿಖೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಕಾರೊಂದರಲ್ಲಿ ಗುರುಗುಂಟಾ ಗ್ರಾಮದ ಬಳಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವೇಳೆ ತಡೆದ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಕಾರಿನಲ್ಲಿದ್ದ ದಾಖಲೆಯಿಲ್ಲದ ರು 1.60 ಲಕ್ಷ ವಶಕ್ಕೆ ಪಡೆದಿದ್ದಾರೆ.
ಬಸ್ ವ್ಯತ್ಯಯ ಸಾಧ್ಯತೆ
ರಾಯಚೂರು: ಚುನಾವಣೆಯಲ್ಲಿ ಜಿಲ್ಲಾಡಳಿತ ಈಶಾನ್ಯ ಸಾರಿಗೆ ಸಂಸ್ಥೆಯ 177 ಬಸ್ಗಳನ್ನು ಪಡೆಯಲಿದ್ದು, ಇದರಿಂದ ಏ.16 ಮತ್ತು ಏ.17ರಂದು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಈಗಾಗಲೇ ಒಟ್ಟು 177 ಬಸ್ಗಳನ್ನು ಒದಗಿಸಲು ಮನವಿ ಮಾಡಿದ್ದು, ರಾಯಚೂರು ಒಂದನೇ ಘಟಕದಿಂದ 22, ಎರಡನೇ ಘಟಕದ 28, ಮಾನವಿ ಡಿಪೋ 21, ಸಿಂಧನೂರು- 26, ಲಿಂಗಸ್ಗೂರು- 30, ಮಸ್ಕಿ- 27, ದೇವದುರ್ಗ ಘಟಕದಿಂದ 20 ಬಸ್ಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಲಾಗುತ್ತಿದೆ. ಇದಲ್ಲದೆ ಜಿಲ್ಲಾ ಪೊಲೀಸ್ ಇಲಾಖೆ ಸಹ 3 ಬಸ್ಗಳನ್ನು ಭದ್ರತಾ ಸಿಬ್ಬಂದಿಯನ್ನು ಚುನಾವಣೆ ಕಾರ್ಯಗಳಿಗೆ ಕರೆದೊಯ್ಯಲು ಕೇಳಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

