ರಾಯಚೂರು

ಮತ ಬರಹ ಇಂದು

Published On :

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದಾದ್ಯಂತ ಏ.17ರಂದು ನಡೆಯಲಿರುವ ಮತದಾನ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿ ಬುಧವಾರ ಬೆಳಗ್ಗೆ ಆಯಾ ತಾಲೂಕು ಕೇಂದ್ರಗಳಿಂದ ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು. ನಗರದ ಎಲ್ವಿಡಿ ಕಾಲೇಜಿನಿಂದ ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನೇಮಿಸಿದ ಸಿಬ್ಬಂದಿ ಮತ್ತು ಎಸ್ ಆರ್ಪಿಎಸ್ ವಾಣಿಜ್ಯ ಕಾಲೇಜಿನಿಂದ ರಾಯಚೂರು ನಗರ ಕ್ಷೇತ್ರದ ಸಿಬ್ಬಂದಿ ತಮಗೆ ಸೂಚಿಸಿದ ಮತಗಟ್ಟೆಗಳಿಗೆ ತೆರಳಿದರು.


ಮತದಾರರು
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಒಟ್ಟು 16,61,362 ಮತದಾರರಿದ್ದಾರೆ. ಇದರಲ್ಲಿ 8,35,791 ಪುರುಷ, 8,25,261 ಮಹಿಳಾ ಹಾಗೂ 310 ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ.


ಮತಗಟ್ಟೆಗಳು
ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಗೆ ಮತದಾನ ಕಾರ್ಯಕ್ಕಾಗಿ 8 ವಿಧಾನಸಭೆ ಕ್ಷೇತ್ರಗಳಲ್ಲಿ 1,878 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ 1,566 ಮತಗಟ್ಟೆಗಳಿರಲಿದ್ದು, 14,10,134 ಮತದಾರರಿದ್ದಾರೆ. ಜಿಲ್ಲೆಯಲ್ಲಿ 7,07,020 ಪುರುಷ, 7,02,825 ಮಹಿಳಾ ಮತ್ತು 289 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.


'ಕ್ರಿಟಿಕಲ್' ಮತಗಟ್ಟೆಗಳು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಶೇ.75ಕ್ಕಿಂತ ಹೆಚ್ಚು ಮತಗಳು ಬಂದಂಥ ಮತಗಟ್ಟೆಗಳನ್ನು ಗುರುತಿಸಿದ್ದು, ಅವುಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಕರೆಯಲಾಗುತ್ತಿದೆ. ಜಿಲ್ಲೆಯಲ್ಲಿ ಇಂಥ 32 ಮತಗಟ್ಟೆಗಳಿದ್ದು, ಅಲ್ಲಿ ಹೆಚ್ಚಿನ ಬಿಗಿಭದ್ರತೆ ಒದಗಿಸಿ, ಅಕ್ರಮ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.


ಮತದಾನದ ಸಮಯ
ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಬೆ.7ರಿಂದ ಸಂಜೆ 6ರವರೆಗೆ ನಡೆಯಲಿದೆ. ಈಗಾಗಲೇ ರಾಯಚೂರು ನಗರ ಸೇರಿದಂತೆ ಕ್ಷೇತ್ರದ ವಿವಿಧ ತಾಲೂಕು ಕೇಂದ್ರಗಳಿಂದ ಮತಗಟ್ಟೆ ಸಿಬ್ಬಂದಿ ಅವರಿಗೆ ಸೂಚಿಸಿದ ಮತಗಟ್ಟೆಗಳಿಗೆ ತೆರಳಿದ್ದು, 11 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ನೆರವಾಗಲಿದ್ದಾರೆ.


ಗುರುತಿನ ಚೀಟಿ
ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆ ಮುಗಿದಿದೆ. ಶೇ. 98.08ರಷ್ಟು ಮತದಾರರಿಗೆ ಗುರುತಿನ ಚೀಟಿ ನೀಡಲಾಗಿದೆ. ಅತೀ ಕಡಿಮೆ ರಾಯಚೂರು ನಗರ ಕ್ಷೇತ್ರದಲ್ಲಿ ಶೇ.93.78ರಷ್ಟು ಗುರುತಿನ ಚೀಟಿ ವಿತರಿಸಲಾಗಿದೆ.


ಗುರುತಿಗೆ ಪರ್ಯಾಯ ದಾಖಲೆಗಳು
ಚುನಾವಣೆ ಆಯೋಗದ ಒದಗಿಸಿರುವ ಭಾವಚಿತ್ರವಿರುವ ಗುರುತಿನ ಚೀಟಿಯಿಲ್ಲದಿದ್ದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಪಾಸ್ ಪೋರ್ಟ್, ವಾಹನ ಚಾಲನಾ ಪರವಾನಗಿ ಪತ್ರ, ವಿವಿಧ ಸಂಸ್ಥೆಗಳು ನೀಡುವ ಗುರುತಿನ ಚೀಟಿ, ಪಾನ್ ಕಾರ್ಡು, ಆಧಾರ್ ಕಾರ್ಡು, ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಸೇರಿ 11 ದಾಖಲೆಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿ ಪ್ರದರ್ಶಿಸಿ ಮತದಾನ ಮಾಡಬಹುದಾಗಿದೆ.

    
ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದ ಮೂಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದ್ದರಿಂದ ಮತದಾನ ಬಹಿಷ್ಕಾರದ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಗ್ರಾಮದ ವೀರೇಶ, ಶಾಸಕರು ಭರವಸೆ ನೀಡಿದ್ದಾರೆಂದು ಹೇಳಿದ್ದಾರೆ.



