ರಾಯಚೂರು

ಅಕಾಲಿಕ ಆಲಿಕಲ್ಲು ಮಳೆ ಮಳೆ ಹಾನಿಗೆ ಪರಿಹಾರ: ಭರವಸೆ

Published On :

ಕ.ಪ್ರ. ವಾರ್ತೆ ್ಣ ಲಿಂಗಸ್ಗೂರು ್ಣ ಏ.19
ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಅಪಾರ ಪ್ರಮಾಣದ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದ್ದು, ಶಾಸಕ ಮಾನಪ್ಪ ವಜ್ಜಲ್ ಹಾನಿಗೀಡಾದ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಪರಿಹಾರ ಒದಗಿಸುವ ಭರವಸೆ ನೀಡಿದರು.
ತಾಲೂಕಿನ ಹನುಮಗುಡ್ಡ ಸೇರಿದಂತೆ ಅಕಾಲಿಕ ಮಳೆಗೆ ಹಾನಿ ಸಂಭವಿಸಿದ ಗ್ರಾಮಗಳಿಗೆ ಭೇಟಿ ನೀಡಿ ಮನೆ, ಬೆಳೆ ಪರಿಶೀಲಿಸಿದರು.
ಅಕಾಲಿಕ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಬಿತ್ತನೆ ಮಾಡಿದ ಬತ್ತ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಕೃಷಿ ಉತ್ಪನ್ನ ಬೆಳೆಗಳು ಹಾನಿಗೀಡಾಗಿದ್ದು, ಮನೆಗಳಿಗೆ ಹಾಕಿದ ಶೀಟುಗಳು ಗಾಳಿಗೆ ಕಿತ್ತಿ ಹೋಗಿವೆ. ವಿದ್ಯುತ್ ಕಂಬಗಳು ಹಾಗೂ ಗಿಡಮರಗಳು ಉರುಳಿ ಬಿದ್ದಿವೆ. ಇದರಿಂದ ರೈತರು ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿವ ನೀರು ಸೇರಿದಂತೆ ದೈನಂದಿನ ಬದುಕು ಸಾಗಿಸಲು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕರ ಮುಂದೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ವರದಿ ಸಲ್ಲಿಸಲು ಸೂಚನೆ: ಗ್ರಾಮಸ್ಥರ ಅಳಲು ಆಲಿಸಿದ ಶಾಸಕರು ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ ಶಿಲ್ಪಾ, ಕಂದಾಯ ನಿರೀಕ್ಷಕ ಸಿಂಗ್, ಗ್ರಾಮ ಲೆಕ್ಕಾಧಿಕಾರಿ ಶಿವಪ್ಪ ರಾಠೋಡ್ ಅವರಿಗೆ ಹಾನಿಗೀಡಾದ ಮನೆಗಳ ಸಮಗ್ರ ಸಮೀಕ್ಷಾ ಕಾರ್ಯ ಕೈಗೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಆನೆಹೊಸೂರು, ಹೊಸೂರು, ಖೈರವಾಡಗಿ, ಬೊಮ್ಮನಾಳ, ಹನುಮಗುಡ್ಡ, ಸಜ್ಜಲಗುಡ್ಡ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ಮನೆ-ಬೆಳೆ ಹಾನಿಗೀಡಾಗಿ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನೆಗಳ ಹಾನಿ ಕುರಿತು ಸಮಗ್ರ ಸಮೀಕ್ಷೆ ನಡೆಸಿ ವರದಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಾರದೊಳಗೆ ಸಮಗ್ರ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸಲಾಗುವುದು.
ವಿದ್ಯುತ್ ಪೂರೈಕೆಗೆ ಸೂಚನೆ: ಅಕಾಲಿಕ ಮಳೆ ಹಾಗೂ ಗಾಳಿಗೆ ಸುಮಾರು 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವ ಕುರಿತು ತಿಳಿದು ಬಂದಿದೆ. ಆಯಾ ಗ್ರಾಮಗಳಲ್ಲಿ ಕುಡಿವ ನೀರಿನ ವ್ಯವಸ್ಥೆಗೆ ಬೇಕಾದ ಅಗತ್ಯ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡು ನಂತರ ಹೊಸ ಕಂಬ ಹಾಕುವಂತೆ ಜೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ. ಅಲ್ಲದೆ ಬೆಳೆ ಹಾನಿಗೀಡಾದ ಕುರಿತು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮೀಕ್ಷಾ ಕಾರ್ಯ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಲಾಗುವುದು.
ಕಳೆದ ತಿಂಗಳು ದೇವರಭೂಪೂರ ಗ್ರಾಪಂ ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಮಳೆಗೆ ಬೆಳೆ ಹಾನಿಗೆ ಪರಿಹಾರ ಒದಗಿಸಲು ಚುನಾವಣೆ ಹಾಗೂ ನೀತಿ ಸಂಹಿತೆ ಅಡ್ಡಿಯಾದ ಪ್ರಯುಕ್ತ ಅಧಿಕಾರಿಗಳು ಪರಿಹಾರ ನೀಡಲು ಸಾಧ್ಯವಾಗಿಲ್ಲ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜೆಡಿಎಸ್ ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಗುಂಡಪ್ಪ ಕಾಚಾಪೂರ, ವೀರನಗೌಡ ಲೆಕ್ಕಿಹಾಳ, ಶರಣಪ್ಪ ಗೋನವಾರ, ಪಿಡಿಒ ಶಿಲ್ಪಾ, ಕಂದಾಯ ನಿರೀಕ್ಷಕ ಸಿಂಗ್, ಗ್ರಾಮ ಲೆಕ್ಕಿಗ ಶವಪ್ಪ ರಾಠೋಡ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.