ಸಿಬ್ಬಂದಿ ನಿಯೋಜನೆ
ಒಟ್ಟು 1,878 ಮತಗಟ್ಟೆಗಳಿಗೆ 1,878 ಪಿಆರ್ಒಗಳು, 1,878 ಎಪಿಆರ್ಒ, 1878 ಸಂಖ್ಯೆಯ 2ನೇ ಹಂತದ ಪಿಆರ್ಒಗಳು, ಅಷ್ಟೇ ಸಂಖ್ಯೆಯ ಮೂರನೇ ಹಂತದ ಪಿಆರ್ಒಗಳನ್ನು ನೇಮಿಸಿದ್ದು, ಹೀಗೆ ಒಟ್ಟು 7,512 ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದ್ದು, 1,500 ಸಿಬ್ಬಂದಿಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಹೆಚ್ಚುವರಿಯಾಗಿ ಕಾಯ್ದಿರಿಸಿಕೊಳ್ಳಲಾಗಿದೆ. ಒಟ್ಟು 9,012 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.


ಅಧಿಕಾರಿಗಳು
ಚುನಾವಣೆ ಕಾರ್ಯ ಸರಾಗವಾಗಿ ನಿರ್ವಹಿಸುವಂತಾಗಲು ವಿವಿಧ ಹಂತದ ಅಧಿಕಾರಿಗಳನ್ನು ಉಸ್ತುವಾರಿಗೆ ನಿಯೋಜಿಸಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ 15 ನೋಡಲ್ ಅಧಿಕಾರಿಗಳು, 119 ಸೆಕ್ಟರ್ ಅಧಿಕಾರಿಗಳು, 22 ಸಂಚಾರಿ ಜಾಗೃತ ದಳ, 25 ಸ್ಟ್ಯಾಟಿಕ್ ಸರ್ವೇಲ್ಯಾನ್ಸ್ ಟೀಂ, 7 ವಿಡಿಯೋ ಚಿತ್ರೀಕರಣ ತಂಡಗಳು ಸೇರಿದಂತೆ ಒಟ್ಟು 222 ತಂಡಗಳು ಕಾರ್ಯನಿರ್ವಹಿಸುತ್ತಿವೆ.


ನೇರ ಪ್ರಸಾರ, ವಿಡಿಯೋ ಚಿತ್ರೀಕರಣ
ನಗರದಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 6 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಆಯೋಗದ ವೆಬ್ಸೈಟ್ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ನಗರದ ಅರಬ್ ಮೊಹಲ್ಲಾ, ಟಿಪ್ಪುಸುಲ್ತಾನ್ ಪ್ರದೇಶ, ಅಂದ್ರೂನ್ ಕಿಲ್ಲಾ, ಜಹೀರಾಬಾದ್ ಬಡಾವಣೆ ಮತಗಟ್ಟೆ, ಮಾನವಿಯ ಬಸವಣ್ಣ ಕ್ಯಾಂಪ್ ಹಾಗೂ ದೇವದುರ್ಗದ ಜಾಲಹಳ್ಳಿಯ ಮತಗಟ್ಟೆಯಲ್ಲಿನ ಮತದಾನ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಬಹುದೆಂದು ಜಿಲ್ಲಾಡಳಿತ ಹೇಳಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 82 ಕಡೆ ವಿಡಿಯೋ ಚಿತ್ರೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 784 ಜನ ಮೈಕ್ರೋ ಅಬ್ಸರ್ವರ್ಸ್ ಕಾರ್ಯನಿರ್ವಹಿಸಲಿದ್ದಾರೆ.



ನೂರಾರು ವಾಹನಗಳು
ಚುನಾವಣೆಗೆ ನಿಯೋಜಿತ ಸಿಬ್ಬಂದಿಯನ್ನು ಅವರಿಗೆ ಸೂಚಿಸಿದ ಮತಗಟ್ಟೆಗಳಿಗೆ ಕರೆದೊಯ್ಯಲು ಸಾರಿಗೆ ಇಲಾಖೆಯಿಂದ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಒಟ್ಟು 1,566 ಮತಗಟ್ಟೆಗಳಿಗೆ 9,012 ಸಿಬ್ಬಂದಿಯನ್ನು ಕರೆದೊಯ್ಯಲು 187 ಸಾರಿಗೆ ಸಂಸ್ಥೆಯ ಬಸ್, 41 ಮಿನಿ ಬಸ್, 90 ಮ್ಯಾಕ್ಸಿ ಕ್ಯಾಬ್, 51 ಜೀಪು ಸೇರಿದಂತೆ ಒಟ್ಟು 360 ವಾಹನ ಪಡೆಯಲಾಗಿದೆ.


ಮತಗಟ್ಟೆಗಳ ವಿವರ(ಕ್ಷೇತ್ರವಾರು)


ಕ್ಷೇತ್ರ      ಒಟ್ಟು     ಸೂಕ್ಷ್ಮ     ಅತೀ ಸೂಕ್ಷ್ಮ     ಸಾಮಾನ್ಯ
ಚ ರಾ. ನಗರ     194     66     44     84
ಚ ರಾ. ಗ್ರಾಮೀಣ     226     75     49     102
ಚ ಮಾನವಿ     235     84     49     102
ಚ ದೇವದುರ್ಗ    233     80     48     105  
ಚ ಲಿಂಗಸ್ಗೂರು     237     83     49     105
ಚ ಯಾದಗಿರಿ     236     23     54     159
ಚ ಶಹಾಪುರ     230     24     34     172
ಚ ಸುರಪುರ     287     89     103     95
ಒಟ್ಟು     1878     524     430     924

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.